ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಮಗಳೂರು | 25 ಎಕರೆ ಗುತ್ತಿಗೆ: ಅರ್ಜಿ ಸಲ್ಲಿಕೆಗೆ ನಿರಾಸಕ್ತಿ

ಒಂದು ತಿಂಗಳಲ್ಲಿ 534 ಅರ್ಜಿ ಮಾತ್ರ ಸ್ವೀಕಾರ
Published : 10 ಸೆಪ್ಟೆಂಬರ್ 2024, 6:56 IST
Last Updated : 10 ಸೆಪ್ಟೆಂಬರ್ 2024, 6:56 IST
ಫಾಲೋ ಮಾಡಿ
Comments

ಚಿಕ್ಕಮಗಳೂರು: 25 ಎಕರೆ ತನಕ ಒತ್ತುವರಿ ಮಾಡಿರುವ ಸರ್ಕಾರಿ ಜಾಗವನ್ನು(ಕಂದಾಯ ಭೂಮಿ) ಗುತ್ತಿಗೆಗೆ ನೀಡಲು ಸರ್ಕಾರ ಮುಂದಾಗಿದೆ. ಅರ್ಜಿ ಆಹ್ವಾನಿಸಿ ಒಂದು ತಿಂಗಳು ಕಳೆದಿದ್ದರೂ ಸಲ್ಲಿಕೆಗೆ ಬೆಳೆಗಾರರು ಹಿಂದೇಟು ಹಾಕುತ್ತಿದ್ದಾರೆ. ಅರಣ್ಯ ಭೂಮಿ ಒತ್ತುವರಿಯೇ ಅಧಿಕ ಇರುವುದು ಅರ್ಜಿ ಸಲ್ಲಿಕೆಗೆ ತೊಡಕಾಗಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಂದಾಯ ಭೂಮಿ ಒತ್ತುವರಿ 20,844 ಎಕರೆ ಇದೆ ಎಂಬುದನ್ನು ಅಧಿಕಾರಿಗಳು ಅಂದಾಜಿಸಿದ್ದಾರೆ. 2005ರ ಜನವರಿ 1ಕ್ಕೂ ಮುಂಚಿನಿಂದ ಒತ್ತುವರಿ ಜಾಗದಲ್ಲಿ ಪ್ಲಾಂಟೇಷನ್ ಬೆಳೆಗಳನ್ನು(ಏಲಕ್ಕಿ, ಕಾಫಿ, ಮೆಣಸು, ರಬ್ಬರ್, ಟೀ) ಬೆಳೆಯುತ್ತಿದ್ದರೆ 30 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದಲ್ಲಿ ನೀಡಲು ಮುಂದಾಗಿದೆ.

ಅರ್ಜಿ ಸಲ್ಲಿಕೆಗೆ 90 ದಿನಗಳ ತನಕ ಅವಕಾಶ ಕಲ್ಪಿಸಲಾಗಿದೆ. ಅರ್ಜಿದಾರರ ವಿಳಾಸ, ಆಧಾರ್ ಕಾರ್ಡ್, ಪಾನ್‌ ಕಾರ್ಡ್, ಹಿಂದಿನ 5 ವರ್ಷಗಳ ಆದಾಯ ತೆರಿಗೆ ಪಾವತಿ ವಿವರ, ಅನಧಿಕೃತ ಸಾಗುವಳಿ ಮಾಡುತ್ತಿರುವ ಜಮೀನಿನ ವಿವರ, ಸಾಗುವಳಿ ಮಾಡುತ್ತಿರುವ ದಿನಾಂಕ ಹಾಗೂ ಟಿ.ಟಿ ಜುಲ್ಮಾನೆ ಪಾವತಿಸಿರುವ ವಿವರ ಸಲ್ಲಿಸಬೇಕು.

ಅರ್ಜಿದಾರರ ಕುಟುಂಬದ ಇತರ ಸದಸ್ಯರು ಸರ್ಕಾರಿ ಜಮೀನುಗಳಲ್ಲಿ ಅನಧಿಕೃತ ಸಾಗುವಳಿ ಮಾಡುತ್ತಿದ್ದರೆ ಅವುಗಳ ವಿವರ, ಅರ್ಜಿದಾರರು ಮತ್ತು ಕುಟುಂಬದವರು ಹೊಂದಿರುವ ಒಟ್ಟು ಆಸ್ತಿ ವಿವರ ಲಗತ್ತಿಸಬೇಕು. ಗುತ್ತಿಗೆ ಪಡೆಯುವ ರೈತರು 30 ವರ್ಷಗಳ ಬಾಡಿಗೆ ಮೊತ್ತವನ್ನು ಮೊದಲೇ ಒಮ್ಮೆಲೇ ಪಾವತಿಸಬೇಕು ಎಂಬ ಷರತ್ತುಗಳನ್ನು ವಿಧಿಸಿದೆ.

ಬೆಳೆಗಾರರ ಸಂಘಟನೆಗಳು ಹೇಳುವ ಪ್ರಕಾರ 4 ಎಕರೆಗಿಂತ ಕಡಿಮೆ ಒತ್ತುವರಿ ಮಾಡಿರುವ ಬೆಳೆಗಾರರ ಸಂಖ್ಯೆಯೇ ಹೆಚ್ಚಿದೆ. ಅದರಲ್ಲೂ ಮೂಡಿಗೆರೆ ತಾಲ್ಲೂಕಿನಲ್ಲಿ ಹೆಚ್ಚು ಒತ್ತುವರಿ ಇದೆ. ಆದರೆ, ಅರ್ಜಿ ಸಲ್ಲಿಸಲು ಬೆಳೆಗಾರರು ಮುಂದೆ ಬರುತ್ತಿಲ್ಲ. ಈವರೆಗೆ 534 ಅರ್ಜಿಗಳಷ್ಟೇ ಸಲ್ಲಿಕೆಯಾಗಿವೆ.

ಚಿಕ್ಕಮಗಳೂರು ತಾಲ್ಲೂಕಿನಲ್ಲಿ  487, ಕೊಪ್ಪ ತಾಲ್ಲೂಕಿನಲ್ಲಿ 11, ಮೂಡಿಗೆರೆ ತಾಲ್ಲೂಕಿನಲ್ಲಿ 11, ನರಸಿಂಹರಾಜಪುರ ತಾಲ್ಲೂಕಿನಲ್ಲಿ 25 ಅರ್ಜಿಗಳು ಸಲ್ಲಿಕೆಯಾಗಿವೆ. ಶೃಂಗೇರಿ, ಕಳಸ, ತರೀಕೆರೆ ತಾಲ್ಲೂಕಿಲ್ಲಿ ಒಂದೇ ಒಂದು ಅರ್ಜಿಗೂ ಬಂದಿಲ್ಲ.

‘ಅರ್ಜಿ ಸಲ್ಲಿಕೆಗೆ ಸರ್ಕಾರ ವಿಧಿಸಿರುವ ಷರತ್ತುಗಳು, ಕೇಳಿರುವ ದಾಖಲೆಗಳನ್ನು ಒದಗಿಸುವುದು ಬೆಳೆಗಾರರು ಪರದಾಡುತ್ತಿದ್ದಾರೆ. ಅಲ್ಲದೇ 30 ವರ್ಷಗಳ ಗುತ್ತಿಗೆ ಮೊತ್ತವನ್ನು ಒಮ್ಮೆಲೇ ಪಾವತಿಸಬೇಕಿದೆ. 25 ಎಕರೆಗೂ ಹೆಚ್ಚು ಒತ್ತುವರಿ ಮಾಡಿದ್ದರೆ ಅದನ್ನು ಸರ್ಕಾರಕ್ಕೆ ಒಪ್ಪಿಸಬೇಕು. ಸರ್ಕಾರ ನಮ್ಮಿಂದಲೇ ದಾಖಲೆಗಳನ್ನು ಪಡೆದುಕೊಂಡು ಜಾಗವನ್ನು ತನ್ನ ಹಿಡಿತ ಸಾಧಿಸಲಿದೆ’ ಎಂಬ ಆತಂಕವೂ ಕೆಲ ಬೆಳೆಗಾರರಲ್ಲಿದೆ.

ತಾವು ಒತ್ತುವರಿ ಮಾಡಿರುವುದು ಅರಣ್ಯ ಭೂಮಿಯೋ, ಕಂದಾಯ ಭೂಮಿಯೋ ಎಂಬ ಸ್ಪಷ್ಟತೆಯೇ ಬೆಳೆಗಾರರಿಗೆ ಇಲ್ಲ. ಕಂದಾಯ ಭೂಮಿಯಾದರೂ ಮಲೆನಾಡಿನಲ್ಲಿ ಎಲ್ಲಾ ಭೂಮಿಯೂ ಕಾಡಿನ ಸ್ವರೂಪ ಪಡೆದುಕೊಂಡಿವೆ. ಇನ್ನೂ ಹಲವೆಡೆ ಅರಣ್ಯ ಇಲಾಖೆ ಬಹುತೇಕ ಕಡೆ ಪರಿಭಾವಿತ(ಡೀಮ್ಡ್‌) ಅರಣ್ಯ ಎಂದು ಹೇಳುತ್ತಿದೆ. ಕೆಲವೆಡೆ ಸೆಕ್ಷನ್ –4 ಜಾರಿಗೊಳಿಸಿದೆ. ಮೀಸಲು ಅರಣ್ಯದಲ್ಲೇ ಹೆಚ್ಚಿನ ಪ್ರಮಾಣದ ಒತ್ತುವರಿ ಇದೆ. ಈ ಎಲ್ಲಾ ಕಾರಣಗಳು ಅರ್ಜಿ ಸಲ್ಲಿಕೆಗೆ ತೊಡಕಾಗುತ್ತಿವೆ ಎನ್ನುತ್ತಾರೆ ಬೆಳೆಗಾರರು.

‘ಜಂಟಿ ಸರ್ವೆ ಪೂರ್ಣಗೊಳಿಸಿ ಅರಣ್ಯ ಮತ್ತು ಕಂದಾಯ ಭೂಮಿಯ ಗೊಂದಲವನ್ನು ಮೊದಲು ಪರಿಹರಿಸಬೇಕು. ಬೆಳೆಗಾರರು ಅರ್ಜಿ ಸಲ್ಲಿಸಿ ಒತ್ತುವರಿ ಜಾಗ ಅಧಿಕೃತ ಮಾಡಿಕೊಳ್ಳುವುದು ಒಳ್ಳೆಯದು. ಈ ಬಗ್ಗೆ ಬೆಳೆಗಾರರಿಗೆ ಮನವರಿಕೆ ಮಾಡಲಾಗುತ್ತಿದೆ ಎಂದು ಬೆಳೆಗಾರರ ಹಿತರಕ್ಷಣಾ ವೇದಿಕೆ ಜಿಲ್ಲಾ ಕಾರ್ಯದರ್ಶಿ ಹೊಲದಗದ್ದೆ ಗಿರೀಶ್ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT