ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಊರುಬಗೆ: ಕಾಡಾನೆ ಸೆರೆ ಕಾರ್ಯಾಚರಣೆ ಆರಂಭ

‘ಮೂಡಿಗೆರೆ ಭೈರ’ನ ಹೆಜ್ಜೆಯ ಜಾಡು ಹಿಡಿದು ಸ್ಥಳಾಂತರಕ್ಕೆ ಯೋಜನೆ
Last Updated 13 ಸೆಪ್ಟೆಂಬರ್ 2022, 5:42 IST
ಅಕ್ಷರ ಗಾತ್ರ

ಮೂಡಿಗೆರೆ: ತಾಲ್ಲೂಕಿನ ಊರುಬಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉಪಟಳ ನೀಡುತ್ತಿರುವ ‘ಮೂಡಿಗೆರೆ ಭೈರ’ ಎಂದೇ ಸ್ಥಳೀಯರಿಂದ ಗುರುತಿಸಿರುವ ಕಾಡಾನೆಯನ್ನು ಹಿಡಿದು ಸ್ಥಳಾಂತರಿಸಲು ಆದೇಶವಾದ ಬೆನ್ನಲ್ಲೇ ಕಾರ್ಯಾಚರಣೆ ಪ್ರಾರಂಭವಾಗಿದೆ.

ಚಿಕ್ಕಮಗಳೂರಿನ ವನ್ಯಜೀವಿ ವಿಭಾಗದ ವೈದ್ಯ ಡಾ.ಯಶಸ್ ನೇತೃತ್ವದ ತಂಡವು ಸೋಮವಾರ ಊರುಬಗೆ ಗ್ರಾಮಕ್ಕೆ ಭೇಟಿ ನೀಡಿದ್ದು, ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧೆಡೆ ಸಂಚರಿಸಿ ಕಾಡಾನೆಯ ಮಾಹಿತಿ ಪಡೆದುಕೊಂಡರು.

ಕಾರ್ಯಾಚರಣೆಗಾಗಿ ಎಂಟಕ್ಕೂ ಅಧಿಕ ಮಂದಿ ಸ್ಥಳೀಯ ಯುವಕರ ನೆರವು ಪಡೆಯಲಾಗಿದ್ದು, ಕಾಡಾನೆ ಸಾಗಿದ ಪ್ರದೇಶದಲ್ಲಿ ಕಾಡಾನೆಯ ಹೆಜ್ಜೆಯ ಜಾಡು ಹಿಡಿದು ಮಾಹಿತಿ ಕಲೆ ಹಾಕಲಾಗಿದೆ.

ಕಾಡಾನೆಯು ಊರುಬಗೆ ಗ್ರಾಮ ಪಂಚಾಯಿತಿಯ ಭೈದುವಳ್ಳಿ ಗ್ರಾಮದಲ್ಲಿ ಬೀಡುಬಿಟ್ಟಿದೆ ಎನ್ನಲಾಗಿದ್ದು, ತಾಲ್ಲೂಕಿನಲ್ಲಿ ಸುರಿಯುತ್ತಿರುವ ಮಳೆಯು ಕಾಡಾನೆಯನ್ನು ಹಿಡಿದು ಸ್ಥಳಾಂತರಿಸಲು ಅಡ್ಡಿಯಾಗಿದ್ದು, 15 ರ ಬಳಿಕ ಸಕ್ರೇಬೈಲ್ ನಿಂದ ಆನೆಗಳನ್ನು ತಂದು ಸೆರೆಹಿಡಿಯುವ ಕಾರ್ಯಾಚರಣೆ ಮಾಡಲಾಗುವುದು ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.

ಶಾಶ್ವತ ಪರಿಹಾರ ಕಲ್ಪಿಸಲು ಆಗ್ರಹ

ಮೂಡಿಗೆರೆ: ತಾಲ್ಲೂಕಿನ ಕುಂದೂರು, ಕೆಂಜಿಗೆ ಭಾಗಗಳಲ್ಲಿ ನಡೆಯುತ್ತಿರುವ ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ರೂಪಿಸಬೇಕು ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಸಿ. ರತನ್ ಒತ್ತಾಯಿಸಿದರು.

ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ಇತ್ತೀಚೆಗೆ ಊರುಬಗೆ ಗ್ರಾಮದಲ್ಲಿ ಅರ್ಜುನ್ ಎಂಬುವರು ಕಾಡಾನೆ ದಾಳಿಯಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಸರ್ಕಾರ ಕೇವಲ ಒಂದು ಕಾಡಾನೆಯನ್ನು ಹಿಡಿಯಲು ಆದೇಶ ನೀಡಿದೆ. ಕೆಂಜಿಗೆ, ಕುಂದೂರು ಭಾಗಗಳಲ್ಲಿ ಇನ್ನೂ ಎರಡು ಕಾಡಾನೆಗಳಿದ್ದು, ಅವು ನಾಲ್ಕು ಜನರನ್ನು ಹತ್ಯೆ ಮಾಡಿವೆ. ಅವುಗಳನ್ನು ಹಿಡಿಯುವ ಮೂಲಕ ಶಾಶ್ವತ ಪರಿಹಾರ ರೂಪಿಸಬೇಕು’ ಎಂದರು.

ಕಾಫಿ ಬೆಳೆಗಾರ ಸುಂದರೇಶ್ ಕುಂದೂರು ಮಾತನಾಡಿ, ‘ಕಾಡಾನೆ ಹಾವಳಿ ಕೇವಲ ಊರುಬಗೆ ಭಾಗದಲ್ಲಿ ಮಾತ್ರವಲ್ಲ ಕೆಂಜಿಗೆ ಕುಂದೂರು ಭಾಗದಲ್ಲೂ ಕಾಡಾನೆಗಳಿವೆ. ಈ ಕಾಡಾನೆಗಳಿಂದಲೂ ಜನರು ಸಾವನ್ನಪ್ಪಿದ್ದಾರೆ. ಆ ವೇಳೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದಾಗ ಅರಣ್ಯ ಅಧಿಕಾರಿಗಳು ಕಾಡಾನೆ ಹಿಡಿದು ಸ್ಥಳಾಂತರಿಸುವ ಭರವಸೆ ನೀಡಿದ್ದು ಬಿಟ್ಟರೆ ಕಾಡಾನೆಗಳನ್ನು ಸ್ಥಳಾಂತರಿಸಲೇ ಇಲ್ಲ. ಕೂಡಲೇ ಈ ಕಾಡಾನೆಗಳನ್ನೂ ಸ್ಥಳಾಂತರಿಸಬೇಕು’ ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಕೆ.ಬಿ ಮಂಜುನಾಥ್, ಸುಕುಮಾರ್ ಕಣಗದ್ದೆ, ಅಶ್ವತ್ ಕುಂದೂರು, ಸಂಜೀವದರ್ಶನ, ನವೀನ್ ತಳವಾರ ಇದ್ದರು.

ಪರಿಹಾರ ಹೆಚ್ಚಳಕ್ಕೆ ಪ್ರಯತ್ನ: ಪ್ರಾಣೇಶ್‌

ಮೂಡಿಗೆರೆ: ವನ್ಯಪ್ರಾಣಿ ಹಾವಳಿಯಿಂದ ಜಿಲ್ಲೆಯ ರೈತರು ಅನುಭವಿಸುತ್ತಿರುವ ಸಂಕಷ್ಟಗಳನ್ನು ಸರ್ಕಾರಕ್ಕೆ ಮನವರಿಕೆ ಮಾಡಿ ಕೊಡಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಂ.ಕೆ ಪ್ರಾಣೇಶ್ ತಿಳಿಸಿದರು.

ತಾಲ್ಲೂಕಿನ ಊರುಬಗೆ ಗ್ರಾಮ ದಲ್ಲಿ ಮೂರು ದಿನಗಳ ಹಿಂದೆ ಕಾಡಾನೆ ದಾಳಿಯಿಂದ ಸಾವನ್ನಪ್ಪಿದ ಅರ್ಜುನ್ ಮನೆಗೆ ಈಚೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ ಬಳಿಕ, ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿ ಅವರು ಮಾತನಾಡಿದರು.

‘ಕಾಡಾನೆಯನ್ನು ಹಿಡಿಯಲು ಮುಖ್ಯಮಂತ್ರಿಯೊಂದಿಗೆ ಚರ್ಚಿಸಲಾಗಿದೆ. ಇದಕ್ಕೆ ಸರ್ಕಾರ ಆದೇಶ ನೀಡಿದೆ. ವನ್ಯಪ್ರಾಣಿಗಳ ಹಾವಳಿಯಿಂದ ಸ್ಥಳೀಯ ರೈತರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲಾಗಿದ್ದು, ಕಾಡಾನೆ ದಾಳಿ ಯಿಂದ ಮೃತರಾದವರಿಗೆ ಸರ್ಕಾರ ಕೊಡುವ ಪರಿಹಾರದ ಹಣವನ್ನು ಹೆಚ್ಚಿಸಲು ಹಾಗೂ ಕಾಡು ಪ್ರಾಣಿಗಳ ಹಾವಳಿಯಿಂದ ನಷ್ಟ ಅನುಭವಿಸುತ್ತಿರುವ ರೈತರಿಗೆ ಸೂಕ್ತವಾದ ಪರಿಹಾರ ನೀಡುವಂತೆ ಅಧಿವೇಶನದಲ್ಲಿ ಚರ್ಚಿಸಲಾಗುವುದು’ ಎಂದರು.

ಬಿಜೆಪಿ ಗೋಣಿಬೀಡು ಹೋಬಳಿ ಅಧ್ಯಕ್ಷ ಭರತ್ ಕನ್ನೇಹಳ್ಳಿ, ಜಿಲ್ಲಾ ವಕ್ತಾರ ದೀಪಕ್ ದೊಡ್ಡಯ್ಯ, ಜಿಲ್ಲಾ ಕಾರ್ಯದರ್ಶಿ ಮನೋಜ್ ಹಳೆಕೋಟೆ, ಬಣಕಲ್ ಹೋಬಳಿ ಅಧ್ಯಕ್ಷರಾದ ಅನುಕುಮಾರ್, ಸಂತೋಷ್ ಕುಂಬರಡಿ, ಸುಂದ್ರೇಶ್ ಊರುಬಗೆ, ಸಂಜೀವಪ್ರಸಾದ್, ಪ್ರೇಮ್ ಕುಮಾರ್, ಮೋಹನ್ ಸಾಲಗೆರೆ, ರವಿಂದ್ರ ಬಾಳೆಗದ್ದೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT