ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಡಿಗೆರೆ, ಕಳಸ, ಕೊಪ್ಪದಲ್ಲಿ ಮುಂದುವರಿದ ಮಳೆ: ಹೆಚ್ಚಿದ ಹಾನಿ

Last Updated 7 ಆಗಸ್ಟ್ 2022, 16:31 IST
ಅಕ್ಷರ ಗಾತ್ರ

ಮೂಡಿಗೆರೆ: ತಾಲ್ಲೂಕಿನಾದ್ಯಂತ ಭಾನುವಾರವೂ ಮಳೆ ಮುಂದುವರಿ ದಿದ್ದು, ಅಪಾರ ಹಾನಿಯುಂಟಾಗಿದೆ.

ಇಡೀ ದಿನ ಎಡಬಿಡದೇ ಮಳೆ ಸುರಿದು ಜನಜೀವನವನ್ನು ಅಸ್ತವ್ಯಸ್ತಗೊಳಿಸಿತು. ನಾಟಿ ಮಾಡಿದ್ದ ಭತ್ತದ ಗದ್ದೆಗಳು ಜಲಾವೃತಗೊಂಡವು. ಉದುಸೆ, ಜಿ. ಹೊಸಳ್ಳಿ, ಅಗ್ರಹಾರ, ಬೆಟ್ಟದಮನೆ ಭಾಗಗಳಲ್ಲಿ ನಾಟಿ ಮಾಡಿದ್ದ ಗದ್ದೆಗೆ ಮರಳು ನುಗ್ಗಿ, ಪೈರೆಲ್ಲವೂ ಮಣ್ಣಿನಡಿಯಲ್ಲಿ ಮುಚ್ಚಿ ಹೋಗಿ ನಷ್ಟ ಉಂಟಾಗಿದೆ. ರಾಷ್ಟ್ರೀಯ ಹೆದ್ದಾರಿ 173ರ ಕುದ್ರೆಗುಂಡಿ ಗ್ರಾಮದ ಬಳಿ ಹೆದ್ದಾರಿಗೆ ಅಡ್ಡಲಾಗಿ ಮರ ಬಿದ್ದಿದ್ದರಿಂದ ಒಂದು ಗಂಟೆ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು.

ಮಳೆಯ ಹೊಡೆತಕ್ಕೆ ಸಿಲುಕಿ ಹಲವೆಡೆ ಮನೆಗಳು ಹಾನಿಗೊಂಡಿವೆ. ಉದುಸೆ ಗ್ರಾಮದ ಸಿದ್ದಯ್ಯ ಎಂಬುವರ ಮನೆ ಕುಸಿದು ಬಿದ್ದಿದ್ದು, ದಿನಸಿ ಪದಾರ್ಥಗಳು, ಬಟ್ಟೆ ನೀರು ಪಾಲಾಗಿವೆ. ಅಂಗಡಿ ಗ್ರಾಮದ ಸಿದ್ದಮ್ಮ ಎಂಬುವರ ಮನೆಯ ಚಾವಣಿ ಕುಸಿದಿದ್ದು ನಷ್ಟ ಉಂಟಾಗಿದೆ. ಕೆಂಜಿಗೆ – ಎಸ್ಟೇಟ್ ಕುಂದೂರು ಸಂಪರ್ಕ ರಸ್ತೆಯಲ್ಲಿ ಭೂ ಕುಸಿತ ಉಂಟಾಗಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ. ವಿದ್ಯುತ್ ಕಂಬಗಳು ಧರೆಗುರುಳಿರುವುದರಿಂದ ಇಡೀ ದಿನ ವಿದ್ಯುತ್ ಪೂರೈಕೆಯಲ್ಲಿ ವ್ಯತಯ ಉಂಟಾಗಿತ್ತು.

ಮಳೆಯಿಂದ ಕಾಫಿ ಕಾಯಿಗಳು ಉದುರತೊಡಗಿದ್ದು, ಕಾಳು ಮೆಣಸಿನ ತೆನೆಗಳು ನೆಲ ಕಚ್ಚುತ್ತಿವೆ. ಮಳೆ ಹೆಚ್ಚಾಗಿರುವುದರಿಂದ ಭಾನುವಾರ ಬಹುತೇಕ ಕಾಫಿ ತೋಟಗಳಲ್ಲಿ ರಜೆ ಘೋಷಿಸಲಾಗಿದ್ದು, ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿದ್ದವು.

ಮನೆ ಕುಸಿತ

ಕಳಸ: ಹೊರನಾಡು ಗ್ರಾಮ ವ್ಯಾಪ್ತಿಯ ಕವನಳ್ಳದ ನೇರಳೆಕೊಂಡದಲ್ಲಿ ಸತತ ಮಳೆಯಿಂದ ಮನೆ ಕುಸಿದಿದೆ. ಗ್ರಾಮದ ಯಶೋದಾ ಎಂಬುವರ ಮನೆಯ ಅಡುಗೆ ಮನೆ, ಬಚ್ಚಲು ಮನೆ ಗೋಡೆ ಕುಸಿದಿದೆ.

'ಅಕ್ಕಿ, ಬಟ್ಟೆ, ಅಡುಗೆ ಪಾತ್ರೆಗಳು ಗೋಡೆ ಕೆಳಗೆ ಸಿಲುಕಿ ನಾಶವಾಗಿವೆ. ನಾನು ಮತ್ತು ಮಗ ಪಕ್ಕದ ಕೊಣೆಯಲ್ಲಿ ಮಲಗಿದ್ದರಿಂದ ನಮಗೆ ಅಪಾಯ ಆಗಲಿಲ್ಲ' ಎಂದು ಯಶೋದಾ ತಿಳಿಸಿದ್ದಾರೆ.

ಗಾಳಿ–ಮಳೆ

ಕೊಪ್ಪ: ತಾಲ್ಲೂಕಿನಲ್ಲಿ ಭಾನುವಾರ ಧಾರಾಕಾರ ಮಳೆಯಾಗಿದೆ. ಸತತ ಮಳೆಯಿಂದ ಹಳ್ಳ, ನದಿಗಳಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿದೆ.

ಭಾನುವಾರ ಬೆಳಿಗ್ಗೆವರೆಗೆ ಕೊಪ್ಪದಲ್ಲಿ 8 ಸೆಂ.ಮೀ, ಹರಿಹರಪುರ
ದಲ್ಲಿ 6.6 ಸೆಂ.ಮೀ, ಜಯಪುರದಲ್ಲಿ 6.1 ಸೆಂ.ಮೀ, ಬಸರೀಕಟ್ಟೆಯಲ್ಲಿ 6.79, ಕಮ್ಮರಡಿಯಲ್ಲಿ 7.52 ಸೆಂ.ಮೀ. ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT