ಬುಧವಾರ, ನವೆಂಬರ್ 25, 2020
25 °C
ಮೂಡಿಗೆರೆ: ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ

ಮೈತ್ರಿ ಬೆಂಬಲಿತ ಅಭ್ಯರ್ಥಿಗಳ ಮೇಲುಗೈ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೂಡಿಗೆರೆ: ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್, ಸಿಪಿಐ ಮೈತ್ರಿಯ ಬೆಂಬಲಿತ ಅಭ್ಯರ್ಥಿಗಳಿಗೆ ಗೆಲುವು ಸಿಕ್ಕಿದೆ.

ಎಂಟು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಏಕ ವ್ಯಕ್ತಿ ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್, ಜೆಡಿಎಸ್, ಸಿಪಿಐ ಮೈತ್ರಿಯ ಏಳುಮಂದಿ ಗೆಲುವು ಸಾಧಿಸುವ ಮೂಲಕ ಚುನಾವಣೆಯಲ್ಲಿ ಮೈತ್ರಿ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳ ಕೈ ಮೇಲಾಗಿದೆ.

‌ಸುಸೂತ್ರ ಮತದಾನ: ಸಂಸ್ಥೆಯ ಆಡಳಿತ ಮಂಡಳಿಗೆ ಮಂಗಳವಾರ ಮತದಾನವು ಸುಸೂತ್ರವಾಗಿ ನಡೆಯಿತು.

ರೈತ ಭವನದಲ್ಲಿ ನಡೆದ ಮತದಾನಕ್ಕೆ ತಾಲ್ಲೂಕಿನ ವಿವಿಧ ಭಾಗಗಳಿಂದ ಬಂದ ಮತದಾರರು ಸರದಿಯಲ್ಲಿ ನಿಂತು ಮತ ಚಲಾಯಿಸಿದರು. ವಿವಿಧ ಕ್ಷೇತ್ರಗಳಿಂದ ಒಟ್ಟು ಎಂಟು ಸ್ಥಾನಗಳಿಗೆ ಮತದಾನ ನಡೆದಿದ್ದು, ರೈತಭವನದ ಸಭಾಂಗಣದಲ್ಲಿ ನಾಲ್ಕು ಹಾಗೂ ಭೋಜನಾ ಶಾಲೆಯಲ್ಲಿ ನಾಲ್ಕು ಬೂತ್ ಗಳನ್ನು ತೆರೆಯಲಾಗಿತ್ತು.

ಬಿಜೆಪಿಯು ಏಕಾಂಗಿಯಾಗಿ ತನ್ನ ಬೆಂಬಲಿತ ಎಂಟು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಕಾಂಗ್ರೆಸ್, ಜೆಡಿಎಸ್, ಸಿಪಿಐ ಮೈತ್ರಿಕೂಟದ ಬೆಂಬಲಿತ ಎಂಟು ಮಂದಿಯನ್ನು ಕಣಕ್ಕಿಳಿಸಿ ಭಾರಿ ಪೈಪೋಟಿಯ ನಡುವೆ ಚುನಾವಣೆ ಎದುರಿಸಿದರು.

ಬೆಳಿಗ್ಗೆ 8 ಗಂಟೆಗೆ ಮತದಾನ ಪ್ರಕ್ರಿಯೆ ಪ್ರಾರಂಭವಾದ ಕೂಡಲೇ ವಿವಿಧ ರಾಜಕೀಯ ಪಕ್ಷಗಳ ಮುಖಂ ಡರು ಚುನಾವಣೆ ನಡೆಯುತ್ತಿದ್ದ ರೈತ ಭವನದ ಆವರಣದಲ್ಲಿ ಶಾಮಿಯಾನ ಹಾಕಿ ಮತದಾರರನ್ನು ಸೆಳೆಯುತ್ತಿದ್ದ ದೃಶ್ಯ ಕಂಡುಬಂದಿತು. ಸಂಜೆಯವರೆಗೂ ರಾಜಕೀಯ ಪಕ್ಷಗಳ ಮುಖಂಡರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು.

ಹಿಂದಿನ ಆಡಳಿತ ಮಂಡಳಿ ಯಿಂದ ಅನರ್ಹಗೊಂಡಿದ್ದ ಷೇರುದಾರ ರೊಬ್ಬರು ನ್ಯಾಯಾಲಯದ ಆದೇಶ ಪಡೆದು ಮತ ಚಲಾವಣೆಗೆ ಬಂದಾಗ ಗುರುತಿನ ಚೀಟಿ ಇಲ್ಲದೇ ಪರದಾಟ ನಡೆಸಬೇಕಾಯಿತು. ಬಳಿಕ ಸ್ಥಳದಲ್ಲೇ ಫೋಟೊ ತೆಗೆದು ಗುರುತಿನ ಚೀಟಿ ಮಾಡಿಕೊಡುವ ವ್ಯವಸ್ಥೆ ಕಲ್ಪಿಸಿ ಮತದಾನಕ್ಕೆ ಅವಕಾಶ ಕಲ್ಪಿಸಲಾಯಿತು.

ವಾಹನ ಸಂಚಾರಕ್ಕೆ ಅಡ್ಡಿ: ಮತ ಚಲಾಯಿಸಲು ತಾಲ್ಲೂಕಿನ ವಿವೀಧ ಭಾಗಗಳಿಂದ ಬಂದಿದ್ದ ಮತದಾರರು ಹಾಗೂ ವಿವಿಧ ರಾಜಕೀಯ ಪಕ್ಷಗಳ ಬೆಂಬಲಿಗರಿಂದಾಗಿ ಬೆಳಿಗ್ಗೆಯಿಂದಲೇ ರೈತ ಭವನದ ಆವರಣ ಹಾಗೂ ಎದುರಿನ ರಸ್ತೆಯ ಎರಡೂ ಬದಿಯಲ್ಲಿ ವಾಹನಗಳ ದಟ್ಟಟಣೆ ಹೆಚ್ಚಳವಾಗಿತ್ತು. ವಾಹನಗಳನ್ನು ಅಡ್ಡಾದಿಡ್ಡಿ ನಿಲ್ಲಿಸಿದ್ದರಿಂದ ಹ್ಯಾಂಡ್‍ಪೋಸ್ಟ್‌ನಿಂದ ಗಂಗನ ಮಕ್ಕಿವರೆಗೆ 2 ಕಿ. ಮೀ ದೂರದವರೆಗೂ ರಾಷ್ಟ್ರೀಯ ಹೆದ್ದಾರಿ 173 ರಲ್ಲಿ ಇಡೀ ದಿನ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು