ನರಸಿಂಹರಾಜಪುರ: ತಾಲ್ಲೂಕಿನ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿಯಿಂದ ಮಳೆ ಸ್ವಲ್ಪ ಕಡಿಮೆಯಾಗಿದ್ದು, ಗಾಳಿ– ಮಳೆಗೆ ಹಲವು ಗ್ರಾಮಗಳಲ್ಲಿ ಮನೆ ಗೋಡೆ ಕುಸಿದು ಹಾನಿ ಸಂಭವಿಸಿದೆ.
ತಾಲ್ಲೂಕಿನ ಬಾಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಡಬಾಗಿಲು ಗ್ರಾಮದ ಎ.ಪಿ.ಪದ್ಮನಾಭ ಎಂಬುವರ ಮನೆಯ ಗೋಡೆ ಕುಸಿದು ಹಾನಿಯಾಗಿದೆ. ಮೇಗರಮಕ್ಕಿ ಗ್ರಾಮದ ಜೀರುಳಿ ವಾಸಿಯಾದ ಶಾರದಮ್ಮ ಎಂಬುವರ ಮನೆಯ ಪಕ್ಕದಲ್ಲಿದ್ದ ಕೊಟ್ಟಿಗೆಗೆ ಹಾನಿಯಾಗಿದೆ. ಅಂಡವಾನಿಗದ್ದೆ ನಿವಾಸಿ ಸುರಯ್ಯ ಎಂಬುವರ ಮನೆಯ ಚಾವಣಿ ಹಾಗೂ ಗೋಡೆ ಕುಸಿದು ಹಾನಿಯಾಗಿದೆ.
ತಾಲ್ಲೂಕಿನ ಸೀತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುದುರೆಗುಂಡಿ ಮತ್ತು ಮಲ್ಲಂದೂರು ರಸ್ತೆ ಮಧ್ಯೆ ಬರುವ ಬೆಮ್ಮನೆ ಸಮೀದ ಕುರುಡನಗದ್ದೆ ತಿರುವಿನ ರಸ್ತೆಯ ಒಂದು ಭಾಗದ ಧರೆ ಕುಸಿದಿದ್ದು, ರಸ್ತೆ ಸಂಪೂರ್ಣ ಕುಸಿಯುವ ಭೀತಿ ಎದುರಾಗಿದೆ. ರಸ್ತೆ ಕುಸಿತವಾದರೆ ಕುದುರೆಗುಂಡಿ ಮತ್ತು ಮಲ್ಲಂದೂರಿಗೆ ಪರ್ಯಾಯ ರಸ್ತೆ ಇಲ್ಲದಿರುವುದರಿಂದ ಭಾರಿ ವಾಹನಗಳ ಸಂಚಾರ ಸ್ಥಗಿತವಾಗುವ ಸಾಧ್ಯತೆಯಿದೆ. ಲೋಕೋಪಯೋಗಿ ಇಲಾಖೆಯವರು ರಸ್ತೆ ಕುಸಿತವಾದ ಜಾಗದಲ್ಲಿ ಎಚ್ಚರಿಕೆಯ ಫಲಕ ಹಾಕಬೇಕು. ತುರ್ತು ಕಾಮಗಾರಿ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.