ಮಂಗಳವಾರ, ಜನವರಿ 31, 2023
27 °C

ಕಾಫಿನಾಡಿನ ಕಾವೇರಿ, ಸಜೀದಾಗೆ ‘ನೈಟಿಂಗೇಲ್‌’ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ನವದೆಹಲಿಯಲ್ಲಿ ಸೋಮವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ತರೀಕೆರೆ ತಾಲ್ಲೂಕಿನ ಲಕ್ಕವಳ್ಳಿ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ನಿರೀಕ್ಷಕಿ ಸಜೀದಾ ಬಾನು, ಚಿಕ್ಕಮಗಳೂರಿನ ನಿವೃತ್ತ ತಾಲ್ಲೂಕು ಆರೋಗ್ಯ ಮೇಲ್ವಿಚಾರಕಿ ಜಿ.ಎಸ್‌.ಕಾವೇರಿ ಅವರಿಗೆ 2021ನೇ ಸಾಲಿನ ‘ರಾಷ್ಟ್ರೀಯ ಫ್ಲಾರೆನ್ಸ್‌ ನೈಟಿಂಗೇಲ್‌’ ಪ್ರಶಸ್ತಿ ಪ್ರದಾನ ಮಾಡಿದರು. 

ಕಾವೇರಿ ಅವರು ಸುಬ್ರಾಯ ಭಟ್ಟ ಮತ್ತು ಸೀತಮ್ಮ ದಂಪತಿಯ ಪುತ್ರಿ. ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಮಲ್ಲಿಪಟ್ಟಣದಲ್ಲಿ1990ರಲ್ಲಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯಾಗಿ ವೃತ್ತಿ ಜೀವನ ಆರಂಭಿಸಿದರು. ಮೂಡಿಗೆರೆ ತಾಲ್ಲೂಕಿನ ಬಾಳೆಹೊಳೆ, ಎನ್‌.ಆರ್‌.ಪುರ ತಾಲ್ಲೂಕಿನ ಬಾಳೆಹೊನ್ನೂರಿನಲ್ಲಿ ಕಾರ್ಯನಿರ್ವಹಿಸಿದ್ದಾರೆ. ಚಿಕ್ಕಮಗಳೂರು ತಾಲ್ಲೂಕು ಆರೋಗ್ಯ ಮೇಲ್ವಿಚಾರಕಿಯಾಗಿ ಕಾರ್ಯನಿರ್ವಹಿಸಿ 2021ರಲ್ಲಿ ನಿವೃತ್ತರಾಗಿದ್ದಾರೆ. ತೇಗೂರಿನಲ್ಲಿ ನೆಲೆಸಿದ್ದಾರೆ. 

‘ಕಾಯಕ ನಿಷ್ಠೆ, ಪರಿಶ್ರಮ ಗುರುತಿಸಿ ಪ್ರಶಸ್ತಿ ನೀಡಿರುವುದು ಬಹಳ ಖುಷಿಯಾಗಿದೆ. ಸಹೋದ್ಯೋಗಿಗಳು ಬೆನ್ನುತಟ್ಟಿ ಪ್ರೋತ್ಸಾಹ ನೀಡಿದ್ದಾರೆ. ರೋಗಿಗಳ ಸೇವೆ ಮಾಡಿದ ತೃಪ್ತಿ ಇದೆ. 32 ವರ್ಷಗಳ ವೃತ್ತಿ ಜೀವನ ಸಾರ್ಥಕ ಭಾವ ಮೂಡಿಸಿದೆ’ ಎಂದು ಕಾವೇರಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಸಜೀದಾ ಅವರು ತರೀಕೆರೆಯ ಗುಲಾಂ ರಸೂಲ್‌ ಮತ್ತು ಖುತೇಜಾ ಬಾನು ದಂಪತಿ ಪುತ್ರಿ. 1986ರಲ್ಲಿ ಸೊಕ್ಕೆ ಗ್ರಾಮದಲ್ಲಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯಾಗಿ ವೃತ್ತಿ ಜೀವನ ಆರಂಭಿಸಿದರು. ಮುಂಡ್ರೆ, ಕೆಂಚಾಪುರದಲ್ಲಿ ಕಾರ್ಯನಿರ್ವಹಿಸಿ, ಪ್ರಸ್ತುತ ಲಕ್ಕವಳ್ಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 

‘ರೋಗಿಗಳ ಶುಶ್ರೂಷೆಯಲ್ಲಿ ಸಾರ್ಥಕತೆ ಕಂಡಿದ್ದೇನೆ. ಜನರ ಆರೋಗ್ಯ ಸಂಕಷ್ಟಗಳಿಗೆ ಹಗಲಿರುಳು ಸ್ಪಂದಿಸಿದ್ದೇನೆ. ಕಾರ್ಯನಿರ್ವಹಿಸಿರುವ ಊರುಗಳಲ್ಲಿ ಜನ ನೆನಪಿನಲ್ಲಿ ಇಟ್ಟುಕೊಂಡಿದ್ದಾರೆ. ಪ್ರಶಸ್ತಿ ನೀಡಿದ್ದು ಸಂತಸ ಮೂಡಿಸಿದೆ’ ಎಂದು ಸಜೀದಾ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು