ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು: ಕುಡುಕರ ತಾಣವಾದ ಗ್ರಂಥಾಲಯ ಆವರಣ

ರಘು ಕೆ.ಜಿ.
Published 18 ಡಿಸೆಂಬರ್ 2023, 6:52 IST
Last Updated 18 ಡಿಸೆಂಬರ್ 2023, 6:52 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಗ್ರಂಥಾಲಯಗಳು ಜ್ಞಾನಾರ್ಜನೆಯ ದೇಗುಲವಿದ್ದಂತೆ. ಇಲ್ಲಿ ಸ್ವಚ್ಛತೆ ಮತ್ತು ಶಿಸ್ತಿಗೆ ಮೊದಲ ಆದ್ಯತೆ. ಆದರೆ, ನಗರದ ಬಸವನಹಳ್ಳಿ ವ್ಯಾಪ್ತಿಯ ಹನುಮಂತಪ್ಪ ವೃತ್ತದ ಬಳಿಯ ಸರ್ಕಾರಿ ಗ್ರಂಥಾಲಯ ಆವರಣ ಈಗ ಕುಡುಕರ ತಾಣವಾಗಿದೆ.

ಗ್ರಂಥಾಲಯಕ್ಕೆ ಪುಸ್ತಕಗಳನ್ನು ಓದಲು ನಿತ್ಯ ನೂರಾರು ಮಂದಿ ಹಿರಿಯರು, ಮಕ್ಕಳು, ಮಹಿಳೆಯರು, ಅಧ್ಯಾಪಕರು, ಸ್ಪರ್ಧಾರ್ಥಿಗಳು ಇಲ್ಲಿಗೆ ಬರುತ್ತಾರೆ. ಸಮೀಪದಲ್ಲಿಯೇ ಜೆಡಿಎಸ್ ಜಿಲ್ಲಾ ಕಚೇರಿ ಹಾಗೂ ಪಕ್ಕದಲ್ಲಿ ಮಹಿಳಾ ಪೊಲೀಸ್ ಠಾಣೆ ಮತ್ತು ತಹಶೀಲ್ದಾರ್ ಕಚೇರಿ ಇವೆ.  ಗ್ರಂಥಾಲಯ ಮುಂಭಾಗ ಪಾಳು ಬಿದ್ದ ಜಾಗದಲ್ಲಿ ಮದ್ಯದ 50ಕ್ಕೂ ಅಧಿಕ ಖಾಲಿ ಬಾಟಲಿಗಳನ್ನು ಸುರಿಯಲಾಗಿದೆ. ರಾತ್ರಿ ವೇಳೆ ಈ ಜಾಗ ಕುಡುಕರ ತಾಣವಾಗಿದೆಯೇ ಎಂಬ ಅನುಮಾನ ಕಾಡುತ್ತಿದೆ.

ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್‌ ಅಧಿಕಾರ ವಹಿಸಿಕೊಂಡ ಬಳಿಕ ನಗರದ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿದ್ದರು. ಎಲ್ಲ ವಾರ್ಡ್‌ಗಳಲ್ಲಿ ಸ್ವಚ್ಛತಾ ಅಭಿಯಾನ ಕೈಗೊಂಡು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದರು. ಆದರೆ ಇಂದಿಗೂ ಕೆಲವು ವಾರ್ಡ್ ಹಾಗೂ ಪ್ರಮುಖ ಜಾಗದಲ್ಲಿ ಎಲ್ಲೆಂದರಲ್ಲಿ ಪ್ಲಾಸ್ಟಿಕ್‌, ಘನತ್ಯಾಜ್ಯ, ಮದ್ಯದ ಬಾಟಲಿಗಳನ್ನು ಎಸೆಯುವ ಮೂಲಕ ನಗರದ ಅಂದವನ್ನು ಕೆಡಿಸಲಾಗುತ್ತಿದೆ.

ಸೋಮವಾರ ರಜೆ ದಿನ ಹೊರತುಪಡಿಸಿ ಪ್ರತಿ ಮಂಗಳವಾರದಿಂದ ಭಾನುವಾರದವರೆಗೂ ಗ್ರಂಥಾಲಯ ತೆರೆದಿರುತ್ತದೆ. ರಾತ್ರಿ ಸಮಯ ಯಾರು ಇಲ್ಲದ ವೇಳೆ ಕೆಲವರು ಜಾಗವನ್ನು ಅತಿಕ್ರಮವಾಗಿ ಪ್ರವೇಶಿಸಿ ಅಕ್ರಮ ಚಟುವಟಿಯಾಗಿ ಮಾಡಿಕೊಂಡಿದ್ದಾರೆ. ಲಾರಿಗಳನ್ನು ಇಲ್ಲಿಯೇ ನಿಲ್ಲಿಸಲಾಗುತ್ತದೆ. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮವಾಗಿಲ್ಲ ಎಂದು ಗ್ರಂಥಾಲಯ ಮೇಲ್ವಿಚಾರಕ ಮಂಜುನಾಥಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಮಾತನಾಡಿ, ‘ಖಾಲಿ ಜಾಗವು ವ್ಯವಸೋಯೋತ್ಪನ್ನ ಸಹಕಾರ ಸಂಘಕ್ಕೆ ಸೇರಿದೆ. ಯಾವುದೇ ಖಾಲಿ ನಿವೇಶನಗಳಲ್ಲಿ ಸ್ವಚ್ಛತೆ ಕಾಪಾಡುವುದು ಅವರ ಜವಾಬ್ದಾರಿ. ಗ್ರಂಥಾಲಯ ಎದುರಿನಲ್ಲಿಯೇ ಮದ್ಯದ ಬಾಟಲಿ ತ್ಯಾಜ್ಯ ಸುರಿದಿರುವ ಬಗ್ಗೆ ತೆರವುಗೊಳಿಸಲು ನೋಟಿಸ್ ನೀಡಲಾಗುವುದು’ ಎಂದರು. ಇಲ್ಲಿ ಯಾವುದೇ ಕಾಂಪೌಂಡ್ ಇಲ್ಲದ ಕಾರಣ ರಾತ್ರಿ ವೇಳೆಯಲ್ಲಿ ಪುಂಡರಿಗೆ ಅಕ್ರಮ ಚಟುವಟಿಕೆ ಜಾಗವಾಗಿದೆ. ಈ ಬಗ್ಗೆ ಪೊಲೀಸರ ಗಮನಕ್ಕೂ ತರಲಾಗುವುದು ಎಂದು ಹೇಳಿದರು.

ಮದ್ಯದ ಖಾಲಿ ಬಾಟಲಿಗಳ ರಾಶಿ
ಮದ್ಯದ ಖಾಲಿ ಬಾಟಲಿಗಳ ರಾಶಿ
ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗೆ ಪುಸ್ತಕ ಹಾಗೂ ದಿನಪತ್ರಿಕೆಗಳನ್ನು ಓದವವರು ಬರುತ್ತೇನೆ. ಗ್ರಂಥಾಲಯ ಆವರಣದಲ್ಲಿಯೇ ಮದ್ಯದ ಬಾಟಲಿ ಸುರಿದು ನೈರ್ಮಲ್ಯ ಕೆಡಿಸಲಾಗಿದೆ. ಸ್ವಚ್ಛತೆ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಕ್ರಮವಹಿಸಿ ಸೂಚನೆ ನೀಡಬೇಕು
–ವಿಜಯಕುಮಾರ್ ಓದುಗ ಚಿಕ್ಕಮಗಳೂರು
ಗ್ರಂಥಾಲಯ ಆವರಣದ ಮುಂಭಾಗದಲ್ಲಿರುವ ಮದ್ಯದ ಬಾಟಲಿಗಳನ್ನು ತೆರವುಗೊಳಿಸಿ ಖಾಲಿ ಜಾಗದ ಸ್ವಚ್ಛತೆಗೆ ನಗರಸಭೆಯಿಂದ ವ್ಯವಸಾಯೋತ್ಪನ್ನ ಸಹಕಾರ ಸಂಘದ ಆಡಳಿತ ಮಂಡಳಿಗೆ ನೋಟಿಸ್ ನೀಡಲಾಗುವುದು.
ವರಸಿದ್ಧಿ ವೇಣುಗೋಪಾಲ್‌ ನಗರಸಭೆ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT