ಡಿಪಿಆರ್‌ ತಯಾರಿಗೆ ಮೀನಮೇಷ; ಬಾಲಗ್ರಹ ಸಮಸ್ಯೆ

7
ಅನುವನಹಳ್ಳಿಯಲ್ಲಿ ಈರುಳ್ಳಿ ಸಂಗ್ರಹಣಾ ಘಟಕ ಪ್ರಸ್ತಾವ

ಡಿಪಿಆರ್‌ ತಯಾರಿಗೆ ಮೀನಮೇಷ; ಬಾಲಗ್ರಹ ಸಮಸ್ಯೆ

Published:
Updated:
Deccan Herald

ಚಿಕ್ಕಮಗಳೂರು: ಜಿಲ್ಲೆಯ ಅಜ್ಜಂಪುರ ತಾಲ್ಲೂಕಿನ ಶಿವನಿ ಹೋಬಳಿಯ ಅನುವನಹಳ್ಳಿಯಲ್ಲಿ ಈರುಳ್ಳಿ ಸಂಗ್ರಹಣಾ ಘಟಕದ ಸ್ಥಾಪನೆ ಪ್ರಸ್ತಾವ ಬಾಲಗ್ರಹಕ್ಕೀಡಾಗಿದೆ.

ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಅಧಿಕಾರಿಗಳು, ತೋಟಗಾರಿಕೆ ಅಧಿಕಾರಿಗಳು, ತಜ್ಞರ ತಂಡ ಸ್ಥಳ ಪರಿಶೀಲನೆ ನಡೆಸಿ ಒಂದು ವರ್ಷವಾಗಿದೆ. ಪ್ರಸ್ತಾವಕ್ಕೆ ಸಂಬಂಧಿಸಿದಂತೆ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಲು ಮೀನಮೇಷ ಎಣಿಸಲಾಗುತ್ತಿದೆ.

ಅನುವನಹಳ್ಳಿ ಗ್ರಾಮದ ಸರ್ವೆ ನಂ 120ರಲ್ಲಿ 9.36 ಎಕರೆ ಜಾಗವನ್ನು ಜಿಲ್ಲಾಡಳಿತವು ಈರುಳ್ಳಿ ಘಟಕ ಸ್ಥಾಪನೆಗೆ ಕಾಯ್ದಿರಿಸಿದೆ. ಪ್ರಸ್ತಾವಕ್ಕೆ ಸಂಬಂಧಿಸಿದಂತೆ ಡಿಪಿಆರ್‌ ಸಿದ್ಧಪಡಿಸಲು ಸಮಿತಿಯನ್ನು ರಚಿಸಲಾಗಿದೆ.

‘ತಜ್ಞರ ತಂಡವು ಸ್ಥಳ ಪರಿಶೀಲನೆ ಮಾಡಿತ್ತು. ನಂತರ, ಈವರೆಗೆ ಯಾವುದೇ ಪ್ರಕ್ರಿಯೆ ನಡೆದಿಲ್ಲ. ಈರುಳ್ಳಿ ಈ ಭಾಗದ ಪ್ರಮುಖ ಬೆಳೆ. ಘಟಕ ಸ್ಥಾಪನೆ ಮಾಡಿದರೆ ಎರಡ್ಮೂರು ತಿಂಗಳವರೆಗೆ ದಾಸ್ತಾನು ಮಾಡಬಹುದು. ರೈತರಿಗೆ ಅನುಕೂಲವಾಗುತ್ತದೆ’ ಎಂದು ಗ್ರಾಮದ ರೈತರ ಆರ್‌.ಡಿ.ಸತೀಶ್‌ ಹೇಳುತ್ತಾರೆ.

‘ಈರುಳ್ಳಿಯನ್ನು ಕೆಡದಂತೆ ಸಂಗ್ರಹಿಸಿಡುವುದೇ ಬೆಳೆಗಾರರಿಗೆ ಸವಾಲು. ಈ ಬಾರಿ ಈರುಳ್ಳಿ ದರ ಕುಸಿದು ಬೆಳೆಗಾರರು ಸಂಕಷ್ಟ ಎದುರಿಸುವಂತಾಗಿದೆ. ಘಟಕ ಸ್ಥಾಪನೆ ನಿಟ್ಟಿನಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ’ ಎಂದು ದೂಷಿಸಿದರು.

ಜಿಲ್ಲೆಯಲ್ಲಿ ತರೀಕೆರೆ, ಅಜ್ಜಂಪುರ, ಕಡೂರು, ಚಿಕ್ಕಮಗಳೂರು ತಾಲ್ಲೂಕುಗಳಲ್ಲಿ ಈರುಳ್ಳಿ ಬೆಳೆಯುತ್ತಾರೆ. 2018–19ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆ ಅಂಕಿಅಂಶದ ಪ್ರಕಾರ ತರೀಕೆರೆ (ಅಜ್ಜಂಪುರ ಸಹಿತ) ತಾಲ್ಲೂಕಿನಲ್ಲಿ 4,412 ಹೆಕ್ಟೇರ್‌, ಕಡೂರು ತಾಲ್ಲೂಕಿನಲ್ಲಿ 978 ಹೆಕ್ಟೇರ್‌ನಲ್ಲಿ ಹಾಗೂ ಚಿಕ್ಕಮಗಳೂರು ತಾಲ್ಲೂಕಿನಲ್ಲಿ 225 ಹೆಕ್ಟೇರ್‌ನಲ್ಲಿ ಈರುಳ್ಳಿ ಬೆಳೆದಿದ್ದು, ಒಟ್ಟು 67 ಸಾವಿರ ಮೆಟ್ರಿಕ್ ಟನ್‌ ಈರುಳ್ಳಿ ಉತ್ಪಾದನೆಯಾಗಿದೆ.

‘ಅಜ್ಜಂಪುರ ಹೊಸ ತಾಲ್ಲೂಕು ಕೇಂದ್ರ. ಈರುಳ್ಳಿ ಸಂಗ್ರಹಣಾ ಘಟಕಕ್ಕೆ ಜಾಗ ಗುರುತಿಸಲಾಗಿದೆ, ಪಹಣಿ ಇನ್ನು ಬಂದಿಲ್ಲ. ಘಟಕ ನಿರ್ವಹಣೆ ಜವಾಬ್ದಾರಿ ತೋಟಗಾರಿಕೆ ಇಲಾಖೆ ಮಾಡಬೇಕೋ ಅಥವಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಮಾಡಬೇಕೋ ಎಂಬುದು ಅಖೈರಾಗಿಲ್ಲ’ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಪೂರ್ಣಿಮಾ ‘ಪ್ರಜಾವಾಣಿ’ಗೆ ತಿಳಿಸಿದರು.

 ‘ತೋಟಗಾರಿಕೆ ಇಲಾಖೆಗೆ ಒಂದು ವರದಿಯನ್ನು ಸಲ್ಲಿಸಲಾಗಿತ್ತು. ಕೆಲವಾರು ಮಾರ್ಪಾಡು ಮಾಡಿ ಡಿಪಿಆರ್‌ ಸಲ್ಲಿಸುವಂತೆ ಸೂಚಿಸಿದ್ದಾರೆ. ಡಿಪಿಆರ್‌ ಸಲ್ಲಿಸಲು ಕ್ರಮ ವಹಿಸಲಾಗುವುದು’ ಎಂದು ತಿಳಿಸಿದರು.

ಈರುಳ್ಳಿ ನಿರ್ವಹಣೆ ಸಂಗ್ರಹಕ್ಕೆ ಕೆಲವರು ಸ್ವಂತಕ್ಕೆ ಶೆಡ್‌ ನಿರ್ಮಿಸಿಕೊಂಡಿದ್ದಾರೆ. ಸಣ್ಣ ಹಿಡುವಳಿದಾರರಿಗೆ ರಸ್ತೆ ಬದಿ, ಕಣ, ಹಿತ್ತಲು, ದೇಗುಲ ಅಂಗಳವೇ ಗತಿ. ತೊಂಡೆ ಕತ್ತರಿಸುವುದು, ಚೀಲಕ್ಕೆ ತುಂಬುವುದು ಎಲ್ಲ ಇಲ್ಲಿಯೇ ಮಾಡಬೇಕು. ಮಳೆ ಸುರಿದರೆ ಅದನ್ನು ಕಾಪಾಡುವುದು ಬಹಳ ಕಷ್ಟ. ಹೀಗಾಗಿ, ಸಂಗ್ರಹ ಘಟಕ ನಿರ್ಮಿಸಿದರೆ ಬವಣೆ ಕೊಂಚ ಪರಿಹಾರವಾಗುತ್ತದೆ ಎಂಬುದು ರೈತರ ಮೊರೆ.

ಶೀಘ್ರದಲ್ಲಿ ಸಭೆ

ಈರುಳ್ಳಿ ಸಂಗ್ರಹಣಾ ಘಟಕ ಸ್ಥಾಪನೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಶೀಘ್ರದಲ್ಲಿ ಸಭೆ ನಡೆಯಲಿದೆ. ಘಟಕದ ರೂಪುರೇಷೆ, ವೆಚ್ಚ ಕುರಿತು ಚರ್ಚಿಸಲಾಗುವುದು.

–ಪೂರ್ಣಿಮಾ, ಉಪನಿರ್ದೇಶಕಿ, ತೋಟಗಾರಿಕೆ ಇಲಾಖೆ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !