ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡಿ ಬಿದ್ದು ಹಾಳಾಗಿರುವ ರಸ್ತೆ: ಕೆಮ್ಮಣ್ಣುಗುಂಡಿ ಪ್ರಯಾಣ ಹೈರಾಣ

Published 29 ಸೆಪ್ಟೆಂಬರ್ 2023, 6:36 IST
Last Updated 29 ಸೆಪ್ಟೆಂಬರ್ 2023, 6:36 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಕೆಮ್ಮಣ್ಣುಗುಂಡಿ ಪ್ರವಾಸ ಎಂದರೆ ಎಲ್ಲರಿಗೂ ಇಷ್ಟ. ಆದರೆ, ಅಲ್ಲಿಗೆ ಸಾಗುವ ದಾರಿಯೇ ಕಷ್ಟ. ಎರಡು ಕಿಲೋ ಮೀಟರ್‌ನಲ್ಲಿ ರಸ್ತೆಯೇ ಇಲ್ಲವಾಗಿದ್ದು, ಪ್ರವಾಸಿಗರ ಪ್ರಯಾಣ ಹೈರಾಣವಾಗಿದೆ.

ಬಳ್ಳಾವರ ದಾಟಿದರೆ ಕಿರಿದಾದರೆ ಡಾಂಬರ್ ರಸ್ತೆ ಇದೆ. ಈ ರಸ್ತೆಯಲ್ಲಿ ಒಂದು ವಾಹನ ಸರಾಗವಾಗಿ ಹೋಗಬಹುದು. ಎದುರಿನಿಂದ ದೊಡ್ಡ ಬಸ್‌ ಅಥವಾ ಲಾರಿ ಬಂದರೆ ರಸ್ತೆಯಿಂದ ಕೆಳಗಳಿಸಲು ಪರದಾಡಬೇಕು. ಮುಂದೆ ಸಾಗಿದರೆ ಕಾಂಕ್ರಿಟ್‌ ರಸ್ತೆ ಸಿಗುತ್ತದೆ. ಕಾಂಕ್ರಿಟ್ ರಸ್ತೆ ಕೊಂಚ ಅಗಲವಾಗಿವೆ. ಇತ್ತೀಚೆಗೆ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದ್ದು, ರಸ್ತೆ ಪಕ್ಕಕ್ಕೆ ಮಣು ಹಾಕಿ ಸಮ ಮಾಡಿಲ್ಲ. ಅಪ್ಪಿ–ತಪ್ಪಿ ಎದುರಿನಿಂದ ಬರುವ ವಾಹನಕ್ಕೆ ಜಾಗ ಬಿಡುವ ಪ್ರಯತ್ನದಲ್ಲಿ ಕಾಂಕ್ರಿಟ್ ರಸ್ತೆಯಿಂದ ಕೆಳಗಿಳಿದರೆ ಅಪಾಯ ಖಚಿತ.

ಈ ರಸ್ತೆಯಲ್ಲಿ ಮುಂದೆ ಸಾಗಿದರೆ ಹೆಬ್ಬೆ ಜಲಪಾತಕ್ಕೆ ಪ್ರವಾಸಿಗರನ್ನು ಜೀಪ್‌ಗಳಲ್ಲಿ ಕರೆದೊಯ್ಯುವ ಅರಣ್ಯ ಇಲಾಖೆ ಚೆಕ್‌ಪೋಸ್ಟ್ ಎದುರಾಗುತ್ತದೆ. ಅಲ್ಲಿಂದ ಎಡಕ್ಕೆ ತಿರುವು ಪಡೆದರೆ ತೋಟಗಾರಿಕೆ ಇಲಾಖೆಯ ರಾಜಭವನಕ್ಕೆ ತೆರಳುವ ರಸ್ತೆ ಇದೆ. ಈ ರಸ್ತೆಯಲ್ಲಿ ಸಾಗಿದರೆ ಲೋಕೋಪಯೋಗಿ ಇಲಾಖೆ ಪ್ರವಾಸಿ ಮಂದಿರ, ಅರಣ್ಯ ಇಲಾಖೆಯ ಜಂಗಲ್ ರೆಸಾರ್ಟ್‌(ಕೃಷ್ಣ ರಾಜೇಂದ್ರ ಹಿಲ್ ರೆಸಾರ್ಟ್‌), ಝಡ್ ಪಾಯಿಂಟ್‌ ವೀಕ್ಷಣಾ ಸ್ಥಳ, ಝಡ್ ಪಾಯಿಂಟ್ ಚಾರಣ ಆರಂಭಿಸುವ ಸ್ಥಳ, ಕೆಮ್ಮಣ್ಣುಗುಂಡಿ ಸೂರ್ಯಾಸ್ತ ಪಾಯಿಂಟ್‌ ತಲುಪಲು ಸುಮಾರು ಎರಡು ಕಿಲೋ ಮೀಟರ್ ಸಾಗಬೇಕು. ಈ ಸ್ಥಳಗಳಿಗೆ ತೆರಳಲು ವಾಹನಗಳಿಗೆ ದರ(ಕಾರುಗಳಿಗೆ ಕನಿಷ್ಠ ₹120) ಕೂಡ ನಿಗದಿ ಮಾಡಲಾಗಿದೆ. ಆದರೆ, ರಸ್ತೆ ಮಾತ್ರ ಇಲ್ಲ.

ಎಷ್ಟೊ ವರ್ಷಗಳ ಹಿಂದೆ ಮಾಡಿದ್ದ ಕಾಂಕ್ರಿಟ್‌ ರಸ್ತೆ ಸಂಪೂರ್ಣ ಹಾಳಾಗಿದ್ದು, ಮಂಡಿಯುದ್ದದ ಗುಂಡಿಗಳು ನಿರ್ಮಾಣವಾಗಿವೆ. ಕೊರಕಲುಗಳ ನಡುವೆ ವಾಹನ ಸಂಚಾರವೇ ದುಸ್ತರವಾಗಿದೆ. ಸಣ್ಣ ಕಾರುಗಳಲ್ಲಿ ಸಾಗುವ, ಅದರಲ್ಲೂ ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಪ್ರಯಾಣ ನರಕ ನೆನಪಿಸುತ್ತದೆ. ಸಂಜೆ ನಂತರ ಪ್ರಯಾಣ ಇನ್ನೂ ಕಠಿಣ, ಮಂಜು ಮುಸುಕಿನ ನಡುವೆ ಕಾಣದ ಹಾದಿಯಲ್ಲಿ ಗುಂಡಿಗಳ ನಡುವೆ ಸಿಲುಕಿ ಪ್ರವಾಸಿಗರು ನಿತ್ಯ ಪರದಾಡುತ್ತಿದ್ದಾರೆ.

ಕನಿಷ್ಠ ಜಲ್ಲಿಮಿಶ್ರಣ ಸುರಿದು ಗುಂಡಿ ಮುಚ್ಚುವ ಕೆಲಸವನ್ನೂ ಮಾಡಿಲ್ಲ. ದೂರದ ಊರುಗಳಿಂದ ಕೆಮ್ಮಣ್ಣುಗುಂಡಿಯ ಪ್ರಕೃತಿ ತಾಣಗಳನ್ನು ಸವಿಯಲು ಬರುವ ಜನ ಕೊರಕಲು ರಸ್ತೆಯಲ್ಲಿ ಸಿಲುಕಿ ನರಳುತ್ತಿದ್ದಾರೆ. 

‘ರಸ್ತೆ ನಿರ್ಮಾಣಕ್ಕೆ ಅರಣ್ಯ ಇಲಾಖೆಯಿಂದ ಯಾವುದೇ ತಡೆ ಇಲ್ಲ. ಆದರೆ, ರಸ್ತೆ ಅಗಲ ಮಾಡಲು ‌ಅವಕಾಶ ಇಲ್ಲ. ಈ ಹಿಂದೆ ಇದ್ದ ರಸ್ತೆಯನ್ನು ಅಭಿವೃದ್ಧಿಪಡಿಸಲು ನಮ್ಮ ಅಭ್ಯಂತರವಿಲ್ಲ ಎನ್ನುತ್ತಾರೆ’ ಅರಣ್ಯ ಇಲಾಖೆ ಅಧಿಕಾರಿಗಳು.

‌ಅಗಲಗೊಳಿಸುವ ಅಗತ್ಯವಿಲ್ಲ, ಈ ಹಿಂದೆ ಇದ್ದ ಕಾಂಕ್ರಿಟ್ ರಸ್ತೆಯಷ್ಟೆ ಜಾಗದಲ್ಲಿ ರಸ್ತೆ ಮರು ನಿರ್ಮಾಣ ಮಾಡಿದರೆ ಈ ಪರದಾಟ ತಪ್ಪಲಿದೆ ಎಂದು ಪ್ರವಾಸಿಗರು ಹೇಳುತ್ತಾರೆ.

ಕೆಮ್ಮಣ್ಣುಗುಂಡಿ
ಕೆಮ್ಮಣ್ಣುಗುಂಡಿ
ಸರ್ಕಾರಕ್ಕೆ ಪ್ರಸ್ತಾವನೆ
ರಸ್ತೆ ನಿರ್ವಹಣೆ ಯಾವ ಇಲಾಖೆ ವ್ಯಾಪ್ತಿಗೆ ಸೇರಿದ್ದು ಎಂಬುದು ಯಾವ ಇಲಾಖೆ ಅಧಿಕಾರಿಗಳಿಗೂ ಸ್ಪಷ್ಟತೆ ಇಲ್ಲ. ಆದರೂ ರಸ್ತೆ ಅಭಿವೃದ್ಧಿಗೆ ತೋಟಗಾರಿಕೆ ಇಲಾಖೆಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಪ್ರವಾಸಿಗರ ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ರಸ್ತೆ ಅಭಿವೃದ್ಧಿಪಡಿಸುವ ಅಗತ್ಯವಿದ್ದು ಕಾಮಗಾರಿ ಕೈಗೆತ್ತಿಕೊಳ್ಳಲು ಮನವಿ ಮಾಡಲಾಗಿದೆ ಎಂದು ತೋಟಗಾರಿಕೆ ಇಲಾಖೆ ಕೆಮ್ಮಣ್ಣುಗುಂಡಿ ವಿಶೇಷಾಧಿಕಾರಿ ಕುಬೇರ ಆಚಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT