ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು: ನಗರಸಭೆ ಮತ್ತೆ ಬಿಜೆಪಿ ತೆಕ್ಕೆಗೆ

ಚುನಾವಣೆ ಫಲಿತಾಂಶ ಪ್ರಕಟ
Last Updated 31 ಡಿಸೆಂಬರ್ 2021, 2:34 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ನಗರಸಭೆ ಚುನಾವಣೆಯಲ್ಲಿ ಒಟ್ಟು 35 ಸ್ಥಾನಗಳ ಪೈಕಿ ಬಿಜೆಪಿ 18 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಮತ್ತೆ ಆಡಳಿತ ಚುಕ್ಕಾಣಿ ಹಿಡಿಯಲು ಸಿದ್ಧವಾಗಿದೆ.

ಬಿಜೆಪಿ ಈ ಬಾರಿಯೂ ಕಳೆದ ಬಾರಿಯಷ್ಟೇ ಸ್ಥಾನ ಗಳಿಸಿ ಯಥಾಸ್ಥಿತಿ ಕಾಪಾಡಿಕೊಂಡಿದೆ. ಕಾಂಗ್ರೆಸ್‌ 12 ಸ್ಥಾನ ಗಳಿಸಿ ಈ ಬಾರಿಯೂ ಪ್ರತಿಪಕ್ಷವಾಗಿಯೇ ಉಳಿದುಕೊಂಡಿದೆ.

ಇನ್ನು ಜೆಡಿಎಸ್‌ ಎರಡು, ಪಕ್ಷೇತರ ಎರಡು, ಎಸ್‌ಡಿಪಿಐ ಒಂದು ಸ್ಥಾನ ಗಳಿಸಿದೆ. ಎಸ್‌ಡಿಪಿಐ ಖಾತೆ ತೆರದಿದೆ. ಬಿಎಸ್‌ಪಿ, ಸಿಪಿಐ, ಆಮ್‌ ಆದ್ಮಿ ಪಕ್ಷಗಳು ಶೂನ್ಯ ಸಾಧನೆ ಮಾಡಿವೆ.

ಆಡಳಿತ ವಿರೋಧಿ ಅಲೆ ಇದೆ, ಈ ಬಾರಿ ಮತದಾರರು ಬದಲಾವಣೆ ಕಡೆಗೆ ಒಲವು ತೋರಲಿದ್ದಾರೆ ಎಂಬ ಕಾಂಗ್ರೆಸ್‌, ಇತರ ಪಕ್ಷಗಳ ಲೆಕ್ಕಾಚಾರ ಫಲಿಸಿಲ್ಲ. ಮೂರನೇ ಬಾರಿಗೆ ನಗರಸಭೆ ಆಡಳಿತ ಬಿಜೆಪಿಗೆ ಒಲಿದಿದೆ.

ವಿಧಾನ ಪರಿಷತ್‌ ಚುನಾವಣೆಯಲ್ಲಿ ಕಾಫಿನಾಡಿನಲ್ಲಿ ಬಿಜೆಪಿ ಅಭ್ಯರ್ಥಿಯು ಕೂದಲೆಳೆ ಅಂತರದಲ್ಲಿ ಗೆದ್ದಿದ್ದು ಆ ಪಕ್ಷಕ್ಕೆ ಎಚ್ಚರಿಕೆ ಘಂಟೆ ಬಾರಿಸಿತ್ತು. ವಿಧಾನ ಪರಿಷತ್‌ ಚುನಾವಣೆಯ ಬೆನ್ನಲ್ಲೇ ನಗರಸಭೆ ಚುನಾವಣೆ ಧುತ್ತನೆ ಎದುರಾಗಿತ್ತು. ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ಏರ್ಪಟ್ಟಿತ್ತು. ಜೆಡಿಎಸ್‌ ಹೊಂದಾಣಿಕೆ ‘ಆಸೆ’ ಕೈಗೂಡಲಿಲ್ಲ. ಹೀಗಾಗಿ, 12 ಕಡೆಗಳಲ್ಲಿ ಮಾತ್ರ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪಕ್ಷದ ಅಭ್ಯರ್ಥಿಗಳ ಪರ ವಾರ್ಡ್‌ಗಳಲ್ಲಿ ಪ್ರಚಾರ ನಡೆಸಿದರು. ಸಚಿವೆ ಶೋಭಾ ಕರಂದ್ಲಾಜೆ, ಬೆಳ್ಳಿ ಪ್ರಕಾಶ್‌, ಬೈರತಿ ಬಸವರಾಜ್‌, ಇತರ ನಾಯಕರು ಸಾಥ್‌ ನೀಡಿದ್ದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ, ವೀಕ್ಷಕ ಕಿಮ್ಮನೆ ರತ್ನಾಕರ, ಮುಖಂಡ ಮಧುಬಂಗಾರಪ್ಪ ಇತರ ನಾಯಕರು ಕಾಂಗ್ರೆಸ್‌ ಅಭ್ಯರ್ಥಿಗಳ ಪರ ಮತಯಾಚಿಸಿದ್ದರು.

ಜೆಡಿಎಸ್‌, ಆಮ್‌ ಆದ್ಮಿ, ಬಿಎಸ್‌ಪಿ, ಸಿಪಿಐ ಮುಖಂಡರು ಪಕ್ಷದ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿದ್ದರು.ಮತದಾರರು ನಾಡಿಮಿಡಿತ ಹಿಡಿಯುವ ನಿಟ್ಟಿನಲ್ಲಿ ಅಭ್ಯರ್ಥಿಗಳು, ಮುಖಂಡರು ತಂತ್ರ–ಪ್ರತಿತಂತ್ರಗಳನ್ನು ರೂಪಿಸಿದರು. ಗಲ್ಲಿಗಲ್ಲಿಗಳಲ್ಲಿ ಹಗಲುರಾತ್ರಿ ತಿರುಗಿ ಪ್ರಚಾರ ನಡೆಸಿದರು.

‘ಕಾಂಗ್ರೆಸ್ ಹಿಂದಿನ ಬಾರಿ ಚುನಾವಣೆಯಲ್ಲಿ10 ಸ್ಥಾನ ಗೆದ್ದಿತ್ತು. ಈ ಬಾರಿ 12 ಸ್ಥಾನ ಗಳಿಸಿದೆ. ಎರಡು ಸ್ಥಾನಗಳನ್ನು ಹೆಚ್ಚಿಸಿಕೊಂಡಿದೆ’ ಎಂದು ಪಕ್ಷದ ಮುಖಂಡ ಎಂ.ಸಿ.ಶಿವಾನಂದ ಸ್ವಾಮಿ ತಿಳಿಸಿದರು.

ಸ್ಥಾನ ಗಳಿಕೆ ಅಂಕಿಅಂಶ

ಬಿಜೆಪಿ18

ಕಾಂಗ್ರೆಸ್‌12

ಜೆಡಿಎಸ್‌02

ಎಸ್‌ಡಿಪಿಐ01

ಪಕ್ಷೇತರರು02

ಒಟ್ಟು35

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT