ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಫ್‌ಡಿಎ, ಇಬ್ಬರು ಗ್ರಾಮ ಲೆಕ್ಕಿಗರು ಅಮಾನತು

ಮೂಡಿಗೆರೆ ತಾಲ್ಲೂಕಿನ ಬಾಳೂರು: ಸರ್ಕಾರಿ ಜಾಗ ಖಾಸಗಿ ವ್ಯಕ್ತಿಗಳಿಗೆ ಅಕ್ರಮ ಮಂಜೂರು
Last Updated 15 ಜೂನ್ 2022, 4:26 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬಾಳೂರು ಗ್ರಾಮದ ಸರ್ವೆ ನಂಬರ್‌ 168ರ ಸರ್ಕಾರಿ ಜಾಗವನ್ನು ಖಾಸಗಿ ವ್ಯಕ್ತಿಗಳಿಗೆ ಅಕ್ರಮ ಮಂಜೂರು ಪ್ರಕರಣದಲ್ಲಿ ಒಬ್ಬರು ಹಿರಿಯ ಸಹಾಯಕ (ಎಫ್‌ಡಿಎ), ಇಬ್ಬರು ಗ್ರಾಮಲೆಕ್ಕಿಗರನ್ನು ಮಂಗಳವಾರ ಅಮಾನತು ಮಾಡಲಾಗಿದೆ.

ನರಸಿಂಹರಾಜಪುರ ತಾಲ್ಲೂಕು ಕಚೇರಿಯ ಎಫ್‌ಡಿಎ (ಬಾಳೂರು ಹೋಬಳಿಯ ಹಿಂದಿನ ರಾಜಸ್ವ ನಿರೀಕ್ಷಕ) ಎಚ್‌.ಸಿ.ಮಹೇಶ್‌, ಅರಮನೆ ತಲಗೂರು ವೃತ್ತದ ಗ್ರಾಮ ಲೆಕ್ಕಿಗ ಎನ್‌.ಎನ್‌.ಗಿರೀಶ್‌ ಹಾಗೂ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕು ಕಚೇರಿಗೆ ನಿಯೋಜನೆಯಲ್ಲಿರುವ ಗ್ರಾಮ ಲೆಕ್ಕಿಗರಾದ (ಮೂಡಿಗೆರೆ ತಾಲ್ಲೂಕು ಭೂಮಿ ಕೇಂದ್ರದ ಹಿಂದಿನ ಗ್ರಾಮ ಲೆಕ್ಕಿಗ) ಬಿ.ವೈ.ಗೀತಾ ಅವರನ್ನು ಜಿಲ್ಲಾಧಿಕಾರಿ ಕೆ.ಎನ್‌.ರಮೇಶ್‌ ಅಮಾನತುಗೊಳಿಸಿದ್ದಾರೆ.

ಏನಿದು ಪ್ರಕರಣ: ಬಾಳೂರಿನ ಸರ್ವೆ ನಂಬರ್‌ 168ರಲ್ಲಿ ಗೋಮಾಳ ಜಾಗವನ್ನು ತಲಾ 4.38ಎಕರೆಯಂತೆ ಖಾಸಗಿ ವ್ಯಕ್ತಿಗಳಿಗೆ ಮಂಜೂರು ಮಾಡಲಾಗಿದೆ ಎಂದು ಮೂಡಿಗೆರೆಯ ಎಂ.ಮಂಜುನಾಥ್‌ ದೂರು ನೀಡಿದ್ದರು.

ದೂರಿಗೆ ಸಂಬಂಧಿಸಿದಂತೆ ಉಪವಿಭಾಗಾಧಿಕಾರಿ ಡಾ.ಎಚ್‌.ಎಲ್‌.ನಾಗರಾಜ್‌ ಅವರು ತನಿಖೆ ನಡೆಸಿ ವರದಿ ಸಲ್ಲಿಸಿದ್ದಾರೆ. 2019–20ನೇ ಸಾಲಿನಲ್ಲಿ ಬಾಳೂರಿನ ಸರ್ವೆ ನಂಬರ್‌ 168ರ ಸರ್ಕಾರಿ ಜಾಗವನ್ನು 11 ಖಾಸಗಿ ವ್ಯಕ್ತಿಗಳಿಗೆ (ತಲಾ 4.38 ಎಕರೆ) ಮಂಜೂರು ಮಾಡಿ ಖಾತೆ ದಾಖಲಿಸಿರುವುದು ಕಂಡುಬಂದಿದೆ.

ಬಿ.ವಿ.ಗಾಯತ್ರಿದೇವಿ, ಪೂರ್ಣಮ್ಮ, ತ್ರಿಭುವನ್‌ ಪಟೇಲ್‌, ಪಿ.ಎ.ಭಾರತಿ, ಪವನ್‌, ರಕ್ಷಿತಾ ಪಟೇಲ್‌, ಫೈಜ್‌ ಅಹಮದ್‌, ರೆಹಾನಾ ಬೇಗಂ, ಆಯೇಷಾ ಸಮೀನ್‌, ಮೊಹಮ್ಮದ್‌ ಶಾಹಿದ್‌ ಇರ್ಫಾನ್‌, ರೇಷ್ಮಾ ಅಂಜುಮ್‌ ಹಂಗಲ್‌ ಎಂಬವರಿಗೆ ಜಾಗ ಮಂಜೂರು ಮಾಡಲಾಗಿದೆ. ಆದರೆ ಈ 11 ಮಂದಿಯ ಫಾರಂ ‘50’, ‘53’ ಅರ್ಜಿಗಳು ಇಲ್ಲ. ಅಕ್ರಮ–ಸಕ್ರಮ ಸಮಿತಿಗೆ ಜಮೀನು ಮಂಜೂರಾತಿಗೆ ದಾಖಲೆ ಸಲ್ಲಿಸಿಲ್ಲ. ಸಾಗುವಳಿಚೀಟಿವಹಿ ಪುಸ್ತಕದಲ್ಲಿ ದಾಖಲಿಸಿಲ್ಲ. ಹಕ್ಕುಪತ್ರ ನೀಡಿರುವ ದಾಖಲೆ ಇಲ್ಲ. ಆರ್‌ಆರ್‌ಟಿ ಶಾಖೆಯಿಂದ ಖಾತೆ ದಾಖಲಿಸಿರುವ ಬಗ್ಗೆ ಅಥವಾ ಭೂಮಿ ಶಾಖೆಗೆ ಕಡತ ವರ್ಗಾಯಿಸಿರುವ ಬಗ್ಗೆ ತಾಲ್ಲೂಕು ಕಚೇರಿಯಲ್ಲಿ ದಾಖಲೆ ಇಲ್ಲ.

ಮಂಜೂರಾತಿ ಸಂದರ್ಭದಲ್ಲಿ ಎಚ್.ಎಂ.ರಮೇಶ್‌ ಅವರು ಮೂಡಿಗೆರೆ ತಹಶೀಲ್ದಾರ್‌, ಕೆ.ಓ.ಪಾಲಯ್ಯ ಅವರು ಆರ್‌ಆರ್‌ಟಿ ಶಿರಸ್ತೇದಾರ್‌, ಎಚ್‌.ಸಿ.ಮಹೇಶ್‌ ಅವರು ಬಾಳೂರು ಹೋಬಳಿ ರಾಜಸ್ವ ನಿರೀಕ್ಷಕ, ಎನ್‌.ಎನ್‌.ಗಿರೀಶ್‌ ಅವರು ಅರಮನೆ ತಲಗೂರು ವೃತ್ತದ ಗ್ರಾಮ ಲೆಕ್ಕಿಗ ಹಾಗೂ ಬಿ.ವೈ.ಗೀತಾ ಮೂಡಿಗೆರೆ ಭೂಮಿ ಕೇಂದ್ರದ ಗ್ರಾಮ ಲೆಕ್ಕಿಗರಾಗಿದ್ದರು. ಭೂಮಿ ಶಾಖೆಯಲ್ಲಿ ಬಿ.ವೈ. ಗೀತಾ ಅವರ ಲಾಗಿನ್‌ನಲ್ಲಿ ಎಲ್ಲ ಪ್ರಕ್ರಿಯೆ ನಡೆದಿರುವುದು ಕಂಡುಬಂದಿದೆ. ಈ ಅಧಿಕಾರಿಗಳು, ನೌಕರರ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ವರದಿಯಲ್ಲಿ ತಿಳಿಸಲಾಗಿದೆ.

ಭೂಮಂಜೂರಾತಿ ನಿಯಮ ಉಲ್ಲಂಘಿಸಿ ಅಕ್ರಮವಾಗಿ ಮಂಜೂರು ಮಾಡಿ ಖಾತೆ ದಾಖಲಿಸಿರುವುದು ಮೇಲ್ನೋಟಕ್ಕೆ ದೃಢಪಟ್ಟಿರುವುದರಿಂದ ಆಮಾನತುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.

ಆಗಿನ ತಹಶೀಲ್ದಾರ್‌, ಶಿರಸ್ತೇದಾರ್‌ ವಿರುದ್ಧ ಶಿಸ್ತುಕ್ರಮಕ್ಕೆ ಸರ್ಕಾರಕ್ಕೆ ಪತ್ರ:ಸರ್ಕಾರಿ ಜಾಗ ಅಕ್ರಮ ಮಂಜೂರು ಪ್ರಕರಣಕ್ಕೆ ಮೂಡಿಗೆರೆಯ ಆಗಿನ ತಹಶೀಲ್ದಾರ್‌ ರಮೇಶ್‌ ಮತ್ತು ಆರ್‌ಆರ್‌ಟಿ ಶಿರಸ್ತೇದಾರ್‌ ಕೆ.ಓ.ಪಾಲಯ್ಯ ವಿರುದ್ಧ ಶಿಸ್ತುಕ್ರಮಕ್ಕೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು’ ಎಂದು ಜಿಲ್ಲಾಧಿಕಾರಿ ರಮೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT