ಸೋಮವಾರ, ಜನವರಿ 27, 2020
21 °C

ಪೆಟ್ರೋಲ್‌ ಬಾಂಬ್‌ ದುಷ್ಕರ್ಮಿಗಳಿಗಾಗಿ ಶೋಧ; ಪೊಲೀಸರನ್ನು ಶ್ಲಾಘಿಸಿದ ಸಿ.ಟಿ. ರವಿ

ಪ್ರಜಾವಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಚಿಕ್ಕಮಗಳೂರು: ‘ಜಿಲ್ಲೆಯ ಶೃಂಗೇರಿಯಲ್ಲಿ ಇದೇ 10ರಂದು ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ದಿನ ಪಟ್ಟಣದ ಜೆಸಿಬಿಎಂ ಕಾಲೇಜು ಬಳಿಯ ಹಾರ್ಡ್‌ವೇರ್‌ ಅಂಗಡಿಯೊಂದರ ಹಿಂಭಾಗದಲ್ಲಿ ಪೆಟ್ರೋಲ್‌ ತುಂಬಿದ ಬಾಟಲಿಗಳು, ಟೈರುಗಳು ಸಿಕ್ಕಿವೆ. ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದೇವೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಪೆಟ್ರೋಲ್‌ ಬಾಂಬ್‌ ಮಾಹಿತಿ ಮೇರೆಗೆ ಮಧ್ಯಾಹ್ನ 3 ಗಂಟೆ ಹೊತ್ತಿಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಲಾಯಿತು. ಪ್ರಸನ್ನ ಹಾರ್ಡ್‌ವೇರ್‌ ಮಳಿಗೆಯ ಹಿಂಭಾಗದಲ್ಲಿ ಪೆಟ್ರೋಲ್‌ ತುಂಬಿದ ಮೂರು ಬಾಟಲಿಗಳು ಪತ್ತೆಯಾಗಿದ್ದವು. ಮುಚ್ಚಳಕ್ಕೆ ರಂಧ್ರ ಮಾಡಿ ಬಟ್ಟೆ ಬತ್ತಿ ಹಾಕಿದ್ದರು. ಒಂದು ಕ್ಯಾನು ಸಿಕ್ಕಿದ್ದು, ಅದರಲ್ಲಿಯೂ ಸ್ವಲ್ಪ ಪೆಟ್ರೋಲ್‌ ಇತ್ತು. ಸ್ಥಳದಲ್ಲಿ ಜನ ಯಾರೂ ಇರಲಿಲ್ಲ’ ಎಂದು ತಿಳಿಸಿದ್ದಾರೆ.

‘ಎರಡು ಟೈರುಗಳೂ ಸಿಕ್ಕಿದ್ದವು. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿದ್ದೇವೆ. ದುಷ್ಕರ್ಮಿಗಳ ಶೋಧ ಕಾರ್ಯಾಚರಣೆ ನಡೆದಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಶೃಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂಜಾಗ್ರತೆ ವಹಿಸಿದ್ದೇ ಪೊಲೀಸ್‌ ಸಾಮರ್ಥ್ಯ: ಸಚಿವ ರವಿ

‘ಪೆಟ್ರೋಲ್‌ ಬಾಂಬ್‌ ಮಾಹಿತಿ ಗೊತ್ತಾದ ತಕ್ಷಣ ಸ್ಥಳಕ್ಕೆ ತೆರಳಿ ಅನಾಹುತಕ್ಕೆ ಎಡೆಯಾಗದಂತೆ ಮುಂಜಾಗ್ರತೆ ವಹಿಸಿದ್ದು ಪೊಲೀಸರ ಸಾಮರ್ಥ್ಯ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಪ್ರತಿಕ್ರಿಯಿಸಿದರು.

‘ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಿಸಿದಂತೆ ನನ್ನ ನಿಲುವಿಗೆ ತಕ್ಕಂತೆ ನಡೆದುಕೊಂಡಿದ್ದೇನೆ. ಈಗಲೂ ಅದಕ್ಕೆ ಬದ್ಧನಾಗಿದ್ದೇನೆ. ಜಿಲ್ಲಾಡಳಿತ ಜವಾಬ್ದಾರಿಯುತವಾಗಿ ವರ್ತಿಸಿದೆ. ಇಲ್ಲದಿದ್ದರೆ ಶಾಂತಿ ಕಾಪಾಡುವುದು ಕಷ್ಟವಾಗುತ್ತಿತ್ತು’ ಎಂದು ಪ್ರತಿಕ್ರಿಯಿಸಿದರು.

‘ನಗರ ನಕ್ಸಲರು ಅತ್ಯಂತ ಅಪಾಯಕಾರಿ’

ಸಾವರ್ಕರ್‌, ಗೋಳವಳ್ಕರ್‌ ಪ್ರೇತಾತ್ಮ ಹೊಕ್ಕಿರಬೇಕು ಎಂಬ ಸಾಹಿತಿ ಕುಂ. ವೀರಭದ್ರಪ್ಪ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ರವಿ, ‘ಸಾವರ್ಕರ್‌, ಗೋಳವಳ್ಕರ್‌ ಪ್ರೇರಣೆಯನ್ನು ನಾನೂ ಪಡೆದಿದ್ದೇನೆ. ಲೆನಿನ್‌, ಮಾವೋ, ಮಾರ್ಕ್ಸ್‌ ಅವರ ನರಮೇಧ ಮಾತ್ರ ಬದಲಾವಣೆಗೆ ದಾರಿಯಾಗುತ್ತೆ ಎಂದು ಭಾವಿಸಿರುವ ಜನರಿಗೆ ಸಾವರ್ಕರ್‌, ಗೋಳವಳ್ಕರ್‌ ಅವರಂಥ ರಾಷ್ಟ್ರಭಕ್ತರು ಅರ್ಥವಾಗಲು ಸಾಧ್ಯವಿಲ್ಲ’ ಎಂದು ಚುಚ್ಚಿದರು.

‘ಸಂವಿಧಾನ ಧಿಕ್ಕರಿಸುವಂಥ, ಕಾನೂನು ಕೈಗೆತ್ತಿಕೊಳ್ಳುವ, ರಕ್ತ ಕ್ರಾಂತಿಯಿಂದ ಮಾತ್ರ ರಾಜಕೀಯ ಬದಲಾವಣೆ ಸಾಧ್ಯ ಎಂದು ನಂಬಿರುವವರಿಗೆ ಸಂವಿಧಾನದ ಬಗ್ಗೆ ಮಾತಾಡಲು ನೈತಿಕ ಹಕ್ಕೇನಿದೆ. ಅಂಥವರ ತಲೆಯಲ್ಲಿ ಮಾವೋ, ಮಾರ್ಕ್ಸ್‌, ಲೆನಿನ್‌ ಪ್ರೇತಾತ್ಮ ಇರುತ್ತವೆ. ಆ ಪ್ರೇತಾತ್ಮಗಳ ಪ್ರಚೋದನೆಯಿಂದ ಮಾತಾಡುವವರು ಹೊರಗಡೆ ಇದ್ದಾರೆ. ಅವರನ್ನು ಅರ್ಬನ್‌ (ನಗರ) ನಕ್ಸಲರು ಎಂದು ಗುರುತಿಸಲಾಗಿದೆ. ನಕ್ಸಲರು ವ್ಯಕ್ತಿಯನ್ನು ಕೊಂದರೆ, ನಗರ ನಕ್ಸಲರು ಮಾನಸಿಕತೆಯನ್ನು ಕೊಲ್ಲುತ್ತಾರೆ. ಇವರು ಅತ್ಯಂತ ಅಪಾಯಕಾರಿ’ ಎಂದು ಕುಟುಕಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು