ಶನಿವಾರ, ನವೆಂಬರ್ 28, 2020
21 °C
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ರೈತ ಸ್ನೇಹಿ ಹೆಜ್ಜೆ

ಸಣ್ಣ, ಮಧ್ಯಮ ಹಿಡುವಳಿದಾರರಿಗೆ ‘ಪ್ರಗತಿಬಂಧು’ ಸಾಥ್‌

ಬಿ.ಜೆ.ಧನ್ಯಪ್ರಸಾದ್‌ Updated:

ಅಕ್ಷರ ಗಾತ್ರ : | |

Prajavani

ಕೋವಿಡ್‌ ಸಂಕಷ್ಟದ ಕಾಲದಲ್ಲಿ ರೈತರ ಕೈಹಿಡಿದ ಸಂಘ–ಸಂಸ್ಥೆಗಳ ಹಲವು. ರೈತನಿಗೆ ಸಾಲ ಕೊಡುವುದರಿಂದ ಹಿಡಿದು ಕೂಲಿ ಕಾರ್ಮಿಕರನ್ನು ಒದಗಿಸಿ, ಯಂತ್ರಗಳನ್ನು ನೀಡಿ, ಮಾರುಕಟ್ಟೆ ವ್ಯವಸ್ಥೆ ಮಾಡಿದ ಹೆಗ್ಗಳಿಕೆ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯದ್ದು. ಈ ಯೋಜನೆಯ ಕಾರ್ಯವಿಧಾನವೇ ಈ ಭಾನುವಾರದ ‘ಪ್ರಜಾವಾಣಿ’ ವಿಶೇಷ.

ಚಿಕ್ಕಮಗಳೂರು: ಸಣ್ಣ, ಮಧ್ಯಮ ಹಿಡುವಳಿದಾರರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ (ಎಸ್‌ಕೆಡಿಆರ್‌ಡಿಪಿ) ಪ್ರಗತಿಬಂಧು ತಂಡಗಳಲ್ಲಿ ಒಳಗೊಳ್ಳುವ ಮೂಲಕ ಪರಸ್ಪರ ಕೈಜೋಡಿಸಿ ಕೃಷಿ ಚಟುವಟಿಕೆ ನಿರ್ವಹಿಸುವುದಕ್ಕೆ, ಉಳಿತಾಯ ಮಾಡುವುದಕ್ಕೆ ಮೊದಲಾದವುಗಳಿಗೆ ಅನುಕೂಲವಾಗಿದೆ.

ಎಸ್‌ಕೆಡಿಆರ್‌ಡಿಪಿಯಲ್ಲಿ ಪ್ರಗತಿ ಬಂಧು, ಮಹಿಳಾ, ಯುವ ಜಂಟಿ ಬಾಧ್ಯತಾ, ವಾತ್ಸಲ್ಯ ಗುಂಪುಗಳು ಇವೆ. ಒಟ್ಟ 15,665 ಗುಂಪುಗಳಿದ್ದು, 1.10 ಲಕ್ಷ ಸದಸ್ಯರು (ಪಾಲುದಾರರು) ಇದ್ದಾರೆ. ಪ್ರಗತಿ ಬಂಧು ಗುಂಪುಗಳು 6,620 ಇವೆ. ಒಂದು ಗುಂಪಿನಲ್ಲಿ 10 ಸದಸ್ಯರು ಇದ್ದಾರೆ.

ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹಿಸುವ ಪ್ರಮುಖ ಉದ್ದೇಶದಿಂದ ಪ್ರಗತಿಬಂಧು ಗುಂಪು ರಚಿಸಲಾಗಿದೆ. ಈ ಗುಂಪುಗಳಲ್ಲಿ ಸಣ್ಣ, ಮಧ್ಯಮ ಹಿಡುವಳಿದಾರರು ಇದ್ದಾರೆ. ಕಸುಬು ನಿರ್ವಹಣೆಗೆ ಹಣಕಾಸು ನೆರವು, ಉಳಿತಾಯಕ್ಕೆ ಪ್ರೆರೇಪಣೆ, ಶ್ರಮ ವಿನಿಮಯದಡಿ ಪರಸ್ಪರ ಸಾಥ್‌ ಸಹಿತ ರೈತ ಸ್ನೇಹಿ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗಿದೆ.

ವಿವಿಧ ಗ್ರಾಮಗಳಲ್ಲಿ ಗ್ರಾಹಕ ಸೇವಾ ಕೇಂದ್ರಗಳನ್ನು ತೆರೆಯಲಾಗಿದೆ. ರೈತರಿಗೆ ಬ್ಯಾಂಕ್‌ನಲ್ಲಿ ಖಾತೆ ತೆರೆಸಲಾಗಿದೆ. ‘ಸ್ಮಾರ್ಟ್‌ ಕಾರ್ಡ್‌’ ನೀಡಲಾಗಿದೆ. ಪ್ರಗತಿ ರಕ್ಷಾ ಕವಚ ವಿಮೆ, ಆರೋಗ್ಯ ಸುರಕ್ಷಾ, ಸಂಪೂರ್ಣ ಸುರಕ್ಷಾ ಮೊದಲಾದವನ್ನು ಕಲ್ಪಿಸಲಾಗಿದೆ. ಯೋಜನೆ ‘ನೆಟ್‌ವರ್ಕ್‌’ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಅವಕಾಶ ಇದೆ.

ಕೋವಿಡ್‌ ಬಿಕ್ಕಟ್ಟಿನ ಸವಾಲು; ನಿರ್ವಹಣೆ: ಕೋವಿಡ್‌ ಬಿಕ್ಕಟ್ಟಿನ ಕಾಲಘಟ್ಟದಲ್ಲಿ ಗುಂಪುಗಳ ನಿರ್ವಹಣೆಯಲ್ಲಿ ಬಹಳಷ್ಟು ಸವಾಲು, ಸಮಸ್ಯೆಗಳು ಎದುರಾಗಿವೆ. ಅವುಗಳನ್ನು ನಿಭಾಯಿಸಿಕೊಂಡು ಚಟುವಟಿಕೆಗಳನ್ನು ಮುಂದುವರಿಸಲಾಗಿದೆ.

‘ಕೋವಿಡ್‌ ತಲ್ಲಣದಿಂದಾಗಿ ಗುಂಪುಗಳ ಸಭೆಗಳನ್ನು ನಡೆಸುವುದು ಕಷ್ಟವಾಯಿತು. ಮನೆಬಳಿಗೆ ಬರಬೇಡಿ ಎಂದು ಹೇಳುತ್ತಿದ್ದರು. ಹಣ ಸಂಗ್ರಹಕ್ಕೂ ಕಷ್ಟವಾಯಿತು. 6 ವಾರ ಸಂಗ್ರಹಣೆ ಸ್ಥಗಿತವಾಗಿತ್ತು’ ಎಂದು ಯೋಜನೆ ಜಿಲ್ಲಾ ನಿರ್ದೇಶಕ ಪ್ರಕಾಶ್‌ ರಾವ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆರೋಗ್ಯ ಇಲಾಖೆಯ ಸಹಕಾರ ಪಡೆದು ಯೋಜನೆಯ ಎಲ್ಲ ನೌಕರರಿಗೆ ತರಬೇತಿ ನೀಡಿದೆವು. ಮಾಸ್ಕ್‌ ಧಾರಣೆ, ಅಂತರ ಪಾಲನೆ, ಸ್ಯಾನಿಟೈಸೆಷನ್‌ ಎಲ್ಲದಕ್ಕೂ ಒತ್ತು ನೀಡಿದೆವು. ಕೋವಿಡ್‌ ಮಾರ್ಗಸೂಚಿ ಪಾಲಿಸಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದೇವೆ. ಜಿಲ್ಲೆಯಲ್ಲಿ ಪ್ರಗತಿ ಬಂಧು ಗುಂಪುಗಳಲ್ಲಿ ₹ 70 ಕೋಟಿ ಉಳಿತಾಯ ಮಾಡಿದ್ದಾರೆ. ₹ 401 ಕೋಟಿ ಹೊರ ಬಾಕಿ ಇದೆ’ ಎಂದು ಅವರು ತಿಳಿಸಿದರು.

ಶ್ರಮ ವಿನಿಮಯ: ಕೃಷಿ ಕ್ಷೇತ್ರವನ್ನು ಕಾಡುತ್ತಿರುವ ಕಾರ್ಮಿಕರ ಕೊರತೆ ನಿವಾರಣೆಗೆ ಪ್ರಗತಿ ಬಂಧು ತಂಡ ಶ್ರಮ ವಿನಿಮಯ ‘ಸೂತ್ರ’ ಪರಿಹಾರೋಪಾಯವಾಗಿದೆ. ಗುಂಪಿನ ಎಲ್ಲರೂ ಎಲ್ಲರ ಹೊಲ, ಗದ್ದೆ, ತೋಟಗಳಲ್ಲಿ ಒಗ್ಗೂಡಿ ಒಂದೊಂದು ದಿನ ಕೆಲಸ ಮಾಡುವುದನ್ನು ರೂಢಿಸಿಕೊಂಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು