ಸೋಮವಾರ, 25 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಣ್ಯ ಸಮಸ್ಯೆ ಬಗೆಹರಿಸಲು ಒತ್ತಾಯಿಸಿ ಪ್ರತಿಭಟನೆ

ಮೀಸಲು ಅರಣ್ಯ ಘೋಷಣೆ ವೇಳೆ ರೈತರಿಗೆ ಅನ್ಯಾಯ ಆಗದಂತೆ ನೋಡಿಕೊಳ್ಳಲು ಒತ್ತಾಯ
Published 13 ಸೆಪ್ಟೆಂಬರ್ 2023, 15:34 IST
Last Updated 13 ಸೆಪ್ಟೆಂಬರ್ 2023, 15:34 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಜಿಲ್ಲೆಯ ಅರಣ್ಯ ಮತ್ತು ಕಂದಾಯ ಭೂಮಿ ಗೊಂದಲ ನಿವಾರಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಸ್ತೂರಿ ರಂಗನ್ ಮತ್ತು ಮುಳ್ಳಯ್ಯನಗಿರಿ ಸಂರಕ್ಷಿತ ಮೀಸಲು ಪ್ರದೇಶ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ರೈತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಬಂದಿದ್ದ ನೂರಾರು ರೈತರು ತಾಲ್ಲೂಕು ಕಚೇರಿ ಎದುರು ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ಎಸ್.ವಿಜಯಕುಮಾರ್ ಮಾತನಾಡಿ, ‘ಜಿಲ್ಲೆಯಲ್ಲಿ ಕಂದಾಯ, ಗೋಮಾಳ, ಇನಾಂ ಹಾಗೂ ಅರಣ್ಯ ಭೂಮಿಗಳ ಸಮಸ್ಯೆಗಳನ್ನು ಇತ್ಯರ್ಥಗೊಳಿಸದೆ ರೈತರು ತೊಂದರೆ ಅನುಭವಿಸುತ್ತಿದ್ದಾರೆ’ ಎಂದು ಆರೋಪಿಸಿದರು.

50–60 ವರ್ಷಗಳ ಹಿಂದೆ ಮೀಸಲು ಅರಣ್ಯಕ್ಕೆ ಸೆಕ್ಷನ್ 4 ಘೋಷಣೆ ಮಾಡಲಾಗಿದೆ. ಆ ಜಾಗದಲ್ಲಿ ರೈತರು ಸಾಗುವಳಿ ಮಾಡುತ್ತಿರುವುದು, ಊರು ಯಾವುದನ್ನೂ ಗಮನಿಸದರೆ ಕಚೇರಿಯಲ್ಲಿ ಕುಳಿತು ನಕ್ಷೆ ತಯಾರಿಸಲಾಗಿದೆ. ಈಗ ಸೆಕ್ಷನ್ 17 ಜಾರಿಗೊಳಿಸುವ ಮೂಲಕ ಮೀಸಲು ಅರಣ್ಯ ಅಂತಿಮಗೊಳಿಸಲು ಹೊರಟಿದ್ದಾರೆ. ಇದರಿಂದ ಎರಡು–ಮೂರು ತಲೆಮಾರುಗಳಿಂದ ಸಾಗುವಳಿ ಮಾಡುತ್ತಿರುವ ಬಡ ರೈತರಿಗೆ ಅನ್ಯಾಯವಾಗಲಿದೆ ಎಂದರು.

ಸೆಕ್ಷನ್ 4 ಜಾರಿಗೊಳಿಸಿದ ಕಾರಣಕ್ಕೆ ಮೀಸಲು ಅರಣ್ಯ ಆಗುವುದಿಲ್ಲ. ಸೆಕ್ಷನ್ 17 ಜಾರಿಗೊಳಿಸಲು ಅರಣ್ಯ ಇಲಾಖೆ ಅಧಿಕಾರಿಗಳು ವಿಳಂಬ ಮಾಡಿದ್ದಾರೆ. ಅವರ ತಪ್ಪು ಮರೆ ಮಾಚಲು ರೈತರ ಬದುಕಿಗೆ ಬರೆ ಹಾಕಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಿವೇಶನ ರಹಿತರಿಗೆ ನಿವೇಶನ ನೀಡಬೇಕು ಎಂಬ ಹೋರಾಟ ಹಲವು ವರ್ಷಗಳಿಂದ ನಡೆಯುತ್ತಿದೆ. ಒಂದೇ ಒಂದು ನಿವೇಶನವನ್ನೂ ಈವರೆಗೆ ನೀಡಿಲ್ಲ. ನಮೂನೆ 50, 53, 57ರಲ್ಲಿ ಅರ್ಜಿ ಹಾಕಿದವರು ಅರಣ್ಯ, ಗೋಮಾಳ, ಕಂದಾಯ ಭೂಮಿ ಎಂಬ ಗೊಂದಲದಲ್ಲಿ ಸಿಲುಕಿದ್ದಾರೆ. ಕೂಡಲೇ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಜಂಟಿ ಸರ್ವೆ ನಡೆಸಬೇಕು ಎಂದು ಒತ್ತಾಯಿಸಿದರು.

ಜಂಟಿ ಸಮೀಕ್ಷೆ ನಡೆಸಿ ಗೋಮಾಳ, ನಿವೇಶನ ಹಂಚಿಕೆ, ರಸ್ತೆ, ಮೊದಲಾದ ಅಭಿವೃದ್ಧಿ ಕಾರ್ಯಗಳಿಗೆ ಜಾಗ ಗುರುತಿಸಿ ಮೀಸಲಿಡಬೇಕು. ಜಾಗದ ಲಭ್ಯತೆ ಆಧರಿಸಿ ಸಾಗುವಳಿ ಮಾಡುತ್ತಿರುವ ರೈತರಿಗೆ ತೊಂದರೆಯಾಗದಂತೆ ಹಕ್ಕುಪತ್ರ ವಿತರಣೆಗೆ ಕ್ರಮ ವಹಿಸಬೇಕು. ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳ ಹೆಚ್ಚಿದೆ. ನಿಯಂತ್ರಣಕ್ಕೆ ಅರಣ್ಯ ಇಲಾಖೆ ಅಧಿಕ ಸಂಖ್ಯೆಯಲ್ಲಿ ಹಣ್ಣಿನ ಗಿಡಗಳನ್ನು ನೆಡಬೇಕು, ಹುಲ್ಲುಗಾವಲು ಬೆಳೆಸುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದರು.

ಜಿಲ್ಲೆಗೆ ಅರಣ್ಯ ಸಚಿವರು ಭೇಟಿ ನೀಡುವ ಮಾಹಿತಿ ಇದ್ದು ಹೋರಾಟಗಾರರು ಮತ್ತು ಅರಣ್ಯ ಅಧಿಕಾರಿಗಳ ಜಂಟಿ ಸಭೆ ನಡೆಸಿ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಬೇಕು. ಸಿಡಿಎ ವ್ಯಾಪ್ತಿಗೆ ಬರುವ ಹೊರವಲಯದ ಜಾಗವನ್ನು ಮೀಸಲು ಅರಣ್ಯ ಎಂದು ಘೋಷಣೆ ಮಾಡಬಾರದು ಎಂದು ಒತ್ತಾಯಿಸಿದರು.

ಹೋರಾಟ ಸಮಿತಿಯ ಸಂಚಾಲಕರಾದ ಕೆ.ಕೆ.ರಘು, ವಾಸು ಪೂಜಾರಿ, ಶಾಂತಕುಮಾರ್, ಚಂದ್ರೇಗೌಡ, ಮುಸಾದಿಕ್‍ ಪಾಷಾ, ಕೃಷ್ಣಪ್ಪ, ಪ್ರವೀಣ್, ಉಮೇಶ್, ಮನು ಆರಾಧ್ಯ, ಚಂದ್ರು, ಕುಮಾರ್, ವೀರಭದ್ರಪ್ಪ ಇದ್ದರು.

ಬಡವರ ಹೋರಾಟಕ್ಕೆ ಬೆಂಬಲ

ಶಾಸಕ ಪ್ರತಿಭಟನಾಕಾರರ ಮನವಿ ಸ್ವೀಕರಿಸಿದ ಶಾಸಕ ಎಚ್.ಡಿ.ತಮ್ಮಯ್ಯ ಅವರು ‘ಶೋಷಿತರ ಬಡವರ ಪರ ಹೋರಾಟಕ್ಕೆ ನಮ್ಮ ಬೆಂಬಲವಿದೆ’ ಎಂದು ಹೇಳಿದರು. ‘ಸದ್ಯದಲ್ಲೇ ಅರಣ್ಯ ಸಚಿವ ಈಶ್ವರಖಂಡ್ರೆ ಅವರು ನಗರಕ್ಕೆ ಬರಲಿದ್ದು ಅವರ ಸಮ್ಮುಖದಲ್ಲೇ ಜಿಲ್ಲಾಧಿಕಾರಿ ಮತ್ತು ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಸಭೆ ನಡೆಸಲಾಗುವುದು. ರೈತ ನಾಯಕರನ್ನೂ ಸಭೆಗೆ ಆಹ್ವಾನಿಸಲಾಗುವುದು. ಸಮಸ್ಯೆಗಳ ಬಗ್ಗೆ ಸಂಪೂರ್ಣವಾಗಿ ಚರ್ಚಿಸಿ ನ್ಯಾಯ ಒದಗಿಸಲಾಗುವುದು. ರೈತರು ಭಯಪಡಬಾರದು’ ಎಂದರು. ತಹಸಿಲ್ದಾರ್ ಸುಮಂತ್ ಎಸಿಎಫ್ ಅವರು ಮನವಿ ಸ್ವೀಕರಿಸಿ ಸಮಸ್ಯೆ ಇತ್ಯರ್ಥಗೊಳಿಸುವ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT