ಶನಿವಾರ, ಸೆಪ್ಟೆಂಬರ್ 19, 2020
21 °C
ಎರಡು ತಾಲ್ಲೂಕುಗಳನ್ನು ಸಂಧಿಸುವ ಗ್ರಾಮಕ್ಕೆ ಬೇಕಿದೆ ಸಂಪರ್ಕ ಸೇತುವೆ

ಕೊಪ್ಪ: ಕಾಲುಸಂಕದಲ್ಲಿ ನಾಗರಿಕರ ಸರ್ಕಸ್‌!

ರವಿಕುಮಾರ್ ಶೆಟ್ಟಿಹಡ್ಲು Updated:

ಅಕ್ಷರ ಗಾತ್ರ : | |

Prajavani

ಕೊಪ್ಪ: ಎರಡು ಜಿಲ್ಲೆಗಳ ಗಡಿ ಭಾಗವಾದ ಮಾತ್ಗಾರ್ ಹಾಗೂ ಬಾಂದ್‍ಹಡ್ಲು ಗ್ರಾಮವನ್ನು ಪ್ರತ್ಯೇಕಿಸುವ ಬ್ರಾಹ್ಮಿ ನದಿಯನ್ನು ದಾಟಲು ಗ್ರಾಮಸ್ಥರಿಗೆ ಕಾಲು ಸಂಕ ಬಿಟ್ಟರೆ, ಹತ್ತಿರದ ಬೇರೆ ಮಾರ್ಗವಿಲ್ಲ.

ತಾಲ್ಲೂಕಿನ ಗಡಿ ಭಾಗವಾದ ಕೆಸವೆ ಗ್ರಾಮ ಪಂಚಾಯಿತಿ ವ್ಯಾಪ್ತಿ ಸಿದ್ಧರಮಠ ಸಮೀಪವಿರುವ ಗ್ರಾಮ ಮಾತ್ಗಾರ್ ಹಾಗೂ ತೀರ್ಥಹಳ್ಳಿ ತಾಲ್ಲೂಕು ಶೇಡ್ಗಾರ್ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ ಗ್ರಾಮ ಬಾಂದ್‍ಹಡ್ಲು ಈ ಎರಡು ಗ್ರಾಮಗಳನ್ನು ಸಂಪರ್ಕಿಸಲು ಇಲ್ಲಿನ ಗ್ರಾಮಸ್ಥರಿಗೆ ಎರಡು ಕಾಲು ಸಂಕವೇ ಆಧಾರ.

ಕಾಲು ಸಂಕವನ್ನು ನೋಡಲು ದೂರದಿಂದ ಸುಂದರವಾಗಿ ಕಂಡರೂ, ಅದರಲ್ಲಿ ನಡೆಯುವಾಗ ಭಯ ಕಾಡುತ್ತದೆ. ಒಂದು ವೇಳೆ ಕೆಳ ಮಟ್ಟದಲ್ಲಿ ಕಾಲು ಸಂಕವನ್ನು ನಿರ್ಮಿಸಿದ್ದೇ ಆದಲ್ಲಿ ನದಿ ನೀರಿನ ಹರಿವು ಜಾಸ್ತಿ ಆದಾಗ ಕಾಲು ಸಂಕದ ಮೇಲೆ ಓಡಾಡಲು ಸಾಧ್ಯವಾಗುವುದಿಲ್ಲ, ಅದು ಮಗುಚುತ್ತದೆ. ಆದ್ದರಿಂದ ಸಾಧ್ಯವಾದಷ್ಟು ಮೇಲ್ಮಟ್ಟದಲ್ಲಿ ಕಟ್ಟಿರುತ್ತಾರೆ. ಇಲ್ಲಿ ನಿಂತು ಕೆಳಕ್ಕೆ ನೋಡಿದರೆ, ನದಿ ನೀರಿನ ಓಟ ಭಯವನ್ನು ಸೃಷ್ಟಿಸುತ್ತದೆ. ಮಳೆಗಾಲದಲ್ಲಿ ಕೆಂಪಡರಿದ ನೀರು ಎಂಥವರಿಗೂ ಒಮ್ಮೆ ಭಯಮೂಡಿಸುತ್ತದೆ.

ಈ ಗ್ರಾಮಗಳಲ್ಲಿರುವ ವಿದ್ಯಾರ್ಥಿಗಳಿಗೆ ಪಟ್ಟಣದ ಶಾಲಾ ಕಾಲೇಜುಗಳಿಗೆ ಬಂದು ಹೋಗಲು ದಿನ ನಿತ್ಯದ ಹಾದಿ ಕಾಲು ಸಂಕವಾಗಿದೆ. ಕುಡಿಯುವ ನೀರು, ದನ ಕರುಗಳಿಗೆ ಮೇವು, ಕಟ್ಟಿಗೆ ಇತ್ಯಾದಿಗಳಿಗೆ ಒಂದು ಗ್ರಾಮದವರು ಮತ್ತೊಂದು ಗ್ರಾಮಕ್ಕೆ ಬರಲೇ ಬೇಕಿರುವುದು ಅನಿವಾರ್ಯ ಪರಿಸ್ಥಿತಿ. ಆರೋಗ್ಯ ಸರಿ ಇಲ್ಲದಾಗ ಅವರನ್ನು ಪಟ್ಟಣದ ಆಸ್ಪತ್ರೆಗೆ ಕರೆದೊಯ್ಯಲೂ ಇದೇ ಕಾಲು ಸಂಕವೇ ಗತಿ. ಬಾಂದ್‍ಹಡ್ಲು ಗ್ರಾಮಸ್ಥರಿಗೆ ಸಿದ್ದರಮಠದ ಮೂಲಕ ಕೊಪ್ಪಕ್ಕೆ ಬರಲು ಹತ್ತಿರವಾಗಿದ್ದರೂ, ಮೃಗವಧೆ ಮೂಲಕ ತೀರ್ಥಹಳ‍್ಳಿಗೆ ಹೋಗಬೇಕಾದ ಅನಿವಾರ್ಯ ಪರಿಸ್ಥಿತಿ ಉಂಟಾಗಿದ್ದು, ಸರಿಯಾದ ಸೇತುವೆ ಇಲ್ಲದ ಕಾರಣಕ್ಕೆ ಎಂದು ಸ್ಥಳೀಯರು ಹೇಳುತ್ತಾರೆ.

ಗ್ರಾಮಸ್ಥರು ಕಾಲು ಸಂಕದಲ್ಲಿ ಓಡಾಡಲು ಸಮಸ್ಯೆ ಎದುರಿಸುತ್ತಿರುವುದನ್ನು ಕುರಿತು ವಿವರಿಸುವಾಗ ಅದೇ ಊರಿನವರಾದ ರಂಗನಾಥ್, ಸಿದ್ದರಮಠದ ಎಸ್. ಶಶಿಧರ್ ಇದ್ದರು.

ಕಾಲುಸಂಕ ತುಂಡಾಗಿ ನೀರಿಗೆ ಬಿದ್ದಿದ್ದರು

‘ಓಟು ಕೇಳಲು ಬಂದವರು ಭರವಸೆ ನೀಡುತ್ತಾರೆ. ಇಲ್ಲಿ ಎರಡು ಗ್ರಾಮಗಳನ್ನು ಸಂಪರ್ಕಿಸಲು ಎರಡು ಕಾಲು ಸಂಕಗಳಿವೆ. ನಮ್ಮೂರಿನಲ್ಲಿ ಹತ್ತು ಮನೆಗಳು ಇದ್ದು, ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ಇದೇ ಕಾಲು ಸಂಕವೇ ಗತಿ. ಎರಡು ವರ್ಷಗಳ ಹಿಂದೆ ಮಳೆಗಾಲದಲ್ಲಿ ಅಡಿಕೆಗೆ ಔಷಧಿ ಹೊಡೆಯಲು ಬಂದಿದ್ದವರೊಬ್ಬರು ದಾಟುವಾಗ ಕಾಲು ಸಂಕ ತುಂಡಾಗಿ, ನೀರಿಗೆ ಬಿದ್ದಿದ್ದರು. ಕಾಲು ಸಂಕಕ್ಕೆ ತಂತಿ ಕಟ್ಟಿದ್ದರಿಂದ ಜೀವಕ್ಕೆ ತೊಂದರೆಯಾಗಿರಲಿಲ್ಲ’ ಎಂದು ಬಾಂದ್‍ಹಡ್ಲುವಿನ ವಿಶ್ವನಾಥ ಹೇಳಿದರು.
ಬೈಕ್ ಮೂಲಕ 3 ಕಿ.ಮೀ. ದೂರ

‘ಕಾಲು ಸಂಕದ ಮೂಲಕ ಕುಡಿಯುವ ನೀರನ್ನು ಕೊಂಡೊಯ್ಯತ್ತೇವೆ. ಸಮೀಪದಲ್ಲಿ ಮತ್ತೊಂದು ಕಾಲು ಸಂಕವನ್ನು ನಿರ್ಮಿಸಿದ್ದಾರೆ. ಅಲ್ಲಿ ವಿದ್ಯಾರ್ಥಿಗಳೂ ಓಡಾಡುತ್ತಾರೆ. ಇಲ್ಲಿನ ಆಟೊ ಚಾಲಕರು ಸಾಧಾರಣವಾಗಿ ಸಿದ್ದರಮಠದಲ್ಲಿ ಆಟೊ ನಿಲ್ಲಿಸಿ 3 ಕಿಲೋ ಮೀಟರ್ ದೂರ ಬೈಕ್‍ನಲ್ಲಿ ಬರುತ್ತಾರೆ. ಮಳೆಗಾಲದಲ್ಲಿ ಕಾಲು ಸಂಕವನ್ನು ದಾಟಿ ಹೋಗಲು ಸ್ವಲ್ಪ ಸಮಯವೇ ಹಿಡಿಯುತ್ತದೆ’ ಎಂದು ಕೊಪ್ಪ ತಾಲ್ಲೂಕಿನ ಮಾತ್ಗಾರ್‌ನ ಗೋಪಾಲ್ ನಾಯ್ಕ್ ಹೇಳುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು