ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಲಸೆ ಕಾರ್ಮಿಕರ ನೋಂದಣಿ ಮಾಡಿಸದಿದ್ದರೆ ನೋಟಿಸ್: ಕಾರ್ಮಿಕ ಇಲಾಖೆ ಎಚ್ಚರಿಕೆ

Published : 17 ಸೆಪ್ಟೆಂಬರ್ 2024, 16:06 IST
Last Updated : 17 ಸೆಪ್ಟೆಂಬರ್ 2024, 16:06 IST
ಫಾಲೋ ಮಾಡಿ
Comments

ಚಿಕ್ಕಮಗಳೂರು: ‘ಬೇರೆ ರಾಜ್ಯಗಳಿಂದ ವಲಸೆ ಬಂದಿರುವ ಕಾರ್ಮಿಕರನ್ನು ಪೊಲೀಸ್ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡುವುದು ಕಡ್ಡಾಯ. ಮಾಡದವರ ವಿರುದ್ಧ ಕ್ರಮ ಕೈಗೊಳ್ಳಲು ತಯಾರಿ ನಡೆಸಲಾಗಿದೆ’ ಎಂದು ಸಹಾಯಕ ಕಾರ್ಮಿಕ ಆಯುಕ್ತ ಕೆ.ಎಲ್.ರವಿಕುಮಾರ್ ತಿಳಿಸಿದರು.

ಪ್ರೆಸ್‌ಕ್ಲಬ್ ವತಿಯಿಂದ ಮಂಗಳವಾರ ಆಯೋಜಿಸಿದ್ದ ತಿಂಗಳ ಅಥಿತಿ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘27 ತೋಟಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಕಾರ್ಮಿಕ ಕಾಯ್ದೆಗಳು ಸಮರ್ಪಕವಾಗಿ ಪಾಲನೆ ಆಗದಿರುವುದು ಗಮನಕ್ಕೆ ಬಂದಿದೆ. ನೋಟಿಸ್ ನೀಡಲು ತಯಾರಿ ಮಾಡಿಕೊಳ್ಳಲಾಗಿದೆ’ ಎಂದರು.

‘ಗ್ರಾಮ ಪಂಚಾಯಿತಿಗಳ ಸಹಕಾರ ಪಡೆದು ತೋಟದ ಮಾಲೀಕರೊಂದಿಗೆ ಮೂರು ಭಾರಿ ಸಭೆ ನಡೆಸಲಾಗಿದೆ. ವಲಸೆ ಕಾರ್ಮಿಕರ ವಿಳಾಸ ಸಹಿತ ಮಾಹಿತಿಯನ್ನು ಪೊಲೀಸ್ ವೆಬ್‌ಸೈಟ್‌ನಲ್ಲಿ ದಾಖಲಿಸಬೇಕಿದೆ. ಆದರೆ, ಅದು ಸರಿಯಾಗಿ ಆಗುತ್ತಿಲ್ಲ. 203 ತೋಟಗಳಿದ್ದು, 1,843 ವಲಸೆ ಕಾರ್ಮಿಕರಷ್ಟೇ ನೋಂದಣಿ ಮಾಡಿಸಿದ್ದಾರೆ. ಉಳಿದವರನ್ನೂ ನೋಂದಣಿ ಮಾಡಿಸುವುದು ತೋಟಗಳ ಮಾಲೀಕರ ಕೆಲಸ’ ಎಂದು ಹೇಳಿದರು.

ವಲಸೆ ಕಾರ್ಮಿಕರಿಗೆ ಕನಿಷ್ಠ ವೇತನ ನೀಡುತ್ತಿಲ್ಲ ಎಂಬ ದೂರುಗಳೂ ಇವೆ. ಆದ್ದರಿಂದ ಕಾರ್ಮಿಕ ಅಧಿಕಾರಿಗಳು ಆಗಾಗ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ತೋಟಗಳ ಮಾಲೀಕರಿಗೆ ಈವರೆಗೆ ಎಲ್ಲಾ ರೀತಿಯ ತಿಳುವಳಿಕೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕಾರ್ಮಿಕರು ಮತ್ತು ಮಾಲೀಕರ ನಡುವೆ ಆರೋಗ್ಯಕರ ವಾತಾವರಣ ಸೃಷ್ಟಿಸುವುದು ಕಾರ್ಮಿಕ ಇಲಾಖೆಯ ಧ್ಯೇಯ. ಅನೇಕ ಕಾನೂನು ಕ್ರಮಗಳನ್ನು ಕೈಗೊಂಡು ಅನುಷ್ಠಾನಕ್ಕೆ ಶ್ರಮಿಸುತ್ತಿದೆ ಎಂದು ಹೇಳಿದರು.

ಕೈಗಾರಿಕೆಗಳು ಕಾರ್ಮಿಕರಿಗೆ ವೇತನದ ಜತೆಗೆ ಕಾಲಕಾಲಕ್ಕೆ ಬೋನಸ್ ಪಾವತಿಸಬೇಕು. ಐದು ವರ್ಷ ಕಾರ್ಯನಿರ್ವಹಿಸಿದ ಕಾರ್ಮಿಕರಿಗೆ ಶೇ 15ರಷ್ಟು ಉಪಧನ ಪಾವತಿ ಮಾಡಬೇಕು. ಕಾರ್ಮಿಕರ ವೃತ್ತಿಕ್ಷಮತೆ ಆಧಾರದ ಮೇಲೆ ಶೇ 8.33 ರಿಂದ ಗರಿಷ್ಟ ಶೇ 20ರಷ್ಟು ಬೋನಸ್ಸ್ ನೀಡಬೇಕು ಕಾಯ್ದೆ ಹೇಳುತ್ತದೆ ಎಂದರು.

ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ರಾಜೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ತಾರಾನಾಥ್, ಕಾರ್ಮಿಕ ಇಲಾಖೆ ಅಧಿಕಾರಿಗಳಾದ ಪ್ರಭಾಕರ್, ಸಮರ್ಥ, ರಾಘವೇಂದ್ರ, ಮಹಮದ್ ನಯಾಜ್ ಇದ್ದರು.

1.47 ಲಕ್ಷ ಕಾರ್ಮಿಕರು ನೋಂದಣಿ
‘ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಸೌಲಭ್ಯಗಳನ್ನು ಪಡೆಯಲು ಜಿಲ್ಲೆಯಲ್ಲಿ 1.47 ಲಕ್ಷ ಕಾರ್ಮಿಕರು ನೋಂದಣಿ ಮಾಡಿಸಿಕೊಂಡಿದ್ದಾರೆ’ ಎಂದು ಕೆ.ಎಲ್.ರವಿಕುಮಾರ್ ತಿಳಿಸಿದರು. ‘ನೋಂದಣಿಯಾದ ಕಾರ್ಮಿಕರ ಮಕ್ಕಳ ಮದುವೆಗೆ ಸಹಾಯಧನ ನೀಡುವ ಯೋಜನೆಯಡಿ 2014ರಿಂದ ಈವರೆಗೆ 5272 ಫಲಾನುಭವಿಗಳಿಗೆ ₹27.59 ಕೋಟಿ ವಿತರಿಸಲಾಗಿದೆ. ಶೈಕ್ಷಣಿಕ ಸಹಾಯಧನ ಯೋಜನೆಯಡಿ 23242 ಫಲಾನುಭವಿಗಳಿಗೆ ₹19.95 ಕೋಟಿ 1527 ಫಲಾನುಭವಿಗಳಿಗೆ ಹೆರಿಗೆ ಸಹಾಯಧನ ಮಂಜೂರಾತಿ ಆದೇಶ ನೀಡಿ ₹4.44 ಕೋಟಿ ವಿತರಿಸಲಾಗಿದೆ’ ಎಂದು ವಿವರಿಸಿದರು. 335 ಫಲಾನುಭವಿಗಳಿಗೆ ಪ್ರಮುಖ ವೈದ್ಯಕೀಯ ಸಹಾಯಧನ ಮಂಜೂರು ಮಾಡಿ ₹1.31 ಕೋಟಿ ನೆರವು ನೀಡಲಾಗಿದೆ ಎಂದು ಹೇಳಿದರು.
ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ
20 ವರ್ಗಗಳ ಅಸಂಘಟಿತ ಕಾರ್ಮಿಕರಿಗಾಗಿ ಅಂಬೇಡ್ಕರ್ ಸಹಾಯ ಹಸ್ತ ಎಂಬ ಹೊಸ ಯೋಜನೆ ಜಾರಿಗೆ ಬಂದಿದೆ ಎಂದು ಕೆ.ಎಲ್.ರವಿಕುಮಾರ್ ತಿಳಿಸಿದರು. ಹಮಾಲರು ಚಿಂದಿ ಆಯುವವರು ಮನೆಗೆಲಸದವರು ಟೈಲರ್‌ ಅಗಸರು ಕ್ಷೌರಿಕರು ಅಕ್ಕಸಾಲಿಗರು ಕಮ್ಮಾರರು ಕುಂಬಾರರು ಭಟ್ಟಿ ಕರ್ಮಿಕರು ಸಿನಿ ಕಾರ್ಮಿಕರು ನೇಕಾರರು ಬೀದಿ ಬದಿ ವ್ಯಾಪಾರಿಗಳು ಹೋಟೆಲ್ ಕಾರ್ಮಿಕರು ಛಾಯಾಗ್ರಾಹಕರು ಸ್ವತಂತ್ರ ಲೇಖನ ಬರಹಗಾರರು ಕಲ್ಯಾಣ ಮಂಟಪ ಅಥವಾ ಪೆಂಡಾಲ್ ಕಾರ್ಮಿಕರು ಬೀಡಿ ಕಾರ್ಮಿಕರಿಗಾಗಿ ಈ ಯೋಜನೆ ಜಾರಿಗೆ ತರಲಾಗಿದೆ. ಅರ್ಹರು ಈ ಯೋಜನೆಯ ಲಾಭ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು. ಮರಣ ಹೊಂದಿದರೆ ₹1 ಲಕ್ಷ ಅಪಘಾತವಾದರೆ ₹1 ಲಕ್ಷ ಅನಾರೋಗ್ಯಕ್ಕೆ ಆಸ್ಪತ್ರೆ ವೆಚ್ಚ ₹50 ಸಾವಿರ ತನಕ ಸಹಜ ಮರಣವಾದರೆ ಅಂತ್ಯಕ್ರಿಯೆ ವೆಚ್ಚವಾಗಿ ₹10 ಸಾವಿರ ಪರಿಹಾರ ನೀಡಲಾಗುವುದು ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT