ಶುಕ್ರವಾರ, ಅಕ್ಟೋಬರ್ 7, 2022
28 °C

ತಾಳ್ಮೆಯಿಂದ ಜೀವನದಲ್ಲಿ ಶ್ರೇಯಸ್ಸು: ವೀರಸೋಮೇಶ್ವರ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಂಭಾಪುರಿ ಪೀಠ (ಬಾಳೆಹೊನ್ನೂರು): ‘ಕಣ್ಣು ಚೆನ್ನಾಗಿದ್ದರೆ ಜಗತ್ತು ಕಾಣಬಹುದು. ನಾಲಿಗೆ, ನಡತೆ ಚೆನ್ನಾಗಿದ್ದರೆ ಜಗತ್ತೇ ನಮ್ಮನ್ನು ನೋಡುತ್ತದೆ. ಸಚ್ಚಾರಿತ್ರ್ಯದಿಂದ ಮನುಷ್ಯನಿಗೆ ಯೋಗ್ಯ ಸಂಸ್ಕಾರ ಕೊಟ್ಟರೆ ಎಲ್ಲರ ಬಾಳು ಉಜ್ವಲಗೊಳ್ಳುತ್ತದೆ’ ಎಂದು ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಹೇಳಿದರು.

ಪೀಠದಲ್ಲಿ ನಡೆದ ಶ್ರಾವಣ ಪುರಾಣ ಪ್ರವಚನ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಸುಂದರ, ಸದೃಢ ಬದುಕಿಗೆ ಬೇಕಾಗಿರುವ ತಾಳ್ಮೆ ಮತ್ತು ವಿನಯ ರೂಢಿಸಿಕೊಳ್ಳಬೇಕು. ಬೇರೆ ಬೇರೆ ಧರ್ಮಗಳನ್ನು ಒಳಹೊಕ್ಕು ನೋಡಿದರೆ ಎಲ್ಲ ಧರ್ಮಗಳ ತಿರುಳು ಒಳಿತನ್ನು ಬಯಸುವುದೇ ಆಗಿದೆ. ಗಾಜಿನ ಕನ್ನಡಿಯಲ್ಲಿ ಎಲ್ಲರೂ ಸುಂದರವಾಗಿ ಕಾಣುತ್ತಾರೆ. ಮನಸ್ಸಿನ ಕನ್ನಡಿಯಲ್ಲೂ ಸುಂದರವಾಗಿ ಕಾಣಲು ಎಲ್ಲರೂ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು’ ಎಂದರು.

ದೀಪ ಇತರರಿಗಾಗಿ ಉರಿಯುವುದೇ ವಿನಾ ಇತರರ ಯಶಸ್ಸನ್ನು ಕಂಡು ಉರಿದುಕೊಳ್ಳುವುದಿಲ್ಲ. ತಾಳ್ಮೆ ಎಂಬುದು  ಸದ್ಗುಣ, ಜೊತೆಗೆ ಅದೊಂದು ಜೀವನದ ಪಾಠ. ಕಷ್ಟ –ಸುಖಗಳು ಶಾಶ್ವತವಲ್ಲ. ಕಷ್ಟದ ನಂತರ ಸುಖ ಮತ್ತು ಸುಖದ ನಂತರ ಕಷ್ಟ ಇದ್ದದ್ದೇ. ಆದರೆ ಕಷ್ಟದಲ್ಲಿ ತಾಳ್ಮೆ, ಸುಖದ ಕಾಲದಲ್ಲಿ ವಿನಯದಿಂದ ಬಾಳಿದರೆ ಜೀವನದಲ್ಲಿ ಶ್ರೇಯಸ್ಸು ಕಾಣಲು ಸಾಧ್ಯ ಎಂದು ಹೇಳಿದರು.

ಬಿ.ಕಣಬೂರು ಗ್ರಾಮ ಪಂಚಾಯತಿ ಸದಸ್ಯ ಬಿ.ಜಗದೀಶ್ಚಂದ್ರ ವಿಶೇಷ ಉಪನ್ಯಾಸ ನೀಡಿದರು. ‘ಬಾಳಿಗೆ ಬೆಳಕು’ ಕೃತಿಯನ್ನು ರಂಭಾಪುರಿ ಸ್ವಾಮೀಜಿ ಬಿಡುಗಡೆಗೊಳಿಸಿದರು. ರಾಣೆಬೆನ್ನೂರಿನ ಸಿದ್ಧಲಿಂಗಸ್ವಾಮಿ ಪರಿವಾರದವರು ಅನ್ನ ದಾಸೋಹ ಸೇವೆ ಸಲ್ಲಿಸಿದರು.

ಗಂವ್ಹಾರ ಹಿರೇಮಠದ ವಿರೂಪಾಕ್ಷ ಸ್ವಾಮೀಜಿ, ಬಬಲಾದ ದಾನಯ್ಯ ದೇವರು, ಉಟಗಿ ಶಿವಪ್ರಸಾದ ದೇವರು, ರವುಡಕುಂದ ಶಿವಯೋಗಿ ಶಿವಾಚಾರ್ಯ, ಶಿವಮೊಗ್ಗದ ಯೋಗಾಚಾರ್ಯ ಸಿ.ವಿ.ರುದ್ರಾರಾಧ್ಯ, ಆಸಂದಿ ರುದ್ರಯ್ಯ, ಚನ್ನವೀರಸ್ವಾಮಿ, ಬಾಳಯ್ಯ ಇಂಡಿವ್ಮಠ, ಗಂಗಾಧರಸ್ವಾಮಿ, ಬಸಯ್ಯಸ್ವಾಮಿ, ಜಗದ್ಗುರು ರೇಣುಕಾಚಾರ್ಯ ಕೈಗಾರಿಕಾ ತರಬೇತಿ ಕೇಂದ್ರದ ಪ್ರಾಚಾರ್ಯ ಎಚ್.ಆರ್.ಆನಂದ್, ಪ್ರಭಾರ ಮುಖ್ಯ ಶಿಕ್ಷಕ ವೀರೇಶ ಕುಲಕರ್ಣಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು