ಮಂಗಳವಾರ, ಜೂಲೈ 7, 2020
27 °C
ಲಾಕ್‌ಡೌನ್‌ ಪರಿಣಾಮ: ಪಟ್ಟಣದಿಂದ ಹಳ್ಳಿಗೆ ವಾಪಸಾದವರಿಗೆ ಆಶಾಕಿರಣ

ಚಿಕ್ಕಮಗಳೂರು | ಬದುಕಿಗೆ ‘ಖಾತ್ರಿ’ ನೀಡಿದ ನರೇಗಾ

ಬಾಲುಮಚ್ಚೇರಿ Updated:

ಅಕ್ಷರ ಗಾತ್ರ : | |

Prajavani

ಕಡೂರು: ಉದ್ಯೋಗವನ್ನು ಅರಸಿ ಪಟ್ಟಣ ಸೇರಿದ್ದ ಬಹುತೇಕ ಜನರು ಲಾಕ್‌ಡೌನ್‌ನಿಂದಾಗಿ ಕೆಲಸವಿಲ್ಲದೆ ಸ್ವಗ್ರಾಮಗಳಿಗೆ ವಾಪಸಾಗುತ್ತಿದ್ದಾರೆ. ತಾಲ್ಲೂಕಿನಲ್ಲಿ ಅಂತಹ ಜನರಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ (ಮನರೇಗಾ) ಆಸರೆ ಒದಗಿಸಿದೆ.

ತಾಲ್ಲೂಕಿನಲ್ಲಿ ನರೇಗಾ ಯೋಜನೆ ಯ ಪ್ರಗತಿ ಮಂದಗತಿಯಲ್ಲಿತ್ತು. ಕಾರ್ಮಿಕರ ಕೊರತೆ ಇದಕ್ಕೆ ಪ್ರಮುಖ ಕಾರಣವಾಗಿತ್ತು. ಖಾಸಗಿಯಾಗಿ ಕೂಲಿ ಕೆಲಸ ಮಾಡುವವರಿಗೆ ನಿತ್ಯ ₹ 400 ರಿಂದ ₹ 500 ಕೂಲಿ ದೊರೆಯುತ್ತದೆ. ನರೇಗಾದ ಕೂಲಿ ಕಡಿಮೆ ಎಂಬ ನೆಪದಿಂದ ಬಹಳಷ್ಟು ಜನರು ಇದರತ್ತ ಗಮನ ಹರಿಸಿರಲಿಲ್ಲ.

ಪಟ್ಟಣದಿಂದ ವಾಪಸಾದ ಹಲವರಿಗೆ ಮತ್ತೆ ಹಿಂದಿನ ಉದ್ಯೋಗಕ್ಕೆ ಹೋಗಲು ಸಾಧ್ಯವಾಗದೆ ಮನೆಯಲ್ಲಿ ಉಳಿಯುವಂತಾಗಿದೆ. ಹೀಗಾಗಿ, ಹಳ್ಳಿಯಲ್ಲೇ ಉದ್ಯೋಗಕ್ಕಾಗಿ ಗ್ರಾಮ ಪಂಚಾಯಿತಿಗಳತ್ತ ಮುಖಮಾಡಿ, ಉದ್ಯೋಗ ಖಾತ್ರಿ ಜಾಬ್‌ಕಾರ್ಡ್ ಮಾಡಲು ಮುಂದಾಗಿದ್ದಾರೆ.

ಪ್ರತಿ ಕಾರ್ಮಿಕರಿಗೆ ಕನಿಷ್ಠ 100 ದಿನಗಳ ಉದ್ಯೋಗ ಲಭ್ಯವಿದೆ. ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ 5 ದಿನಗಳೊಳಗೆ ಕೆಲಸ ಸಿಗುತ್ತದೆ. ದಿನಕ್ಕೆ ₹ 275 ವೇತನ ನೀಡಲಾಗುತ್ತದೆ. ಕಾಮಗಾರಿ ಸ್ಥಳದಲ್ಲಿ ಒಂದಿಷ್ಟು ಕನಿಷ್ಠ ಮೂಲಸೌಕರ್ಯ ಕಾರ್ಮಿಕರಿಗೆ ಲಭ್ಯ ಇದೆ. ಕೆಲಸ ಮಾಡಿದ ದಿನಗಳ ವೇತನ 15 ದಿನಗಳೊಳಗೆ ಬ್ಯಾಂಕ್ ಖಾತೆಗೆ ಸಂದಾಯವಾಗುತ್ತದೆ. ವೈಯಕ್ತಿಕ ಕಾಮಗಾರಿಗಳು ಸೇರಿದಂತೆ ಹೊಲಗಳಲ್ಲಿ ಬದು ನಿರ್ಮಾಣ, ಕೃಷಿಹೊಂಡ ಮುಂತಾದ ಕಾಮಗಾರಿಗಳು ನರೇಗಾ ಯೋಜನೆಯಡಿ ನಡೆಯುತ್ತವೆ.

ನರೇಗಾ ಯೋಜನೆಯಲ್ಲಿ ತಾಲ್ಲೂಕಿನ 40,249 ಕುಟುಂಬಗಳ 97,349 ಮಂದಿ ಜಾಬ್‌ಕಾರ್ಡ್ ಪಡೆದಿದ್ದಾರೆ. ಲಾಕ್‌ಡೌನ್ ನಂತರದಲ್ಲಿ 191 ಕುಟುಂಬಗಳ 506 ಜನರು ಜಾಬ್ ಕಾರ್ಡ್ ಪಡೆದಿದ್ದಾರೆ. ಎಸ್.ಬಿದರೆ, ಎಮ್ಮೆದೊಡ್ಡಿ, ನಿಡುವಳ್ಳಿ, ಚೌಳಹಿರಿಯೂರು ಮುಂತಾದ ಕಡೆ ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿಗಳು ಪ್ರಾರಂಭವಾಗಿವೆ. ಪಟ್ಟಣ ಬಿಟ್ಟು ಬಂದವರು ಖಾತ್ರಿ ಯೋಜನೆಯಡಿ ಕಾರ್ಯ ಮಾಡುತ್ತಿದ್ದಾರೆ.

ಒಟ್ಟಾರೆ ಪಟ್ಟಣದ ಉದ್ಯೋಗ ಬಿಟ್ಟು ಬಂದು ವಾಪಸ್‌ ಹೋಗಲಾರದೆ ಯೋಚನೆಯಲ್ಲಿದ್ದವರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ದೊರೆತು, ಒಂದಿಷ್ಟು ನೆಮ್ಮದಿ ದೊರೆತಂತಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು