ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌರತ್ವ ತಿದ್ದುಪಡಿ ಕಾಯ್ದೆ ಕೈಬಿಡಲು ಆಗ್ರಹ

ಆಜಾದ್‌ ಪಾರ್ಕ್‌ ವೃತ್ತದಲ್ಲಿ ಬೃಹತ್‌ ಪ್ರತಿಭಟನೆ
Last Updated 17 ಡಿಸೆಂಬರ್ 2019, 15:56 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ಕೇಂದ್ರ ಸರ್ಕಾರವು ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಮೂಲಕ ಸಂವಿಧಾನದ ಮೂಲಕ್ಕೆ ಕೈಹಾಕಿದೆ. ಇದು ಜಾತ್ಯತೀತವಾದನ್ನು ಅಲುಗಾಡಿಸುವ ಪ್ರಯತ್ನ’ ಎಂದು ಮುಸ್ಲಿಂ ಸಮುದಾಯದ ಮುಖಂಡ ರಿಜ್ವಾನ್‌ ಖಾಲಿದ್‌ ದೂಷಿಸಿದರು.

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟ ಸಮಿತಿ (ವಿವಿಧ ಪಕ್ಷಗಳು ಮತ್ತು ಪ್ರಗತಿಪರ ಸಂಘಟನೆಗಳು ಸಂಯುಕ್ತ ಸಮಿತಿ) ವತಿಯಿಂದ ಆಜಾದ್‌ ಪಾರ್ಕ್‌ ವೃತ್ತದಲ್ಲಿ ಮಂಗಳವಾರ ಏರ್ಪಡಿಸಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು. ‘ಈಗ ಮಾಡಿರುವ ಬದಲಾವಣೆ ಸಾಮಾನ್ಯ ಅಲ್ಲ. ಇವೆರಡೂ ಕರಾಳ ಶಾಸನಗಳು. ಪೌರತ್ವ ನಿಟ್ಟಿನಲ್ಲಿ ಎನ್‌ಆರ್‌ಸಿ ಮೂಲಕ ಭಾರತೀಯರು ಎಂದು ಸಾಬೀತುಪಡಿಸಬೇಕು. ಇದು ದೊಡ್ಡಪೆಟ್ಟು. ಮುಸ್ಲಿಮರಿಗೆ ಮಾತ್ರವಲ್ಲ ಎಲ್ಲ ಸಮುದಾಯದವರಿಗೂ ಇದು ಕೊಡಲಿ ಏಟು. ಈ ಶಾಸನಗಳನ್ನು ಕೈಬಿಡಬೇಕು’ ಎಂದು ಆಗ್ರಹಿಸಿದರು.

‘ಈ ಕಾನೂನನ್ನು ಅಸ್ಸಾಂನಲ್ಲಿ ಮೊದಲು ಪ್ರಯೋಗ ಮಾಡಿ, ಈಗ ಎಲ್ಲ ಕಡೆಗೆ ಅನ್ವಯಿಸಲಾಗುತ್ತಿದೆ. ವಲಸಿಗರನ್ನು ಓಡಿಸುತ್ತೆವೆಂಬ ನೆಪವೊಡ್ಡಲಾಗಿದೆ. ಬದುಕುವ ಹಕ್ಕು ಕಿತ್ತುಕೊಳ್ಳಬೇಡಿ ಎಂಬುದು ನಮ್ಮ ಮೊರೆ’ ಎಂದರು.

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್‌ ಮಾತನಾಡಿ, ‘ಬಿಜೆಪಿಯ ಈ ನಡೆ ಖಂಡನೀಯ. ಪೌರತ್ವ ಪ್ರಶ್ನಿಸುವ ಹಕ್ಕು ಸರ್ಕಾರಕ್ಕೆ ಇಲ್ಲ. ಬಿಜೆಪಿಯು ಪೌರತ್ವ ತಿದ್ದುಪಡಿ ಕಾಯ್ದೆ, ಎನ್‌ಆರ್‌ಸಿಯಂಥ ಭಾವನಾತ್ಮಕ ವಿಚಾರಗಳನ್ನು ಕೈಗೆತ್ತಿಕೊಂಡು ವಿಭಜನೆಗೆ ಮುಂದಾಗಿದೆ’ ಎಂದು ಆರೋಪಿಸಿದರು.

ಜೆಡಿಎಸ್‌ ರಾಜ್ಯ ಘಟಕದ ಉಪಾಧ್ಯಕ್ಷ ಎಚ್‌.ಎಚ್‌.ದೇವರಾಜ್‌ ಮಾತನಾಡಿ, ‘ಸಂವಿಧಾನ ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ. ದೇಶದ ಮೂಲ ನಿವಾಸಿಗಳ ಹಕ್ಕುಗಳನ್ನು ಮೊಟಕುಗೊಳಿಸುವ ಷಡ್ಯಂತ್ರವನ್ನು ಬಿಜೆಪಿ ಮಾಡುತ್ತಿದೆ. ಮೂಲನಿವಾಸಿಗಳ ಬುಡಕ್ಕೆ ಕೈಹಾಕಬಾರದು’ ಎಂದು ಎಚ್ಚರಿಸಿದರು.

ಬಿಎಸ್ಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಟಿ.ರಾಧಾಕೃಷ್ಣ ಮಾತನಾಡಿ, ‘ದೇಶದಲ್ಲಿ ಸುರಕ್ಷಿತವಾಗಿರುತ್ತೆವೆಯೇ ಎಂಬ ಆತಂಕ ಕಾಡುತ್ತಿದೆ. ಈ ಕಾನೂನುಗಳನ್ನು ಒಪ್ಪಲು ಸಾಧ್ಯ ಇಲ್ಲ. ಮಾಡು ಇಲ್ಲವೆ, ಮಡಿ ಎಂದು ನಿರ್ಧರಿಸಿ ಕಾನೂನುಬದ್ಧವಾಗಿ ನಾವೆಲ್ಲರೂ ಅವುಗಳ ವಿರುದ್ಧ ಹೋರಾಡಬೇಕು’ ಎಂದು ಹೇಳಿದರು.

ಸಿಪಿಐ ಮುಖಂಡ ಎಚ್‌.ಎಂ.ರೇಣುಕಾರಾಧ್ಯ ಮಾತನಾಡಿ, ಈ ಕಾನೂನುಗಳು ಜಾತಿ ಆಧಾರಿತವಾಗಿವೆ. ಕಾಯ್ದೆ ವಾಪಸ್‌ ಪಡೆಯವವರೆಗೆ ಹೋರಾಟ ಮಾಡಬೇಕಿದೆ’ ಎಂದರು.

ಸಿಪಿಐಎಂಎಲ್‌ ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ ಮಾತನಾಡಿ,‘ಅಲ್ಪಸಂಖ್ಯಾತರನ್ನು ಗುರಿಯಾಗಿಟ್ಟುಕೊಂಡು ಈ ಕಾಯ್ದೆಗಳನ್ನ ರೂಪಿಸಿದ್ದಾರೆ. ಈ ಕಾನೂನುಗಳ ವಿರುದ್ಧ ದೇಶದ ಎರಡನೇ ಸ್ವಾತಂತ್ರ್ಯ ಸಂಗ್ರಾಮ ಹೋರಾಟ ಆರಂಭಿಸಬೇಕಿದೆ. ಎಲ್ಲರೂ ಒಗ್ಗೂಡಿ ಹೋರಾಟ ಮಾಡಬೇಕಿದೆ’ ಎಂದರು.

ಕಾಂಗ್ರೆಸ್‌ ಮುಖಂಡ ಎಂ.ಎಲ್‌.ಮೂರ್ತಿ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಜನಪ್ರತಿನಿಧಿಗಳು ಜನರ ಸೇವಕರು ಎಂಬುದನ್ನು ಮರೆಯಬಾರದು. ದೇಶ ಈಗ ಸುರಕ್ಷಿತರ ಕೈಯಲ್ಲಿ ಇಲ್ಲ. ಬಿಜೆಪಿ ಒಡೆದು ಆಳುವ ಹುನ್ನಾರ ಮಾಡುತ್ತಿದೆ’ ಎಂದು ದೂಷಿಸಿದರು.

ಪೌರತ್ವ ತಿದ್ದುಪಡಿ ಕಾಯ್ದೆ ರದ್ದುಗೊಳಿಸಿ ಭಾರತದ ಧರ್ಮನಿರಪೇಕ್ಷ ತತ್ವವನ್ನು ಎತ್ತಿ ಹಿಡಿಯಬೇಕು ಎಂದು ಒತ್ತಾಯಿಸಿ ರಾಷ್ಟ್ರಪತಿಯವರಿಗೆ ಬರೆದ ಮನವಿಪತ್ರವನ್ನು ತಹಶೀಲ್ದಾರ್‌ ನಂದ್‌ಕುಮಾರ್‌ಅವರಿಗೆ ಮುಖಂಡರು ಸಲ್ಲಿಸಿದರು.

ಮುಖಂಡರಾದ ಸಿ.ಎನ್‌.ಅಕ್ಮಲ್‌, ಅಮ್ಜದ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT