ಚಿಕ್ಕಮಗಳೂರು: ಗಾಂಜಾ ಸೇವಿಸಿದ್ದಾರೆ ಎನ್ನಲಾದ ಇಬ್ಬರು ಯುವಕರು ರಸ್ತೆ ಬದಿ ಕನ್ನಡಕ ಮತ್ತು ಟೋಪಿ ಮಾರಾಟ ಮಾಡುತ್ತಿದ್ದ ಮಹಿಳೆಯ ಮೇಲೆ ದಾಳಿ ನಡೆಸಿ ಕನ್ನಡಕಗಳನ್ನು ಪುಡಿಪುಡಿ ಮಾಡಿದ್ದಾರೆ.
ಆಂಧ್ರ ಪ್ರದೇಶದ ಲಕ್ಷ್ಮಿ ಎಂಬುವರು ನಗರದ ಕೋಟೆಕೆರೆ ಬಳಿ ರಸ್ತೆ ಬದಿಯಲ್ಲಿ ಕನ್ನಡಕ ಮತ್ತು ಟೋಪಿಗಳನ್ನು ಮಾರಾಟ ಮಾಡುತ್ತಿದ್ದರು. ನಗರದ ರಾಮನಹಳ್ಳಿಯ ವಿನೋದ್ ಮತ್ತು ಬೆಂಗಳೂರಿನ ಜೀವನ್ ಯುವಕರು ಬಂದು ಎರಡು ಕನ್ನಡ ಪಡೆದಿದ್ದಾರೆ. ಒಂದಕ್ಕೆ ₹100ರಂತೆ ₹200 ಕೊಡುವಂತೆ ಮಹಿಳೆ ಕೇಳಿದ್ದಾರೆ. ₹150 ಕೊಡುವುದಾಗಿ ಯುವಕರು ಹೇಳಿದ್ದಾರೆ. ಅದಕ್ಕೆ ಒಪ್ಪದಿದ್ದಾಗ ಎಲ್ಲಾ ಕನ್ನಡಕಗಳನ್ನು ರಸ್ತೆಗೆ ಬಿಸಾಡಿ ತುಳಿದಿದ್ದಾರೆ.
ಅಸಹಾಯಕರಾದ ಮಹಿಳೆ ಕಣ್ಣೀರುಡುತ್ತಿದ್ದರು. ಸ್ಥಳದಲ್ಲಿದ್ದವರು ಕೃತ್ಯವನ್ನು ಮೊಬೈಲ್‌ನಲ್ಲಿ ವಿಡಿಯೊ ಮಾಡಿದ್ದು, ಪೊಲೀಸರಿಗೆ ಒಪ್ಪಿಸಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು, ಮಾಗಡಿ ಬಳಿಯ ಮದ್ಯದ ಅಂಗಡಿಯಲ್ಲಿ ಮದ್ಯಪಾನ ಸೇವಿಸುತ್ತಿದ್ದ ಇಬ್ಬರನ್ನು ಬಂಧಿಸಿದ್ದಾರೆ.
ಇಬ್ಬರೂ ಗಾಮಜಾ ಸೇವಿಸಿರುವ ಅನುಮಾನ ಇದ್ದು, ಪರೀಕ್ಷೆಗೆ ಒಳಪಡಿಸಲಾಗಿದೆ. ದೃಢಪಟ್ಟರೆ ಇಬ್ಬರ ವಿರುದ್ಧ ಮಾದಕ ವಸ್ತು ನಿಯಂತ್ರಣ ಕಾಯ್ದೆ (ಎನ್‌ಡಿಪಿಎಸ್) ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಗಾಜುಗಳನ್ನು ಪುಡಿ ಮಾಡಿದ ಪ್ರಕರಣದಲ್ಲಿ ದೂರು ನೀಡಲು ಮಹಿಳೆ ನಿರಾಕರಿಸುತ್ತಿದ್ದಾರೆ. ಪುಡಿಯಾಗಿರುವ ಕನ್ನಡಕದ ಹಣ ಕೊಡಿಸಿದರೆ ಸಾಕು ಎಂದು ಕೇಳುತ್ತಿದ್ದಾರೆ. ಆರೋಪಿಗಳಿಂದ ಹಣ ಕೊಡಿಸಲಾಗುವುದು. ದೂರು ನೀಡಿದರೆ ಪ್ರಕರಣ ದಾಖಲಿಸಲಾಗುವುದು ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.