ಮಂಗಳವಾರ, ಆಗಸ್ಟ್ 16, 2022
27 °C

ಕಳಸೇಶ್ವರ ರಥೋತ್ಸವ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಳಸ: ಇಲ್ಲಿನ ಗ್ರಾಮ ದೇವರಾದ ಕಳಸೇಶ್ವರನ ರಥೋತ್ಸವ ಮಂಗಳವಾರ ಸಂಭ್ರಮದಿಂದ ನೆರವೇರಿತು.

ಕೊರೊನಾ ಸಂಕಟದ ನಂತರ ತಾಲ್ಲೂಕಿನಲ್ಲಿ ಮೊದಲ ಪೂರ್ಣ ಪ್ರಮಾಣದ ರಥೋತ್ಸವ ನಡೆಯುವ ಬಗ್ಗೆ ಕೊನೆ ಕ್ಷಣದಲ್ಲಿ ತೀರ್ಮಾನ ಆದ ಕಾರಣ ಆಹ್ವಾನ ಪತ್ರಿಕೆ ಮುದ್ರಿಸಿರಲಿಲ್ಲ. ಆದರೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಕಳೆದ ವಾರ ದೇವಸ್ಥಾನದಲ್ಲಿ ಧ್ವಜಾರೋಹಣ, ಗಣಪತಿ ಪೂಜೆ, ಅಂಕುರಾರ್ಪಣೆ ಮತ್ತಿತರ ವಿಧಿಗಳು ಆರಂಭವಾಗಿತ್ತು. ಹಸಿರುವಾಣಿ ಸಮ ರ್ಪಣೆಯೂ ಸೋಮವಾರ ನಡೆದಿತ್ತು. ವಿದ್ಯುತ್‍ದೀಪಗಳಿಂದ ಅಲಂಕೃತವಾಗಿದ್ದ ದೇವಸ್ಥಾನದಲ್ಲಿ ಸೋಮವಾರದಿಂದಲೇ ಹಬ್ಬದ ಸಡಗರ ಏರ್ಪಟ್ಟಿತ್ತು.

ವಿಶೇಷ ಅಲಂಕೃತ ಕಳಸೇಶ್ವರನಿಗೆ ಮಂಗಳವಾರ ಬೆಳಿಗ್ಗೆ ವಿಶೇಷ ಪೂಜೆ, ಅಭಿಷೇಕ ನೆರವೇರಿಸಿದ ನಂತರ ದೇವಸ್ಥಾನದ ಆವರಣದಲ್ಲಿ ದೇವರ ಉತ್ಸವ ಮೂರ್ತಿಯ ಪ್ರದಕ್ಷಿಣೆ ನಡೆಯಿತು.

ಪತಾಕೆಗಳು, ತೋರಣ, ಧ್ವಜಗಳ ಮುನ್ನುಡಿಯಲ್ಲಿ ಲಯಬದ್ಧವಾದ ವಾದ್ಯದ ಹಿಮ್ಮೇಳದಲ್ಲಿ ಉತ್ಸವ ನಡೆಯಿತು. ಭಕ್ತರು ಉತ್ಸವ ಮೂರ್ತಿ ಜೊತೆಗೆ ಪ್ರದಕ್ಷಿಣೆ ಮಾಡಿ ತಮ್ಮ ಶ್ರದ್ಧೆ ತೋರಿದರು.

ಆನಂತರ ರಥಬೀದಿಯಲ್ಲಿ ಸಜ್ಜಾಗಿದ್ದ ರಥಕ್ಕೆ ದೇವರ ಆರೋಹಣ ವಿಧಿಯು ನಡೆಯಿತು.

ಭಕ್ತರು ತಾವು ಬೆಳೆದ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಮುಂತಾದ ಬೆಳೆಗಳನ್ನು ರಥದೆಡೆಗೆ ಎಸೆದು ಕಳಸೇಶ್ವರನ ಮೇಲಿನ ಭಕ್ತಿ ತೋರಿದರು. ಸಂಜೆ ರಥವನ್ನು ರಥಬೀದಿಯಲ್ಲಿ ಮಂಜಿನಕಟ್ಟೆವರೆಗೂ ಎಳೆದು ಮರಳಿ ದೇವಸ್ಥಾನದವರೆಗೆ ತರಲಾಯಿತು.

ಕಳೆದ ವರ್ಷಗಳಿಗೆ ಹೋಲಿಸಿದರೆ ಭಕ್ತರ ಸಂಖ್ಯೆ ತುಸು ಕಡಿಮೆ ಇತ್ತು. ಜಾತ್ರೆಯ ಅಂಗಡಿಗಳಲ್ಲಿ ವ್ಯಾಪಾರ ಕೂಡ ಮಂಕಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.