ಕೊಪ್ಪ: ‘ಬೆಳಗಾವಿ ಜಿಲ್ಲೆ ಹಿರೇಕೋಡಿ ಗ್ರಾಮದ ನಂದಿಪರ್ವತ ಆಶ್ರಮದ ಕಾಮಕುಮಾರ ನಂದಿ ಮಹಾರಾಜರನ್ನು ಕ್ರೂರವಾಗಿ ಹತ್ಯ ಮಾಡಿರುವುದು ಅತ್ಯಂತ ಆಘಾತಕಾರಿಯಾಗಿದೆ’ ಎಂದು ತಾಲ್ಲೂಕಿನ ಜಗದ್ಗುರು ಬದರಿ ಶಂಕರಾಚಾರ್ಯ ಶಕಟಪುರ ಕ್ಷೇತ್ರದ ವಿದ್ಯಾಧೀಶ್ವರ ವಿದ್ಯಾಭಿನವ ಕೃಷ್ಣಾನಂದತೀರ್ಥ ಸ್ವಾಮೀಜಿ ಹೇಳಿದ್ದಾರೆ.
‘ಅಹಿಂಸಾತ್ರಿತ ದೀಕ್ಷೆ ತಳೆದು ಸರ್ವರ ಹಿತವನ್ನೇ ಸದಾ ಬಯಸುವ ಜೈನಮುನಿಗಳ ಈ ಕ್ರೂರ ಹತ್ಯೆಯು ಖಂಡನೀಯ. ರಾಜ್ಯ ಶಾಸನವು ಇಂತಹ ಕುಕೃತ್ಯಗಳು ಮರುಕಳಿಸದಂತೆ ಅಪರಾಧಿಗಳನ್ನು ಶಿಕ್ಷಿಸಿ ಸಮಾಜಕ್ಕೆ ನ್ಯಾಯ ದೊರಕಿಸಿಕೊಡಬೇಕು’ ಎಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.