ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೃಂಗೇರಿ ಅತ್ಯಾಚಾರ ಪ್ರಕರಣ| ಮೂವರ ವಿಚಾರಣೆ; ಪಿಎಸ್‌ಐ ವರ್ಗಾವಣೆ

ಶೃಂಗೇರಿ ಬಾಲಕಿಯ ಅತ್ಯಾಚಾರ ಪ್ರಕರಣದ ತನಿಖೆ ಚುರುಕು
Last Updated 6 ಫೆಬ್ರುವರಿ 2021, 16:58 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿ ತಾಲ್ಲೂಕಿನ 15 ವರ್ಷದ ಬಾಲಕಿಯ ಅತ್ಯಾಚಾರ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದು, ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಹೆಚ್ಚುವರಿ ಎಸ್ಪಿ ಎಸ್‌.ಎನ್‌.ಶ್ರುತಿ ನೇತೃತ್ವದ ತಂಡ ಈಗ ಪ್ರಕರಣದ ತನಿಖೆಯಲ್ಲಿ ತೊಡಗಿದೆ.

ಪಶ್ಚಿಮ ವಲಯ ಐಜಿಪಿ ದೇವ್‌ ಜ್ಯೋತಿ ರೇ ಅವರು ಶನಿವಾರ ಶೃಂಗೇರಿಯಲ್ಲಿ ಪರಿಶೀಲನೆ ನಡೆಸಿದ್ದಾರೆ. ಸಭೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ.

‘ವಿವಿಧ ಆಯಾಮಗಳಲ್ಲಿ ಪ್ರಕರಣದ ತನಿಖೆ ಮುಂದುವರಿದಿದೆ. ಮತ್ತೆ ಮೂವರನ್ನು ವಶಕ್ಕೆ ಪಡೆಯಲಾಗಿದೆ. ವಿಚಾರಣೆ ನಡೆಯುತ್ತಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಕ್ಷಯ್‌ ಎಂ. ಹಾಕೆ ‘ಪ್ರಜಾವಾಣಿ’ಗೆ ತಿಳಿಸಿದರು.

ಶೃಂಗೇರಿ ಠಾಣೆ ಪಿಎಸ್‌ಐ ಕೀರ್ತಿಕುಮಾರ್‌ ಅವರನ್ನು ಕರಾವಳಿ ಕಾವಲುಪಡೆಗೆ ವರ್ಗಾಯಿಸಲಾಗಿದೆ. ಚಿಕ್ಕಮಗಳೂರು ಗ್ರಾಮಾಂತರ ಠಾಣೆ ಪಿಎಸ್‌ಐ ಗವಿರಾಜ್‌ ಅವರಿಗೆ ಹೊಣೆ ವಹಿಸಲಾಗಿದೆ. ಅಮಾನತುಗೊಂಡಿರುವ ಸಿಪಿಐ ಸಿದ್ದರಾಮಯ್ಯ ಅವರ ಜಾಗಕ್ಕೆ ನಗರ ಸಿಇಎನ್‌ ಇನ್‌ಸ್ಪೆಕ್ಟರ್‌ ರಕ್ಷಿತ್‌ ಅವರನ್ನು ನಿಯೋಜಿಸಲಾಗಿದೆ.

ಫೋನ್‌ ಕರೆಗಳ ವಿವರ, ಬಾಲಕಿ ಹೇಳಿಕೆ , ಆರೋಪಿಗಳ ಸಂಪರ್ಕ ಜಾಲ ಇತ್ಯಾದಿ ಆಧರಿಸಿ ತಂಡವು ಶೋಧ ಕಾರ್ಯಾಚರಣೆಯಲ್ಲಿ ತೊಡಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಎಂಟು ಆರೋಪಿಗಳನ್ನು ಬಂಧಿಸಲಾಗಿದೆ. 9 ಮಂದಿ ತಲೆ ಮರೆಸಿಕೊಂಡಿದ್ದಾರೆ.

ಬಾಳೆಹೊನ್ನೂರು: ‘ಶೃಂಗೇರಿಯಲ್ಲಿ ಬಾಲಕಿ ಮೇಲೆ ನಡೆದ ಅತ್ಯಾಚಾರ ಖಂಡನೀಯವಾಗಿದ್ದು, ಮಾನವ ಸಮಾಜ ತಲೆ ತಗ್ಗಿಸುವಂತಹದು. ಆರೋಪಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಅನಿವಾಸಿ ಭಾರತೀಯ ಸಮಿತಿ ಮಾಜಿ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ ಆಗ್ರಹಿಸಿದ್ದಾರೆ.

‘ಧಾರ್ಮಿಕ ಮತ್ತು ಶಾಂತಿಗೆ ಹೆಸರಾದ ಶೃಂಗೇರಿಯಲ್ಲಿ ಇಂತಹ ಘಟನೆ ನಡೆದಿರುವುದು ದುರದೃಷ್ಟಕರ. ಪ್ರಜ್ಞಾವಂತರ ಸಮಾಜದಲ್ಲಿ ಇಂತಹ ಘಟನೆಗಳು ನಡೆಯಬಾರದು. ಅಪರಾಧಿಗಳು ಯಾವುದೇ ಪಕ್ಷ, ಜಾತಿ, ಸಂಘಟನೆಗೆ ಸೇರಿದ್ದರೂ ಅವರು ಯಾವುದೇ ಪ್ರಭಾವಿಗಳಾಗಿದ್ದರೂ ಅಧಿಕಾರಿಗಳು ಅದನ್ನು ಲೆಕ್ಕಿಸದೆ ಕಠಿಣ ಕ್ರಮ ಕೈಗೊಳ್ಳಬೇಕು. ಅಪರಾಧಿಗಳಿಗೆ ತಕ್ಕ ಶಿಕ್ಷೆ ನೀಡಿದಾಗ ಮಾತ್ರ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಬಹುದು. ಬಾಲಕಿಗೆ ಸರ್ಕಾರ ಸೂಕ್ತ ರಕ್ಷಣೆ ಜೊತೆಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

‘ರಾಜಕೀಯ ಲಾಭ ಯತ್ನ’

ಶೃಂಗೇರಿ: ‘ಬಾಲಕಿ ಮೇಲೆ ಅತ್ಯಾಚಾರ ಪ್ರಕರಣದ ಆರೋಪಿಗಳು ಯಾರೇ ಆಗಿರಲಿ ಅವರನ್ನು ಬಂಧಿಸಿ, ತನಿಖೆ ನಡೆಸಬೇಕು. ಇದರಲ್ಲಿ ರಾಜಕೀಯ ಲಾಭ ಪಡೆಯಲು ಯತ್ನಿಸುವುದು ಸರಿಯಲ್ಲ’ ಎಂದು ಬಿಜೆಪಿ ತಾಲ್ಲೂಕು ವಕ್ತಾರ ಅಂಗುರ್ಡಿ ದಿನೇಶ್ ತಿಳಿಸಿದ್ದಾರೆ.

‘ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ಅವರನ್ನು ಪ್ರಕರಣದ ಜೊತೆಗೆ ತಳಕು ಹಾಕಿ, ಕಾಂಗ್ರೆಸ್ ಮುಖಂಡರು ರಾಜಕೀಯ ಲಾಭಕ್ಕೆ ಯತ್ನಿಸುತ್ತಿದ್ದಾರೆ. ಇಂತಹ ಘಟನೆಗಳಲ್ಲಿ ಯಾರೂ ರಾಜಕೀಯ ಮಾಡಬಾರದು’ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT