ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಡಿಗೆರೆ: ಮತದಾನದಿಂದ ವಂಚಿತರಾದ ಖಾಸಗಿ ವಾಹನ ಚಾಲಕರು

Published 25 ಏಪ್ರಿಲ್ 2024, 13:54 IST
Last Updated 25 ಏಪ್ರಿಲ್ 2024, 13:54 IST
ಅಕ್ಷರ ಗಾತ್ರ

ಮೂಡಿಗೆರೆ: ಈ ಬಾರಿಯೂ ಖಾಸಗಿ ವಾಹನಗಳ ಚಾಲಕರಿಗೆ ಮತದಾನದಿಂದ ಹೊರಗುಳಿಯುವಂತೆ ಮಾಡಲಾಗಿದ್ದು ಚಾಲಕರು, ಸಾರ್ವಜನಿಕರು ಚುನಾವಣಾ ಆಯೋಗದ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿ ಚುನಾವಣೆಯಲ್ಲಿಯೂ ಖಾಸಗಿ ವಾಹನಗಳನ್ನು ಚುನಾವಣಾ ಕಾರ್ಯಕ್ಕೆ ಬಳಸಿಕೊಳ್ಳುವ ಆಯೋಗದ ಕ್ರಮದಿಂದ ಖಾಸಗಿ ವಾಹನಗಳ ಚಾಲಕರು ಮತದಾನ ಮಾಡದೆ, ಹಕ್ಕಿನಿಂದ ವಂಚಿತರಾಗುವಂತಾಗಿದೆ. ತಾಲ್ಲೂಕು ಗುಡ್ಡಗಾಡು ಪ್ರದೇಶವಾಗಿರುವುದರಿಂದ 40ಕ್ಕೂ ಹೆಚ್ಚು ಖಾಸಗಿ ವಾಹನಗಳನ್ನು ಚುನಾವಣೆಗೆ ಬಳಸಿಕೊಳ್ಳಲಾಗಿದೆ. ಅವುಗಳ ಚಾಲಕರು ತಮಗೆ ನಿಯೋಜಿಸಿದ ಮತಗಟ್ಟೆಗೆ ತೆರಳಿ ಅಲ್ಲಿಯೇ ಇರಬೇಕಾಗಿರುವುದರಿಂದ ಮತ ಹಕ್ಕು ಚಲಾಯಿಸಲಾಗದೇ ವಂಚಿತರಾಗುವಂತಾಗಿದೆ.

‘ಪ್ರತಿ ಚುನಾವಣೆಯಲ್ಲಿ ಮತದಾನ ಪ್ರಕ್ರಿಯೆ ನಡೆಯುವ ಹಿಂದಿನ ದಿನ ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರದಿಂದ ಮತಗಟ್ಟೆಗೆ ತೆರಳುವ ಸಿಬ್ಬಂದಿ, ಇವಿಎಂ ಯಂತ್ರಗಳನ್ನು ಕೊಂಡೊಯ್ಯಲು ಜೀಪ್, ತೂಫಾನ್, ಟೆಂಪೊ ಟ್ರಾವೆಲ್ಸ್, ಖಾಸಗಿ ಬಸ್ ಸೇರಿದಂತೆ ನೂರಾರು ವಾಹನಗಳನ್ನು ಆರ್‌ಟಿಒ ಕಚೇರಿ ಮೂಲಕ ಪಟ್ಟಿ ಪಡೆದು ಚುನಾವಣೆ ಕರ್ತವ್ಯಕ್ಕೆ ಬಳಸಿಕೊಳ್ಳಲಾಗುತ್ತದೆ. ಈ ಚಾಲಕರಿರುವ ಮೂಲ ಸ್ಥಳ ಬಿಟ್ಟು ಹೊರ ತಾಲ್ಲೂಕು ಹಾಗೂ ಹತ್ತಾರು ಕಿ,ಮೀ ದೂರದಲ್ಲಿರುವ ಮತಗಟ್ಟೆಗೆ ಕಳುಹಿಸುವುದರಿಂದ ನಾವುಗಳು ಯಾರೂ ಕೂಡ ಮತ ಚಲಾಯಿಸಲು ಸಾಧ್ಯವಾಗುವುದಿಲ್ಲ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಖಾಸಗಿ ವಾಹನ ಚಾಲಕರಿಗೂ ಹಕ್ಕು ಚಲಾಯಿಸಲು ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದೆವು. ಚುನಾವಣೆಯ ವೇಳೆ ಮುಂದಿನ ಚುನಾವಣೆಯಲ್ಲಿ ಕ್ರಮ ಕೈಗೊಳ್ಳುವುದಾಗಿ ಹೇಳುವ ಅಧಿಕಾರಿಗಳು, ಮತ್ತೆ ಮುಂದಿನ ಚುನಾವಣೆವರೆಗೆ ಆ ಬಗ್ಗೆ ಯೋಚಿಸುವುದಿಲ್ಲ, ಹಾಗಾಗಿ ಪ್ರತಿ ಬಾರಿ ಮತದಾನದ ಹಕ್ಕಿನಿಂದ ವಂಚಿತರಾಗುವಂತಾಗಿದೆ ಎಂದು ಮತಗಟ್ಟೆಗೆ ಹೊರಟ್ಟಿದ್ದ ಚಾಲಕರು ಆಕ್ರೋಶ ವ್ಯಕ್ತಪಡಿಸಿದರು.

‘ಪ್ರತಿ ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲಾ ಸರ್ಕಾರಿ ನೌಕರರು, ಕೆಎಸ್‍ಆರ್‌ಟಿಸಿ ಬಸ್ ಚಾಲಕರು, ವೃದ್ದರು, ಅಂಗವಿಕಲರಿಗೆ ಮತದಾನ ಮಾಡಲು ಚುನಾವಣಾ ಆಯೋಗ  ಅವಕಾಶ ಕಲ್ಪಿಸುತ್ತಿದೆ. ಒಂದೆಡೆ ಮತದಾನದ ಪ್ರಮಾಣವನ್ನು ಹೆಚ್ಚಿಸಲು ಹಲವು ಬಗೆಯ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಮತ್ತೊಂದೆಡೆ ಖಾಸಗಿ ಚಾಲಕರಿಗೆ ಮತದಾನ ಮಾಡಲು ಅವಕಾಶ ನೀಡದೆ ವಂಚಿಸಲಾಗುತ್ತದೆ. ನಮ್ಮ ಗೋಳು ಕೇಳುವರು ಯಾರೂ ಇಲ್ಲ. ಇದನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಿ, ಮತದಾನದ ಹಕ್ಕು ಚಲಾಯಿಸಲು ಅವಕಾಶ ಮಾಡಿಕೊಡಬೇಕು’ ಎಂದು ಖಾಸಗೀ ವಾಹನ ಚಾಲಕರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT