ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಕಾರ ಬ್ಯಾಂಕ್‌ಗಳಲ್ಲಿ ಏಕ ತಂತ್ರಾಂಶ ಅಳವಡಿಕೆಗೆ ಕ್ರಮ: ಸಚಿವ

ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ಚೆಕ್‌ ವಿತರಣೆ ಕಾರ್ಯಕ್ರಮ
Last Updated 2 ಜೂನ್ 2020, 16:20 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಅಪೆಕ್ಸ್‌ ಬ್ಯಾಂಕ್‌, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ಪ್ಯಾಕ್ಸ್‌), ಡಿಸಿಸಿ ಬ್ಯಾಂಕ್‌ ಎಲ್ಲದಕ್ಕೂ ಏಕ ಸಾಫ್ಟ್‌ವೇರ್‌ ಅಳವಡಿಸಲು ಕ್ರಮ ವಹಿಸಲಾಗುವುದು ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಹೇಳಿದರು.

ಸಹಕಾರ ಇಲಾಖೆ ವತಿಯಿಂದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನದ ಚೆಕ್‌ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಒಂದೇ ಸಾಫ್ಟ್‌ವೇರ್‌ ಅಳವಡಿಸಿದರೆ ತೊಡಕುಗಳು ಪರಿಹಾರವಾಗುತ್ತವೆ. ವ್ಯವಹಾರ ಚಟುವಟಿಕೆಗಳ ಪರಿಶೀಲನೆ ಸುಲಭವಾಗುತ್ತದೆ. ಸಾಲ ವಿತರಣೆ, ಠೇವಣಿ ಮೊದಲಾದ ವಿವರಗಳು ಒಂದೇ ಕಡೆ ಸಿಗುತ್ತವೆ ಎಂದು ಹೇಳಿದರು.

ಸಾಲಮನ್ನಾ ನಿಟ್ಟಿನಲ್ಲಿ 1.05 ಲಕ್ಷ ರೈತರು ಪಹಣಿ, ಆಧಾರ್‌, ಪಡಿತರ ಚೀಟಿಗಳನ್ನು ಒದಗಿಸಿಲ್ಲ. ಕಾಲಾವಕಾಶವನ್ನು ನೀಡಿದ್ದರೂ ನೀಡಿಲ್ಲ. ದಾಖಲೆಗಳನ್ನು ಕಟ್ಟುನಿಟ್ಟಾಗಿ ಪರಿಶೀಲನೆ ಮಾಡಲಾಗುತ್ತಿದೆ ಎಂದರು.

ಕೋವಿಡ್‌ ಸಂಕಷ್ಟದಲ್ಲಿನ ಕಾರ್ಯನಿರ್ವಹಣೆ ಶ್ಲಾಘಿಸಿ ಆಶಾ ಕಾರ್ಯಕರ್ತೆಯರಿಗೆ ಸಹಕಾರ ಇಲಾಖೆಯಿಂದ ಪ್ರೋತ್ಸಾಹಧನ ನೀಡಲಾಗುತ್ತಿದೆ. ಈ ಜಿಲ್ಲೆಯಲ್ಲಿ 937 ಆಶಾ ಕಾರ್ಯಕರ್ತೆಯರಿಗೆ ತಲಾ ₹ 3,000 ನೀಡಲಾಗುತ್ತಿದೆ ಎಂದರು.

ಕೆಲ ಡಿಸಿಸಿ ಬ್ಯಾಂಕುಗಳಲ್ಲಿ ಸಾಲ ಪಡೆದವರು ವಾಪಸು ಪಾವತಿಸಿಲ್ಲ. ಕೋಟಿಗಟ್ಟಲೇ ಸಾಲ ಪಡೆದವರು ಇದ್ದಾರೆ. ಕೆಲವೆಡೆ ಅವ್ಯವಹಾರ ನಡೆದಿರುವ ದೂರುಗಳಿವೆ. ಇದಕ್ಕೆಲ್ಲ ಕಡಿವಾಣ ಹಾಕುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದೇವೆ ಎಂದು ಹೇಳಿದರು.

ಡಿಸಿಸಿ ಬ್ಯಾಂಕುಗಳಲ್ಲಿ ಶೇ 28 ರೈತರು ಮಾತ್ರ ಸಾಲ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಒಮ್ಮೆ ಪಡೆದವರೇ ಪದೇಪದೇ ಪಡೆಯುತ್ತಿದ್ದಾರೆ, ಹೊಸಬರಿಗೆ ಸಿಗುತ್ತಿಲ್ಲ ಎಂಬ ದೂರುಗಳಿವೆ. ಇದಕ್ಕೆಲ್ಲ ಇತಿಶ್ರೀ ಹಾಡಲು ಮುಂದಾಗಿದ್ದೇವೆ. ಎಲ್ಲ ರೈತರಿಗೂ ಸವಲತ್ತು ಸಿಗುವಂತೆ ಮಾಡುವ ಉದ್ದೇಶ ಇದೆ ಎಂದರು.

ವಿಧಾನ ಪರಿಷತ್ತಿನ ಸದಸ್ಯ ಎಸ್‌.ಎಲ್‌.ಭೋಜೇಗೌಡ ಮಾತನಾಡಿ, ‘ರೈತರಿಂದ ಆದಾಯ ಬರುವ ಸಂಸ್ಥೆಗಳಿಗೆ ತೆರಿಗೆ ವಿಧಿಸುವುದು, ಡೇರಿಗಳ ಆದಾಯದಲ್ಲೂ ತೆರಿಗೆ ಕಟ್ಟುಬೇಕು ಎಂಬುದು ಸರಿಯಲ್ಲ’ ಎಂದು ಹೇಳಿದರು.

ಜಿಲ್ಲೆಯಲ್ಲಿ 803 ರೈತರು ಕೆಲ ತೊಡಕುಗಳಿಂದ ಸಾಲಮನ್ನಾದಿಂದ ವಂಚಿತರಾಗಿದ್ದಾರೆ. ಪುನರ್‌ ಪರಿಶೀಲಿಸಿ ಅವರಿಗೆ ಮನ್ನಾಕ್ಕೆ ಕ್ರಮ ವಹಿಸಬೇಕು. ನಬಾರ್ಡ್‌ ನೀಡುವ ಸಾಲ ಪ್ರಮಾಣ ಪ್ರತಿವರ್ಷ ಕಡಿಮೆಯಾಗುತ್ತಿರುವ ಬಗ್ಗೆ ಗಮನ ಹರಿಸಬೇಕು. ಯುವಕರು ಕೃಷಿ ಕ್ಷೇತ್ರದ ಕಡೆಗೆ ಆಕರ್ಷಿತರಾಗುತ್ತಿದ್ದಾರೆ. ಕ್ಷೇತ್ರದಲ್ಲಿ ಉಳಿಯಲು ನೆರವಾಗಬೇಕು ಎಂದರು.

ವಿಧಾನ ಪರಿಷತ್ತಿನ ಉಪಸಭಾಪತಿಯೂ ಆಗಿರುವ ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಎಸ್‌.ಎಲ್‌.ಧರ್ಮೇಗೌಡ ಮಾತನಾಡಿ, ‘ಸಹಕಾರ ಬ್ಯಾಂಕುಗಳಲ್ಲಿ ಠೇವಣಿ ಇಡಲು ಕ್ರಮ ವಹಿಸಬೇಕು ಎಂದು ಸಂಪುಟದಲ್ಲಿ ತೀರ್ಮಾನ ಮಾಡಲಾಗಿತ್ತು. ಆದರೆ, ತೀರ್ಮಾನ ಸರಿಯಾಗಿ ಅನುಷ್ಠಾನವಾಗಿಲ್ಲ’ ಎಂದರು.

‘ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಡಿಸಿಸಿ ಬ್ಯಾಂಕಿಗೆ ₹ 33.7 ಕೋಟಿ ಸಹಾಯಧನ ಬರಬೇಕಿದೆ. ಅದನ್ನು ಪಾವತಿಸಲು ಕ್ರಮ ವಹಿಸಬೇಕು ಎಂದರು.

ಡಿಸಿಸಿ ಬ್ಯಾಂಕ್‌ ವ್ಯವಸ್ಥಾಪಕ ನಿರ್ದೇಶಕ ದಯಾನಂದ, ದಿನೇಶ ಹೆಗ್ಡೆ, ಪ್ರಕಾಶ್‌ರಾವ್‌, ರಮೇಶ್‌, ರಾಮಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT