ಗುರುವಾರ , ಅಕ್ಟೋಬರ್ 29, 2020
28 °C
ಕೋವಿಡ್‌ ಬಿಕ್ಕಟ್ಟು: ಕೃಷಿ ಚಟುವಟಿಕೆ ಮಾಹಿತಿ– ಮಾರ್ಗದರ್ಶನಕ್ಕೆ ಹೊಸ ದಾರಿ

ಇ–ತಂತ್ರಜ್ಞಾನದೆಡೆಗೆ ಅನ್ನದಾತರ ಒಲವು

ಬಿ.ಜೆ.ಧನ್ಯಪ್ರಸಾದ್‌ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ಕೋವಿಡ್‌ ಕಾಲಘಟ್ಟದಲ್ಲಿ ಕೃಷಿ ಚಟುವಟಿಕೆ ಮಾಹಿತಿ– ಮಾರ್ಗದರ್ಶನಕ್ಕೆ ರೈತರು ಇ–ತಂತ್ರಜ್ಞಾನದ ಕಡೆಗೆ ಚಿತ್ತ ಹರಿಸಿದ್ದಾರೆ. ಕೃಷಿ ವಿಜ್ಞಾನ ಕೇಂದ್ರ (ಕೆವಿಕೆ) ‘ಆ್ಯಪ್‌’, ‘ವಾಟ್ಸ್‌ಆ್ಯಪ್‌’, ‘ಜೂಮ್‌’, ‘ಗೂಗಲ್‌ ಮೀಟ್‌’ ಸೌಲಭ್ಯಗಳ ಮೂಲಕ ಕೃಷಿಕರಿಗೆ ಸಲಹೆ ನೀಡುತ್ತಿವೆ.

ಉದ್ಯೋಗ ಅರಸಿ ನಗರಗಳಿಗೆ ವಲಸೆ ಹೋಗಿದ್ದ ಬಹಳಷ್ಟು ಮಂದಿ ಹಳ್ಳಿಗಳಿಗೆ ವಾಪಸಾಗಿದ್ದಾರೆ. ಊರಿಗೆ ಹಿಂದಿರುಗಿರುವವರಲ್ಲಿ ಹಲವರು ಮೇಟಿ ವಿದ್ಯೆಯಲ್ಲಿ ತೊಡಗಿದ್ದಾರೆ. ಕೋವಿಡ್‌ ಬಿಕ್ಕಟ್ಟಿನ ನಡುವೆ ರೈತರು ಪಟ್ಟಣಗಳ ಕಡೆಗೆ ಬರುವುದು ಕಡಿಮೆಯಾಗಿದೆ.

ಈಗ ಇ–ತಂತ್ರಜ್ಞಾನವು ಕೃಷಿ ವಿಜ್ಞಾನ ಕೇಂದ್ರ ಮತ್ತು ರೈತರು ನಡುವೆ ವಿಚಾರ ವಿನಿಮಯಕ್ಕೆ ಕೊಂಡಿಯಾಗಿದೆ. ರೈತರು ಇದ್ದಲ್ಲಿಯೇ ಮೊಬೈಲ್‌ ಫೋನ್‌ನಲ್ಲಿ ಕೃಷಿ ಚಟುವಟಿಕೆ ವಿಚಾರಗಳನ್ನು ತಿಳಿದುಕೊಂಡು, ಅನ್ವಯಿಸುವುದರಲ್ಲಿ ನಿರತರಾಗಿದ್ದಾರೆ.

ಜಿಲ್ಲೆಯ ಮೂಡಿಗೆರೆಯಲ್ಲಿನ ಕೃಷಿ ವಿಜ್ಞಾನ ಕೇಂದ್ರವು ಇ–ತಂತ್ರಜ್ಞಾನದ ಮೂಲಕ ಬೆಳೆಗಾರರನ್ನು ತಲುಪುತ್ತಿದೆ. ಕೇಂದ್ರದ ಕಾರ್ಯ ಚಟುವಟಿಕೆಗಳು ವಿಸ್ತರಣೆಯಾಗಿವೆ. ಕೇಂದ್ರದಲ್ಲಿನ ವಿಜ್ಞಾನಿಗಳು, ಸಂಪನ್ಮೂಲ ವ್ಯಕ್ತಿಗಳು ಮೊಬೈಲ್‌, ಆನ್‌ಲೈನ್‌ ಮೂಲಕ ಕೃಷಿಕರಿಗೆ ಸಲಹೆ ನೀಡುವುದರಲ್ಲಿ ನಿರತರಾಗಿದ್ದಾರೆ.

ಈ ಕೇಂದ್ರದಿಂದ ರೈತರ 29 ‘ವಾಟ್ಸ್‌ಆ್ಯಪ್‌’ ಗುಂಪು ಮಾಡಲಾಗಿದೆ. ‘ಕಿಸಾನ್ ಸುವಿಧಾ’ ಭಾರತೀಯ ಕೃಷಿ ಸಂಶೋಧನಾ ಪರಿಷತ್‌ನ (ಐಸಿಎಆರ್‌) ‘ಮೇಘ್‌ ದೂತ್‌’ ಆ್ಯಪ್‌ಗಳ ಬಳಕೆ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ‘ಜೂಮ್‌’, ‘ಗೂಗಲ್‌ ಮೀಟ್‌’ ಮೂಲಕ 25ಕ್ಕೂ ಹೆಚ್ಚು ತರಬೇತಿಗಳನ್ನು ಆಯೋಜಿಸಿದ್ದಾರೆ. ಬೆಳೆ ಕಟಾವು, ಯಂತ್ರೋಪಕರಣ ಬಳಕೆ, ನರ್ಸರಿ ನಿರ್ವಹಣೆ ಇತ್ಯಾದಿಗೆ ಸಂಬಂಧಿಸಿದಂತೆ ವಿಡಿಯೊ ಸಿದ್ಧಪಡಿಸಿದ್ದಾರೆ. ಬಯಲುಸೀಮೆ ಮತ್ತು ಮಲೆನಾಡು ಎರಡೂ ಭಾಗದ ಬೆಳೆಗಳ ಕಡೆಗೆ ಗಮನ ಹರಿಸಿದ್ದಾರೆ. ಭತ್ತ, ಕಾಳುಮೆಣಸು, ಅಣಬೆ, ಬಾಳೆ, ಅಡಿಕೆ, ಏಲಕ್ಕಿ, ಶೇಂಗಾ, ಮೆಕ್ಕೆಜೋಳ, ಈರುಳ್ಳಿ ಮುಂತಾದ ಬೆಳೆಗಳಿಗೆ ಸಂಬಂಧಿಸಿದಂತೆ ಅಪ್ಡೇಟ್‌ ಮಾಹಿತಿ ನೀಡುವ ಕಾಯಕ ನಿರ್ವಹಣೆ ಮಾಡುತ್ತಿದ್ದಾರೆ.

ಇ–ತಂತ್ರಜ್ಞಾನದಿಂದಾಗಿ ಕೆವಿಕೆಗೆ ಹೋಗಿಬರುವ ಸಮಯ, ಶ್ರಮ, ಹಣ ಉಳಿತಾಯವಾಗಿದೆ. ಅನುಕೂಲ ಆಗಿದೆ. ಆದರೆ, ಮಲೆನಾಡು ಭಾಗದಲ್ಲಿ ನೆಟ್‌ವರ್ಕ್‌ ಸಮಸ್ಯೆ ಬಹಳ ಇದೆ. ನೆಟ್‌ವರ್ಕ್‌ ಹುಡುಕುವುದೇ ಸವಾಲು. ಈ ಸಮಸ್ಯೆ ಪರಿಹಾರಕ್ಕೆ ಸರ್ಕಾರ ಕ್ರಮ ವಹಿಸಬೇಕು ಎಂಬುದು ರೈತರ ಮೊರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು