ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರದ ನಾಡಲ್ಲಿ ಕೆರೆಗಳ ಪುನಶ್ಚೇತನ: ಅಂತರ್ಜಲ ಅಭಿವೃದ್ಧಿ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಯತ್ನ
Last Updated 27 ಮೇ 2022, 5:40 IST
ಅಕ್ಷರ ಗಾತ್ರ

ಕಡೂರು: ‘ಬರಗಾಲದ ಪ್ರದೇಶ’ವೆಂದೇ ಹಣೆಪಟ್ಟಿ ಹೊತ್ತ ಕಡೂರು ತಾಲ್ಲೂಕಿನಲ್ಲಿ ಕಳೆದೆರಡು ವರ್ಷಗಳಿಂದ ಉತ್ತಮ ಮಳೆಯಾಗುತ್ತಿದೆ. ಶಾಸಕ ಬೆಳ್ಳಿಪ್ರಕಾಶ್ ಅವರ ಆಸಕ್ತಿಯ ಫಲವಾಗಿ ಹಲವಾರು ಕಿಂಡಿ ಆಣೆಕಟ್ಟೆಗಳು ನಿರ್ಮಾಣಗೊಂಡಿವೆ.

ಅಂತರ್ಜಲ ಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಗಣನೀಯ ಪಾತ್ರ ವಹಿಸಿರುವ ಈ ಕಿಂಡಿ ಆಣೆಕಟ್ಟೆಗಳಿಗೆ ಪೂರಕವಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ತಾಲ್ಲೂಕಿನ ಮೂರು ಕೆರೆಗಳು ಪುನರುಜ್ಜೀವನಗೊಂಡಿವೆ.

ಯೋಜನೆಯ ಮೂಲ ಉದ್ದೇಶವೇ ಗ್ರಾಮಾಭಿವೃದ್ಧಿ. ಗ್ರಾಮೀಣ ಭಾಗದ ರೈತರಿಗೆ ಪೂರಕ ಸಹಾಯ ಮಾಡುವ ನಿಟ್ಟಿನಲ್ಲಿ ನಿರ್ದಿಷ್ಟ ಜಲಮೂಲಗಳಿಲ್ಲದ ಕಡೆಯೇ ಗಮನ ಕೇಂದ್ರೀಕರಿಸಿ, ಅಲ್ಲಿ ಕೆರೆಗಳನ್ನು ಪುನರುಜ್ಜೀವನಗೊಳಿಸಿದರೆ ಅಲ್ಲಿಯ ರೈತರಿಗೆ ಅನುಕೂಲಕರ ಎಂಬ ಚಿಂತನೆಯಲ್ಲಿ ಕಾರ್ಯೋನ್ಮುಖವಾದ ಯೋಜನೆಯ ಫಲವಾಗಿ ಮೂರು ಕೆರೆಗಳು ಹೊಸ ಕಳೆ ಪಡೆದಿವೆ.

ಯೋಜನೆಯ ಮೂಲಕ ಸ್ಥಳೀಯರ ಒಂದು ಸಮಿತಿ ರಚನೆಯಾಗಿದೆ. ಒಟ್ಟು ಯೋಜನಾ ವೆಚ್ಚವನ್ನು ಗ್ರಾಮಾಭಿವೃದ್ಧಿ ಯೋಜನೆ ಭರಿಸುತ್ತದೆ. ಕಾಮಗಾರಿ ಮುಗಿದ ನಂತರ ಸಮಿತಿಗೆ ಕೆರೆ ನಿರ್ವಹಣೆಯ ಹೊಣೆ ನೀಡಲಾಗುತ್ತದೆ.

ಬಿ.ಎಂ.ಕೊಪ್ಪಲಿನಲ್ಲಿ 35 ಎಕರೆ, ಸೂರಾಪುರ ಮತ್ತು ಕೆ.ಬಿದರೆಗಳಲ್ಲಿ 15 ಎಕರೆ ವಿಸ್ತೀರ್ಣದ ಕೆರೆ ನಿರ್ಮಾಣವಾಗಿದ್ದು, ನೀರಿನಿಂದ ತುಂಬಿದೆ. ಈ ಕೆರೆಗಳ ಸುತ್ತಮುತ್ತ ಅಂತರ್ಜಲ ಮಟ್ಟ ಏರಿಕೆಯಾಗಿ ಬತ್ತಿದ್ದ ಕೊಳವೆಬಾವಿಗಳು ಮರುಜೀವ ಪಡೆದಿವೆ ಎನ್ನುತ್ತಾರೆ ಸ್ಥಳೀಯರು.

‘ಕೆರೆಗಳ ಪುನರುಜ್ಜೀವನಕ್ಕೆ ಸ್ಥಳೀಯರ ಸಹಕಾರ ಬಹುಮುಖ್ಯ. ಕೆರೆಯ ಹೂಳನ್ನು ರೈತರು ತಮ್ಮ ಹೊಲಗಳಿಗೆ ಹಾಕಿಕೊಳ್ಳಲು ಅವಕಾಶ ಸಿಕ್ಕಿದ್ದರಿಂದ ಒಂದಷ್ಟು ಅನುಕೂಲವಾಗಿದೆ. ಅದಕ್ಕೆ ರೈತರಿಂದ ಹಣ ಪಡೆದಿಲ್ಲ. ಹೂಳೆತ್ತುವ ವೆಚ್ಚವನ್ನು ಯೋಜನೆಯೇ ಭರಿಸಿದೆ’ ಎಂದು ತಾಲ್ಲೂಕು ಯೋಜನಾಧಿಕಾರಿ ಪ್ರಸಾದ್ ಮತ್ತು ಕೃಷಿ ಅಧಿಕಾರಿ ರಾಘವೇಂದ್ರ ಮಾಹಿತಿ ನೀಡಿದರು.

ಯೋಜನೆಯ ವತಿಯಿಂದ ಕೆರೆಗಳ ಅದರಲ್ಲೂ ಬಹುಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿನ ಕೆರೆಗಳ ಪುನರುಜ್ಜೀವನದ ಕಾರ್ಯ ರೈತರ ಪಾಲಿಗೆ ಬಹು ಅನುಕೂಲಕರವಾಗಿದೆ.

‘ಮತ್ತೆ ಎರಡು ಕೆರೆಗಳ ಅಭಿವೃದ್ಧಿ’

‘ವರ್ಷಕ್ಕೆ ಒಂದು ಕೆರೆಯನ್ನು ಸುವ್ಯವಸ್ಥೆಗೊಳಿಸುವ ಕಾರ್ಯವನ್ನು ಯೋಜನೆ ಕೈಗೆತ್ತಿಕೊಳ್ಳುತ್ತದೆ. ತಾಲ್ಲೂಕಿನಲ್ಲಿ ಈಗಾಗಲೇ ಮೂರು ಕೆರೆಗಳು ಸಂಪೂರ್ಣವಾಗಿ ಕಾಮಗಾರಿ ಮುಗಿದು ನೀರು ತುಂಬಿದೆ. ಈಗ ಮತ್ತೆ ಎರಡು ಕೆರೆಗಳನ್ನು ಪರಿಶೀಲಿಸಲಾಗಿದ್ದು, ಶೀಘ್ರದಲ್ಲಿ ಅನುಮೋದನೆ ದೊರೆತ ನಂತರ ಕಾಮಗಾರಿ ಆರಂಭವಾಗಲಿದೆ’ ಎನ್ನುತ್ತಾರೆ ಯೋಜನೆಯ ಜಿಲ್ಲಾ ನಿರ್ದೇಶಕ ಪ್ರಕಾಶ್ ರಾವ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT