ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು: ರೈಲು ನಿಲ್ದಾಣಗಳಲ್ಲಿ ಸೌಕರ್ಯ ಮರೀಚಿಕೆ

Published 22 ಜನವರಿ 2024, 8:30 IST
Last Updated 22 ಜನವರಿ 2024, 8:30 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಜಿಲ್ಲೆಯ ಬಯಲು ಸೀಮೆ ರೈಲು ಮಾರ್ಗದ ಜಂಕ್ಷನ್‌ಗಳಾದರೆ, ಮಲೆನಾಡು ಭಾಗದಲ್ಲಿ ರೈಲು ಸಂಪರ್ಕವೇ ಇಲ್ಲ. ಇರುವ ರೈಲು ನಿಲ್ದಾಣಗಳು ಮೂಲಸೌಕರ್ಯ ಕೊರತೆಯಿಂದ ಬಳಲುತ್ತಿವೆ.

ಚಿಕ್ಕಮಗಳೂರು, ಕಡೂರು, ಬೀರೂರು, ತರೀಕೆರೆ, ಅಜ್ಜಂಪರದಲ್ಲಿ ರೈಲು ನಿಲ್ದಾಣಗಳಿವೆ. ಉಳಿದಂತೆ ಮಲೆನಾಡು ಭಾಗದಲ್ಲಿ ರೈಲು ಸಂರ್ಪಕವೇ ಇಲ್ಲ.

ಜಿಲ್ಲಾ ಕೇಂದ್ರದಲ್ಲಿ ಇರುವ ರೈಲು ನಿಲ್ದಾಣಕ್ಕೆ ತೆರಳುವುದು ಒಂದೆಡೆ ಸಮಸ್ಯೆಯಾದರೆ, ಕುಡಿಯುವ ನೀರಿನ ಸಮಸ್ಯೆಯೂ ಪ್ರಯಾಣಿಕರನ್ನು ಕಾಡುತ್ತಿದೆ. ರೈಲು ನಿಲ್ದಾಣದಿಂದ ಫೀಡರ್ ಸೇವೆ ಒದಗಿಸುವ ಕೆಎಸ್‌ಆರ್‌ಟಿಸಿ ಪ್ರಯತ್ನ ಸಮಪರ್ಕವಾಗಿ ಕೈಗೂಡಿಲ್ಲ.

ಬೀರೂರು ರೈಲು ನಿಲ್ದಾಣದ ಶೌಚಾಲಯದ ಸ್ಥಿತಿ
ಬೀರೂರು ರೈಲು ನಿಲ್ದಾಣದ ಶೌಚಾಲಯದ ಸ್ಥಿತಿ

ಜಿಲ್ಲಾ ಕೇಂದ್ರಕ್ಕೆ ಬೆಳಿಗ್ಗೆ ಮತ್ತು ಸಂಜೆ ಎರಡು ರೈಲುಗಳನ್ನು ಹೊರತುಪಡಿಸಿ ಬೇರೆ ರೈಲುಗಳಿಲ್ಲ. ಬೆಂಗಳೂರಿನಿಂದ ಬರುವ ರೈಲು ರಾತ್ರಿ 8.30ಕ್ಕೆ ಚಿಕ್ಕಮಗಳೂರು ತಲುಪಲಿದೆ. ಆದರೆ, ರೈಲು ನಿಲ್ದಾಣದಿಂದ ಪ್ರಯಾಣಿಕರನ್ನು ಕರೆದೊಯ್ಯಬೇಕಾದ ಬಸ್‌ಗಳು ರಾತ್ರಿ 9ಕ್ಕೆ ಬರಲಿದೆ. 

ಎರಡೂ ರೈಲುಗಳಲ್ಲಿ ಇಳಿಯುವ ಪ್ರವಾಸಿಗರಿಗೆ ಅನುಕೂಲ ಆಗಲಿ ಎಂಬ ಕಾರಣಕ್ಕೆ ಬಸ್‌ ಸಲ್ಪ ತಡವಾಗಿ ಬರುತ್ತಿದೆ.  ಎರಡೂ ರೈಲಿನಿಂದ ಇಳಿಯುವ ಪ್ರಯಾಣಿಕರನ್ನು ಕರೆದೊಯ್ಯುವ ಬಸ್‌ನಲ್ಲಿ ಜನ ನೂಕುನುಗ್ಗಲಿನಲ್ಲಿ ಪ್ರಯಾಣ ಮಾಡಬೇಕಿದೆ.

ಕಡೂರು ರೈಲು ನಿಲ್ದಾಣದ ರ್‍ಯಾಂಪ್‌ನಲ್ಲಿ  ದ್ವಿಚಕ್ರ ವಾಹನಗಳ ನಿಲುಗಡೆ
ಕಡೂರು ರೈಲು ನಿಲ್ದಾಣದ ರ್‍ಯಾಂಪ್‌ನಲ್ಲಿ  ದ್ವಿಚಕ್ರ ವಾಹನಗಳ ನಿಲುಗಡೆ

ಇನ್ನು ರೈಲು ನಿಲ್ದಾಣಕ್ಕೆ ಹೋಗುವ ರಸ್ತೆಯಂತು ಗುಂಡಿ ಮತ್ತು ದೂಳುಮಯವಾಗಿವೆ. ಸಂಜೆಯಾದರೆ ಈ ರಸ್ತೆ ಮದ್ಯದ ಅಡ್ಡೆಯಾಗಿ ಮಾರ್ಪಡುತ್ತದೆ. ನಿಲ್ದಾಣದಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ಇದೆ. ಇದನ್ನು ಸರಿಪಡಿಸಬೇಕು ಮತ್ತು ಹೆಚ್ಚುವರಿ ರೈಲುಗಳ ಕಾರ್ಯಾಚರಣೆ ಮಾಡಬೇಕು ಎಂಬುದು ಸ್ಥಳೀಯರ ಒತ್ತಾಯ. 

ಚಿಕ್ಕಮಗಳೂರಿನ ರೈಲು ನಿಲ್ದಾಣಕ್ಕೆ ತೆರಳುವ ರಸ್ತೆ ಹಾಳಾಗಿರುವುದು
ಚಿಕ್ಕಮಗಳೂರಿನ ರೈಲು ನಿಲ್ದಾಣಕ್ಕೆ ತೆರಳುವ ರಸ್ತೆ ಹಾಳಾಗಿರುವುದು

ಪರದಾಡುವ ವೃದ್ಧರು, ಅಂಗವಿಕಲರು

ಕಡೂರು: ಅತ್ಯುತ್ತಮ ನಿರ್ವಹಣೆಗಾಗಿ ಕೇಂದ್ರ ಸರ್ಕಾರದ ಪ್ರಶಸ್ತಿ ಗಳಿಸಿರುವ ಹಾಗೂ ಸಾವಿರಾರು ಜನ ಪ್ರಯಾಣಿಕರು ನಿತ್ಯ ಸಂಚರಿಸುವ ಕಡೂರು ರೈಲ್ವೆ ನಿಲ್ದಾಣದಲ್ಲಿ ಮೂಲ ಸೌಕರ್ಯಗಳು ಮರೀಚಿಕೆಯಾಗಿಯೇ ಉಳಿದಿದೆ. ರೈಲ್ವೆ ನಿಲ್ದಾಣಕ್ಕೆ ಪ್ರವೇಶಿಸಲು 30ಕ್ಕೂ ಹೆಚ್ಚು ಮೆಟ್ಟಿಲುಗಳನ್ನೇರುವುದು ವೃದ್ಧರು ಅಂಗವಿಕಲರಿಗೆ ಪ್ರಾಯಾಸವಾಗಿದೆ. ಇದಕ್ಕಾಗಿ ರೂಪಿಸಿರುವ ರ್‍ಯಾಂಪ್ ದ್ವಿಚಕ್ರ ವಾಹನಗಳ ನಿಲುಗಡೆ ತಾಣವಾಗಿದೆ. ಇನ್ನು ರಾತ್ರಿ ವೇಳೆ ಬೇರೆ ಬೇರೆ ಊರುಗಳಿಂದ ಬರುವ ಪ್ರಯಾಣಿಕರು ಬಸ್ ನಿಲ್ದಾಣ ಅಥವಾ ಪಟ್ಟಣದೊಳಗೆ ತೆರಳಲು ಹೋಗುವ ರಸ್ತೆಯಲ್ಲಿ ಬೀದಿ ದೀಪಗಳಿಲ್ಲದೆ ಭಯದಲ್ಲೆ ತೆರಳುವಂತಾಗಿದೆ. ಬಸ್ ನಿಲ್ದಾಣಕ್ಕೆ ತೆರಳುವ ರಸ್ತೆಯಂತೂ ತ್ಯಾಜ್ಯದಿಂದ ತುಂಬಿದೆ. ನಿಲ್ದಾಣದ ಒಳಗೆ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ರಾತ್ತಿ ವೇಳೆ ಪ್ರಯಾಣಿಕರಲ್ಲದವರೂ ನಿಲ್ದಾಣಕ್ಕೆ ಬಂದು ಉಳಿಯುತ್ತಿದ್ದು ಭಿಕ್ಷುಕರ ವಿಶ್ರಾಂತಿ ತಾಣವೂ ಆಗಿದೆ. ನಿಲ್ದಾಣದ ಪ್ರವೇಶದಲ್ಲಿ ನೋ ಪಾರ್ಕಿಂಗ್ ಬೋರ್ಡ್ ಇದ್ದರೂ ಅಲ್ಲಿಯೇ ನಿಲ್ಲಿಸುವ ದ್ವಿಚಕ್ರ ವಾಹನಗಳನ್ನು ನಿಯಂತ್ರಿಸುವ ಕಾರ್ಯವಾಗಿಲ್ಲ. ಇದರಿಂದ ಅಲ್ಲಿರುವ ಆಟೊರಿಕ್ಷಾ ನಿಲ್ದಾಣಕ್ಕೂ ತೊಂದರೆಯಾಗುತ್ತಿದೆ. ರಾತ್ರಿ ವೇಳೆಯಲ್ಲಿ ನಿಲ್ದಾಣದ ಎರಡನೇ ಫ್ಲಾಟ್ ಫಾರ್ಮಿನಲ್ಲಿ ಭಧ್ರತೆ ಕೊರತೆಯಿದೆ. ಪ್ಲಾಟ್ ಫಾರ್ಮಿನಲ್ಲಿ ಶುಚಿತ್ವಕ್ಕೆ ಕೊರತೆಯಿಲ್ಲ. ಶೌಚಾಲಯದ ನಿರ್ವಹಣೆಯೂ ಉತ್ತಮವಾಗಿದೆ.

ತರೀಕೆರೆಯಲ್ಲಿ ರೈಲು ನಿಲ್ದಾಣದಲ್ಲಿ ಅಂಗವಿಕಲರ ಶೌಚಾಲಯಕ್ಕೆ ಬೀಗ ಬಿದ್ದಿರುವುದು
ತರೀಕೆರೆಯಲ್ಲಿ ರೈಲು ನಿಲ್ದಾಣದಲ್ಲಿ ಅಂಗವಿಕಲರ ಶೌಚಾಲಯಕ್ಕೆ ಬೀಗ ಬಿದ್ದಿರುವುದು

ಸೌಲಭ್ಯ ವಂಚಿತ ರೈಲು ನಿಲ್ದಾಣ

ಅಜ್ಜಂಪುರ: ಪಟ್ಟಣದ ರೈಲು ನಿಲ್ದಾಣ ಹಲವು ಸೌಲಭ್ಯ ಸೌಕರ್ಯಗಳಿಂದ ವಂಚಿತವಾಗಿದೆ. ಇದರಿಂದ ನಿತ್ಯ ನಿಲ್ದಾಣಕ್ಕೆ ಭೇಟಿ ನೀಡುವ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ. ರೈಲು ನಿಲ್ದಾಣದಲ್ಲಿ ಕುಳಿತುಕೊಳ್ಳುವ ಆಸನದ ಕೊರತೆ ಇದೆ. ಮೇಲ್ಚಾವಣಿ ವ್ಯವಸ್ಥೆ ಆಗಿಲ್ಲ. ಆಸನ ಕೊರತೆಯಿಂದ ರೈಲು ಪ್ರಯಾಣಿಕರು ನಿಂತುಕೊಂಡೇ ರೈಲು ಗಾಡಿ ಕಾಯುವಂತಾಗಿದೆ. ಪ್ರಯಾಣಿಕರು ಬಿಸಿಲು ಮಳೆಯಲ್ಲೇ ರೈಲು ಕಾಯಬೇಕಾದ ಅನಿವಾರ್ಯತೆ ಇದೆ. ನಿಲ್ದಾಣದಲ್ಲಿ ಪ್ರಯಾಣಿಕರ ವಿಶ್ರಾಂತಿ ಕೊಠಡಿಯು ಇಲ್ಲವಾಗಿದೆ. ಮಹಿಳೆಯರಿಗೆ ವೃದ್ಧ ದಂಪತಿಗಳಿಗೆ ತೀವ್ರ ತೊಂದರೆಯಾಗಿದೆ. ಪ್ಲಾಟ್‌ಫಾರಂನಲ್ಲಿ ರೈಲು ಹೋಗಿ ನಿಲುಗಡೆ ಬಗ್ಗೆ ಮಾಹಿತಿ ನೀಡುವ ಫಲಕ ಅಳವಡಿಸದೆ ಇರುವುದು ಪ್ರಯಾಣಿಕರಲ್ಲಿ ಗೊಂದಲ ಉಂಟು ಮಾಡಿದೆ. ನೆಲಕ್ಕೆ ಅಳವಡಿಸಿರುವ ಟೈಲ್ಸ್ ಕಿತ್ತು ಹೊರ ಬಂದು ಉಬ್ಬು–ತಗ್ಗು ಸೃಷ್ಟಿಯಾಗಿದೆ. ಪ್ರಯಾಣಿಕರು ನಡೆದಾಡಲು ಪ್ರಯಾಸ ಪಡುವಂತಾಗಿದೆ. ಶುದ್ಧ ಕುಡಿಯುವ ನೀರು ವಾಹನ ನಿಲುಗಡೆಗೆ ಅವಕಾಶ ಇಲ್ಲದೆ ಇರುವುದು ಪ್ರಯಾಣಿಕರನ್ನು ಮತ್ತಷ್ಟು ತೊಂದರೆಗೆ ಸಿಲುಕಿಸಿದೆ.

ನೀರಿಲ್ಲ ಶೌಚಾಲಯವಿಲ್ಲ

ಬೀರೂರು: ರೈಲ್ವೆ ನಿಲ್ದಾಣವು ಸುಮಾರು 150 ವರ್ಷಗಳ ಇತಿಹಾಸ ಹೊಂದಿದ್ದು ಬೆಂಗಳೂರು ಮುಂಬೈ ಮಾರ್ಗದ ಪ್ರಮುಖ ರೈಲ್ವೆ ಜಂಕ್ಷನ್ ಆಗಿದೆ. ನಿತ್ಯ 40ಕ್ಕೂ ಹೆಚ್ಚು ಪ್ರಯಾಣಿಕ ರೈಲುಗಳು ಮತ್ತು ಸಾವಿರಾರು ಪ್ರಯಾಣಿಕರು ಮುಂಬೈ ನವದೆಹಲಿ ಜೈಪುರ  ಅಜ್ಮೀರ್ ಪಂಡರಾಪುರ ಬೆಳಗಾವಿ ಬೆಂಗಳೂರು ಶಿವಮೊಗ್ಗ ಚೆನ್ನೈ ಪುದುಚೇರಿ ಹೀಗೆ ದೇಶಾದ್ಯಂತ ಸಂಚರಿಸುತ್ತಾರೆ. 5 ಪ್ಲಾಟ್‌ಫಾರ್ಮ್‌ಗಳನ್ನು ಹೊಂದಿರುವ ನಿಲ್ದಾಣದಲ್ಲಿ ಒಂದನೇ ಪ್ಲಾಟ್‌ಫಾರ್ಮ್ ಬಿಟ್ಟರೆ ಬಾಕಿ ಪಾಲ್ಟ್‌ಫಾರ್ಮ್‌ಗುಳಲ್ಲಿ ಕುಡಿಯುವ ನೀರಿನ ಲಭ್ಯತೆ ಇಲ್ಲ. ಒಂದು ಎರಡನೇ ಪ್ಲಾಟ್‌ಫಾರಂ ಹೊರತುಪಡಿಸಿ ಬೇರೆಡೆ ಶೌಚಾಲಯಗಳಿಲ್ಲ. ಎರಡನೇ ಪ್ಲಾಟ್ಫಾರ್ಮ್‌ನಲ್ಲಿ ಇರುವ ಶೌಚಾಲಯ ನೀರನ್ನು ಕಂಡು ಎಷ್ಟು ದಿನವಾಗಿದೆ. ಮುಖ್ಯವಾಗಿ ಲಿಫ್ಟ್ ಸೌಲಭ್ಯ ಒಂದು ಮತ್ತು ಎರಡನೇ ಪ್ಲಾಟ್‌ಫಾರ್ಮ್‌ಗಳಿಗೆ ಸಂಪರ್ಕ ಕಲ್ಪಿಸುತ್ತಿದೆ. ಉಳಿದ ಪ್ಲಾರ್ಮ್‌ಗಳಿಗೆ ಮೇಲ್ಸೇತುವೆ ಬಳಸುವ ಸೌಲಭ್ಯವು ಇದೆ. ಎಷ್ಟೋ ಬಾರಿ ರೈಲು ಬರುವ ಸಂದರ್ಭದಲ್ಲಿ ಘೋಷಣೆ ಆಗುವುದರಿಂದ ಮೂರು ನಾಲ್ಕು ಐದನೇ ಪ್ಲಾಟ್ ಫಾರ್ಮ್‌ಗಳಿಗೆ ತೆರಳಬೇಕಾದ ಅನಿವಾರ್ಯತೆ ಇದೆ. ಒಟ್ಟಾರೆ ಬೀರೂರು ರೈಲು ನಿಲ್ದಾಣವು ಮೂಲಸೌಕರ್ಯಗಳ ಕೊರತೆಯಿಂದ ಬಳಲುತ್ತಿದೆ ಎಂದು ಪ್ರಯಾಣಿಕರು ಬೇಸರ ವ್ಯಕ್ತಪಡಿಸುತ್ತಾರೆ.

ಶೌಚಾಲಯದ್ದೇ ಸಮಸ್ಯೆ

ತರೀಕೆರೆ: ಇಲ್ಲಿನ ರೈಲು ನಿಲ್ದಾಣವು ಬೀರೂರು ಶಿವಮೊಗ್ಗ ನಡುವಿನ ಒಂದು ಮುಖ್ಯ ನಿಲ್ದಾಣವಾಗಿದ್ದು ತಾಲೂಕು ಕೇಂದ್ರವಾಗಿರುವುದರಿಂದ ಶಿವಮೊಗ್ಗ ಮತ್ತು ಬೆಂಗಳೂರುಗಳ ನಡುವೆ ಸಂಚರಿಸುವವರ ಸಂಖ್ಯೆ ನಿತ್ಯವೂ ಹೆಚ್ಚಿದೆ. ನಿಲ್ದಾಣವು ಮೂರು ಪ್ಲಾಟ್‌ಫಾರ್ಮ್‌ಗಳನ್ನು ಹೊಂದಿದ್ದು ಮೊದಲನೇ ಪ್ಲಾಟ್‌ಫಾರ್ಮ್‌ ಅನ್ನು ಸ್ವಲ್ಪ ಮಟ್ಟಿಗೆ ಅಭಿವೃದ್ಧಿಪಡಿಸಲಾಗಿದ್ದು ಎರಡನೆಯ ಪ್ಲಾಟ್‌ಫಾರ್ಮ್‌ ಅಭಿವೃದ್ಧಿ ಪಥದಲ್ಲಿದೆ. ಆದರೆ ಎಲ್ಲಿಯೂ ಕುಡಿಯುವ ನೀರಿನ ಲಭ್ಯತೆ ಇಲ್ಲ. ಅಲ್ಲದೆ ಎರಡನೇ ಪ್ಲಾಟ್‌ಫಾರ್ಮ್‌ನಲ್ಲಿ ಶೌಚಾಲಯ ಇಲ್ಲವೇ ಇಲ್ಲ. ಮೊದಲನೇ ಪ್ಲಾಟ್‌ಫಾರ್ಮ್‌ನಲ್ಲಿ ಇರುವ ಶೌಚಾಲಯ ಪರವಾಗಿಲ್ಲ ಎನ್ನುವ ಮಟ್ಟಿಗೆ ಸ್ವಚ್ಛವಾಗಿದೆ. ಅಂಗವಿಕಲರಿಗಾಗಿ ಅಳವಡಿಸಿರುವ ಶೌಚಾಲಯ ಬಾಗಿಲು ಮುಚ್ಚಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT