ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು | ಅನುದಾನದ ಕೊರತೆ: ಗ್ರಂಥಾಲಯ ಕಟ್ಟಡ ಕಾಮಗಾರಿ ವಿಳಂಬ

ಜಿಲ್ಲಾ ನಗರ ಕೇಂದ್ರ ಗ್ರಂಥಾಲಯ, ತ್ವರಿತ ಕಾಮಗಾರಿಗೆ ಒತ್ತಾಯ
ರಘು ಕೆ.ಜಿ.
Published 30 ಮೇ 2024, 5:25 IST
Last Updated 30 ಮೇ 2024, 5:25 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಸಾವಿರಾರು ಮಂದಿಗೆ ಜ್ಞಾನಾರ್ಜನೆ ನೀಡುವ ನಗರದ ಜಿಲ್ಲಾ ಕೇಂದ್ರದ ಗ್ರಂಥಾಲಯದ ಹಳೆ ಕಟ್ಟಡದ ಹಿಂಬದಿಯಲ್ಲಿ ನಿರ್ಮಾಣವಾಗುತ್ತಿರುವ ನೂತನ ಗ್ರಂಥಾಲಯ ಕಟ್ಟಡ ಕಾಮಗಾರಿಗೆ ಅನುದಾನ ಕೊರತೆ ಎದುರಾಗಿದೆ.

ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆಯಾಗಿ ಎರಡು ವರ್ಷ ಕಳೆದರೂ ಕಾಮಗಾರಿ ಮಾತ್ರ ಸಂಪೂರ್ಣವಾಗಿಲ್ಲ. ಅಂದಾಜು ₹1 ಕೋಟಿ ವೆಚ್ಚದಲ್ಲಿ ಎರಡು ಮಹಡಿಗಳನ್ನು ಹೊಂದಿರುವ ಸುಸಜ್ಜಿತವಾದ ಗ್ರಂಥಾಲಯ ನಿರ್ಮಾಣವಾಗುತ್ತಿದೆ. ಆದರೆ, ಸರ್ಕಾರದಿಂದ ಯಾವುದೇ ಅನುದಾನ ಬಂದಿಲ್ಲ. ಕೇವಲ ಗ್ರಂಥಾಲಯ ಪ್ರಾಧಿಕಾರ ನಿಧಿಯ ಅನುದಾನದಲ್ಲೇ ಹಣ ಉಳಿಸಿ ಅದೇ ಹಣದಲ್ಲಿ ಕಟ್ಟಡ ನಿರ್ಮಾಣ ಕೈಗೆತ್ತಿಕೊಳ್ಳಲಾಗಿದೆ. 

ಈಗಾಗಲೇ ಇರುವ ಗ್ರಂಥಾಲಯ ಕಟ್ಟಡ ಅತ್ಯಂತ ಹಳೆಯದಾಗಿದ್ದು, ಐತಿಹಾಸಿಕ ಹಿನ್ನೆಲೆ ಹೊಂದಿದೆ. 1929 ಜನವರಿ 26ರಂದು ಮೈಸೂರು ಅರಸ ಶ್ರೀಕೃಷ್ಣರಾಜೇಂದ್ರ ಒಡೆಯರ್ ಆಡಳಿತ ಅವಧಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ಅಡಿಪಾಯ ಹಾಕಲಾಗಿತ್ತು. ಆಧುನಿಕತೆಗೆ ತಕ್ಕಂತೆ ಬದಲಾವಣೆ ಅಗತ್ಯವಿದ್ದು, ಸದ್ಯ ಇರುವ ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಜೋಡಿಸಲು, ಬರುವ ಓದುಗರು ಕುಳಿತುಕೊಳ್ಳಲು ಕೊಠಡಿಗಳು ಹಾಗೂ ಆಸನದ ಕೊರತೆ ಎದುರಿಸುವಂತಾಗಿದೆ.

ಗ್ರಂಥಾಲಯದ ಹಿಂಬದಿಯ ಜಾಗದಲ್ಲಿ ನಿರ್ಮಿತಿ ಕೇಂದ್ರದ ಸಹಕಾರದೊಂದಿಗೆ ನೂತನ ಕಟ್ಟಡ ನಿರ್ಮಾಣವಾಗುತ್ತಿದೆ. ಆದರೆ, ಅನುದಾನವಿಲ್ಲದೆ ಕಟ್ಟಡದಲ್ಲಿ ವಿದ್ಯುತ್ ಅಳವಡಿಕೆ, ‌‌ಬಣ್ಣ, ಸಿಸಿಟಿವಿ ಕ್ಯಾಮೆರಾ, ಕಿಟಕಿ ಗಾಜು ಅಳವಡಿಕೆ ಪೀಠೋಪಕರಣಗಳ ಜೋಡಣೆ ಮೊದಲಾದ ಕೆಲಸಗಳು ಬಾಕಿ ಇದ್ದು, ಆಮೆಗತಿಯಲ್ಲಿ ಸಾಗುತ್ತಿದೆ.

ಗ್ರಂಥಾಲಯ ನೂತನ ಕಟ್ಟಡಕ್ಕೆ ಹಿಂದೆ ಸಂಸದರ ನಿಧಿಯಿಂದ ಅಂದಾಜು ₹7 ಲಕ್ಷ ಬಿಡುಗಡೆಯಾಗಿದೆ. ಅದನ್ನು ಹೊರತುಪಡಿಸಿ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. ಗ್ರಂಥಾಲಯ ಪ್ರಾಧಿಕಾರದ ನಿಧಿಯಿಂದ ಬರುವ ಹಣದಿಂದಲೇ ಉಳಿಕೆ ಮಾಡಿ ಕಾಮಗಾರಿ ನಡೆಸಲಾಗಿದೆ. ದಾನಿಗಳ ನೆರವು ಅಗತ್ಯವಿದ್ದು,  ಚುನಾವಣೆ ನೀತಿ ಸಂಹಿತೆ ಕಾರಣದಿಂದಲೂ ಕಟ್ಟಡ ಕಾಮಗಾರಿ ವಿಳಂಬವಾಗಿದೆ ಎಂದು ನಗರ ಕೇಂದ್ರ ಗ್ರಂಥಾಲಯದ ಮುಖ್ಯಾಧಿಕಾರಿ ಉಮೇಶ್ ಹೇಳಿದರು.

ಗ್ರಂಥಾಲಯದ ಎರಡು ಮಹಡಿಗಳಲ್ಲಿ ವಿಶಾಲವಾದ ಓದುಗರ ಸಭಾಂಗಣ ಇರಲಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ಅಣಿಯಾಗುವವರು, ವಿದ್ಯಾರ್ಥಿಗಳು, ಶಾಲಾ ಮಕ್ಕಳು, ಹಿರಿಯ ನಾಗರಿಕರಿಗೆ ಅನುಕೂಲವಾಗುವಂತೆ ಡಿಜಿಟಲ್ ಗ್ರಂಥಾಲಯ ರೂಪಿಸಲಾಗುವುದು. ಹೊಸ ಗ್ರಂಥಾಲಯ ಕಟ್ಟಡ ನಿರ್ಮಾಣಕ್ಕೆ ನಗರಸಭೆ ಅಧ್ಯಕ್ಷರನ್ನು ಒಳಗೊಂಡಂತೆ ಸದಸ್ಯರ ಸಮಿತಿ ರಚಿಸಲಾಗಿದೆ. ಚುನಾವಣೆ ನೀತಿ ಸಂಹಿತೆ ಕಾರಣ ಜಿಲ್ಲಾಧಿಕಾರಿ ಈಗ ಅಧ್ಯಕ್ಷರಾಗಿದ್ದಾರೆ. ಬಳಿಕ ಸಭೆ ನಡೆಸಿ ಅನುದಾನಕ್ಕೆ ಬೇಡಿಕೆ ಇಟ್ಟು ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವ ಚಿಂತನೆ ಇದೆ ಎಂದು ಅವರು ಹೇಳಿದರು.

ಹಿರಿಯ ನಾಗರಿಕರು ಹವ್ಯಾಸಿ ಓದುಗರಿಂದ ಗ್ರಂಥಾಲಯ ಕಟ್ಟಡ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುಂತೆ ಒತ್ತಡ ಬರುತ್ತಿವೆ. ಅಂತಿಮ ರೂಪ ನೀಡಲು ಸಂಬಂಧಿಸಿದ ಜನಪ್ರತಿನಿಧಿಗಳ ಗಮನಕ್ಕೆ ತಂದು ಕ್ರಮವಹಿಸಲಾಗುವುದು

–ಉಮೇಶ್ ನಗರ ಕೇಂದ್ರ ಗ್ರಂಥಾಲಯ ಮುಖ್ಯಾಧಿಕಾರಿ

‌ ನಗರ ಕೇಂದ್ರ ಗ್ರಂಥಾಲಯದಲ್ಲಿ ಪುಸ್ತಕಗಳ ಸಂಗ್ರಹ ಸಾಕಷ್ಟಿದೆ. ಆದರೆ ಓದುಗರ ಸಂದಣಿ ಹೆಚ್ಚಾದಾಗ ನಿರಂತರವಾಗಿ ಕುಳಿತು ಓದಲು ಆಸನಗಳ ಸಮಸ್ಯೆ ಇದೆ. ಕುಡಿಯುವ ನೀರು ಶೌಚಾಲಯಕ್ಕೆ ಹೆಚ್ಚು ಆದ್ಯತೆ ಕಲ್ಪಿಸಬೇಕು

–ಮಧುಕುಮಾರ್ ಓದುಗ

ನಗರಸಭೆಯಿಂದ ಹೆಚ್ಚುವರಿ ಅನುದಾನಕ್ಕೆ ಚಿಂತನೆ

‘ಗ್ರಂಥಾಲಯ ಕಟ್ಟಡ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ. ಅನುದಾನಕ್ಕಾಗಿ ಶಾಸಕರು ಸಂಸದರು ಒಳಗೊಂಡಂತೆ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಪತ್ರದ ಮೂಲಕ ಮನವಿ ಸಲ್ಲಿಸಲಾಗಿತ್ತು. ಈವರೆಗೂ ಸ್ಪಂದನೆ ದೊರೆತಿಲ್ಲ’ ಎಂದು ನಗರಸಭೆ ಅಧ್ಯಕ್ಷ ಹಾಗೂ ಗ್ರಂಥಾಲಯ ಕಟ್ಟಡ ಸಮಿತಿ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಹೇಳಿದರು. ‘ಗ್ರಂಥಾಲಯಕ್ಕೆ ಸಾಮಾನ್ಯವಾಗಿ ಹಿಂದುಳಿದ ಹಾಗೂ ಬಡ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಅವರಿಗೆ ಅನುಕೂಲವಾಗಬೇಕು. ಹಾಗಾಗಿ ಚುನಾವಣೆ ನೀತಿ ಸಂಹಿತೆ ಬಳಿಕ ಸಭೆ ಕರೆಯಲಾಗುವುದು. ಅನುದಾನ ಲಭ್ಯವಾಗದಿದ್ದಲ್ಲಿ ನಗರಸಭೆಯಲ್ಲಿ ಟೆಂಡರ್ ಕರೆದು ಹೆಚ್ಚುವರಿ ಅನುದಾನದ ಮೂಲಕ ನನ್ನ ಅಧಿಕಾರದಲ್ಲೇ ಕಾಮಗಾರಿ ಪೂರ್ಣಗೊಳಿಸಲು ಕ್ರಮವಹಿಸಲಾಗುವುದು’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT