ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು: ರಾಣಿಝರಿ ಪ್ರವಾಸ–‍ಪ್ರಯಾಸ

ಸಂಪೂರ್ಣ ಹಾಳಾಗಿರುವ ರಸ್ತೆ: ಪ್ರವಾಸ ದುಬಾರಿ
Published 11 ಜನವರಿ 2024, 7:43 IST
Last Updated 11 ಜನವರಿ 2024, 7:43 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಪ್ರವಾಸಿಗರನ್ನು ಕೈಬೀಸಿ ಕರೆಯುವ ಜಿಲ್ಲೆಯ ಪ್ರಕೃತಿ ತಾಣಗಳಲ್ಲಿ ರಾಣಿಝರಿ ಕೂಡ ಒಂದು. ಸಂಪೂರ್ಣ ಹಾಳಾಗಿರುವ ರಸ್ತೆಯಲ್ಲಿ ಈ ತಾಣಕ್ಕೆ ತೆರಳಲು ಜನ ಹರಸಾಹಸ ಪಡುತ್ತಿದ್ದಾರೆ.

ಮೂಡಿಗೆರೆ ತಾಲ್ಲೂಕಿನ ಸುಂಕಸಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ರಾಣಿಝರಿ ಪ್ರವಾಸಿ ತಾಣ ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಗಡಿ ರೇಖೆಯಂತಿದೆ. ಗುಡ್ಡದ ಮೇಲಿಂದ ಮೂರೂವರೆ ಸಾವಿರ ಅಡಿಯ ಪ್ರಪಾತ ನೋಡಲು ನಿತ್ಯ ಪ್ರವಾಸಿಗರಿಗೆ ಸಾವಿರಾರು ಸಂಖ್ಯೆಯಲ್ಲಿ ಬರುತ್ತಿದ್ದಾರೆ. 

ಇದ್ದ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು, ಕಾರುಗಳು, ಮಿನಿ ಬಸ್‌ಗಳು ಹೋಗುವ ಸ್ಥಿತಿಯಲ್ಲಿ ರಸ್ತೆ ಇಲ್ಲವಾಗಿದೆ. ಮೂರು–ನಾಲ್ಕು ಕಿಲೋ ಮೀಟರ್ ದೂರದಲ್ಲೇ ವಾಹನಗಳನ್ನು ನಿಲ್ಲಿಸಿ ಜೀಪ್‌ಗಳಲ್ಲಿ ತೆರಳಬೇಕಾದ ಅನಿವಾರ್ಯತೆ ಇದೆ.

ಅರಣ್ಯ ಇಲಾಖೆ ಚೆಕ್‌ಪೋಸ್ಟ್ ಇರುವ ಜಾಗದಿಂದ ಹತ್ತಿರದಲ್ಲೇ ರಾಣಿಝರಿ ಇದೆ. ಅಲ್ಲಿಂದ ಬಲ್ಲಾಳರಾಯನ ದುರ್ಗ, ಬಂಡಾಜೆ ಜಲಪಾತ ವೀಕ್ಷಣೆಗೆ ಜನ ಚಾರಣ ತೆರಳುತ್ತಾರೆ. ಅರಣ್ಯ ಇಲಾಖೆ ಚೆಕ್‌ಪೋಸ್ಟ್‌ ತನಕ ಇದ್ದ ರಸ್ತೆಯನ್ನಾದರೂ ಸರಿಪಡಿಸಬೇಕು ಎಂಬುದು ಪ್ರವಾಸಿಗರ ಒತ್ತಾಯ.

ರಸ್ತೆ ಇಲ್ಲದಿರುವದನ್ನೇ ಜೀಪ್‌ಗಳ ಚಾಲಕರಿಗೆ ಅನುಕೂಲವಾಗಿದೆ. ದುಬಾರಿ ದರ ನೀಡಿಯೇ ಪ್ರವಾಸಿಗರು ಅರಣ್ಯ ಇಲಾಖೆ ಚೆಕ್‌ಪೋಸ್ಟ್ ತಲುಪಬೇಕಾಗಿದೆ. ಹಣ  ಪಾವತಿಸಲು ಸಾಧ್ಯವಾಗದವರು ಸುಂಕಸಾಲೆ ಗ್ರಾಮದಿಂದಲೇ ವಾಪಸ್ ಹೋಗಬೇಕಾಗಿದೆ. 

ರಾಣಿಝರಿ, ಬಂಡಾಜೆ, ಬಲ್ಲಾಳರಾಯನ ದುರ್ಗ ಚಾರಣ ಹೋಗುವವರನ್ನು ಕರೆದೊಯ್ಯಲು ಏಜೆಂಟರುಗಳು ಹುಟ್ಟಿಕೊಂಡಿದ್ದಾರೆ. ಬೆಂಗಳೂರಿನಿಂದಲೇ ಒಟ್ಟಿಗೆ ಕರೆತಂದು ಹೋಮ್‌ಸ್ಟೇಗಳಲ್ಲಿ ಉಳಿಸಿ ಚಾರಣ ಕರೆದೊಯ್ದು ವಾಪಸ್ ಬೆಂಗಳೂರಿಗೆ ಕರೆದೊಯ್ಯಲು ಪ್ಯಾಕೇಜ್ ದರ ನಿಗದಿ ಮಾಡಿಕೊಂಡಿದ್ದಾರೆ. ಇದರಿಂದ ಪ್ರವಾಸಿಗರ ಜೇಬಿಗೆ ಕತ್ತರಿ ಬೀಳುತ್ತಿದೆ.

‘ಚಾರಣ ಹೋಗುವವರು ಆನ್‌ಲೈನ್‌ನಲ್ಲಿ ಅರಣ್ಯ ಇಲಾಖೆಗೆ ₹300 ಶುಲ್ಕ ಪಾವತಿಸಬೇಕು. ಗೊತ್ತಿಲ್ಲದವರು ನೇರವಾಗಿ ಬಂದರೆ ನೆಟ್‌ವರ್ಕ್ ಇಲ್ಲದೆ ಪರದಾಡುವ ಸ್ಥಿತಿ ಇದೆ. ₹300 ಪಾವತಿಸಿ ಬರುವ ಪ್ರವಾಸಿಗರಿಗೆ ಶೌಚಾಲಯ ಸೇರಿ ಯಾವುದೇ ಮೂಲಸೌಕರ್ಯ ಇಲ್ಲ’ ಎಂದು ಪ್ರವಾಸಿಗರು ಬೇಸರ ವ್ಯಕ್ತಪಡಿಸುತ್ತಾರೆ.

ರಾಣಿಝರಿ ಪ್ರವಾಸಿ ತಾಣದಲ್ಲಿ ಸುರಕ್ಷತೆ ಇಲ್ಲದಿರುವುದು
ರಾಣಿಝರಿ ಪ್ರವಾಸಿ ತಾಣದಲ್ಲಿ ಸುರಕ್ಷತೆ ಇಲ್ಲದಿರುವುದು

ಸುರಕ್ಷತೆ ಇಲ್ಲವೇ ಇಲ್ಲ

3500 ಅಡಿ ಪ್ರಪಾತ ಇದ್ದು ಅದನ್ನು ನೋಡಲು ಬರುವ ಪ್ರವಾಸಿಗರಿಗೆ ಸುರಕ್ಷತೆಯೇ ಇಲ್ಲವಾಗಿದೆ. ಕೊಂಚ ಆಯತಪ್ಪಿದರೂ ಪ್ರಪಾತಕ್ಕೆ ಬೀಳುವ ಸಾಧ್ಯತೆ ಇದೆ.  ಪ್ರವಾಸಿಗರು ನಿಂತು ನೋಡಲು ಈಗ ವೀಕ್ಷಣಾ ಗೋಪುರ ನಿರ್ಮಾಣವಾಗುತ್ತಿದೆ. ಆದರೆ ಪ್ರಪಾತದ ಬಳಿ ಸುರಕ್ಷತೆ ಇಲ್ಲವಾಗಿದೆ. ಇತ್ತೀಚೆಗೆ ಬೆಂಗಳೂರಿನ ಯುವಕನೊಬ್ಬ ಪ್ರಪಾತಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರಪಾತದಿಂದ ಶವ ಮೇಲೆತ್ತಲು ಸ್ಥಳೀಯರು ಮತ್ತು ಪೊಲೀಸರು ಪರದಾಡಿದರು. ಗಾಜಿನ ಸೇತುವೆ ನಿರ್ಮಿಸಬೇಕು ಎಂಬ ಯೋಜನೆ ಪ್ರವಾಸೋದ್ಯಮ ಇಲಾಖೆ ಮುಂದಿದೆ. ಅದು ಸಾಕಾರಗೊಂಡರೆ ರಾಣಿಝರಿಯ ಪರಿಸರ ಸೌಂದರ್ಯವನ್ನು ಸವಿಯಬಹುದು ಎಂಬುದು ಪ್ರವಾಸಿಗರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT