ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಜ್ಜಂಪುರ | ಆಮೆಗತಿಯಲ್ಲಿ ರೈಲ್ವೆ ಕೆಳಸೇತುವೆ ಕಾಮಗಾರಿ

ಅಜ್ಜಂಪುರ: ವಾಹನಗಳ ಸಂಚಾರಕ್ಕೆ ತೊಡಕು– ತ್ವರಿತಕ್ಕೆ ನಾಗರಿಕರ ಒತ್ತಾಯ
Last Updated 11 ಜುಲೈ 2020, 8:08 IST
ಅಕ್ಷರ ಗಾತ್ರ

ಅಜ್ಜಂಪುರ: ಇಲ್ಲಿಗೆ ಸಮೀಪದ ಹೆಬ್ಬೂರು ಬಳಿ ರೈಲ್ವೆ ಕೆಳಸೇತುವೆ ಕಾಮಗಾರಿ ಆಮೆಗತಿಯಿಂದ ಸಾಗುತ್ತಿದೆ. ಇದು ಅಜ್ಜಂಪುರ- ಹೆಬ್ಬೂರು- ಶಿವನಿ ಮಾರ್ಗವನ್ನು ಬಳಸುವ ಜನರಿಗೆ ತೊಂದರೆಯಾಗುತ್ತಿದೆ.

ನಿರ್ಮಾಣ ಹಂತದಲ್ಲಿರುವ ರೈಲ್ವೆ ಕೆಳ ಸೇತುವೆಯ ಬದಲಿ ಕಚ್ಚಾ ರಸ್ತೆ ಕೆಸರುಮಯವಾಗಿದೆ. ಕಪ್ಪುಮಣ್ಣಿನಿಂದ ಕೂಡಿದ್ದು, ನುಣುಪಾಗಿದೆ. ತಗ್ಗು- ಏರಿಯಿಂದ ಕೂಡಿದೆ. ವಾಹನಗಳು ಸಾಗದಷ್ಟು ಪ್ರಮಾಣದಲ್ಲಿ ಹದ ಗೆಟ್ಟಿದ್ದು, ಸವಾರರು ನಿತ್ಯ ಸರ್ಕಸ್ ಮಾಡುವಂತಾಗಿದೆ.

‘ಈ ರಸ್ತೆಯಲ್ಲಿ ನಿತ್ಯ ಮೂರ್ನಾಲ್ಕು ವಾಹನಗಳು ಕೆಸರಿನ ರಾಡಿಯಲ್ಲಿ ಸಿಲುಕುವುದು ಸಾಮಾನ್ಯ. ಅವುಗಳನ್ನು ಹೊರತೆಗೆಯುವ ಕೆಲಸ ನಡೆಯುತ್ತಲೇ ಇರುತ್ತದೆ. ಇನ್ನು ಅನೇಕ ಬೈಕ್ ಸವಾರರು ಕಡಿದಾದ ಇಳಿಜಾರಿನಲ್ಲಿ ಜಾರಿ ಬಿದ್ದು, ಪೆಟ್ಟು ಮಾಡಿಕೊಂಡಿದ್ದಾರೆ’ ಎನ್ನುತ್ತಾರೆ ಸ್ಥಳೀಯ ನಿವಾಸಿ ಪ್ರಸನ್ನ.

‘ಕಾಮಗಾರಿ ತ್ವರಿತಗೊಳಿಸಿಲ್ಲ. ಮಳೆಗಾಲದ ಮುನ್ನ ಪೂರ್ಣಗೊಳಿಸಲು ಯತ್ನಿಸಿಲ್ಲ. ಮಳೆ ಆರಂಭವಾಗಿದ್ದು, ಕಾಮಗಾರಿ ಸ್ಥಳದಲ್ಲಿ ನೀರು ನಿಂತಿದೆ. ಇದು ನಿರ್ಮಾಣ ಕಾರ್ಯಕ್ಕೆ ಅಡ್ಡಿ ಯಾಗಿದೆ. ಆಗಾಗ ಕೆಲಸ ಸ್ಥಗಿತಗೊಳ್ಳು ತ್ತಿದೆ. ಗುತ್ತಿಗೆದಾರರ ನಿರ್ಲಕ್ಷ್ಯಕ್ಕೆ ವಾಹನ ಸವಾರರು ತೊಂದರೆ ಎದುರಿಸು ವಂತಾಗಿದೆ’ ಎಂದು ನಾರಣಾಪುರ ನಿವಾಸಿ ಶಂಕರಣ್ಣ ಆರೋಪಿಸಿದ್ದಾರೆ.

‘ಬದಲಿ ಮಾರ್ಗಕ್ಕೆ ಜಲ್ಲಿ ಹಾಕಿಸಿ, ಜನ-ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡುವಂತೆ ರೈಲ್ವೆ ಎಇಇ ಹಾಗೂ ಗುತ್ತಿಗೆದಾರರಿಗೆ ಹಲವು ಬಾರಿ ಮನವಿ ಮಾಡಿದ್ದೇನೆ. ಆದರೆ, ಅವರು ಸ್ಪಂದಿಸಿಲ್ಲ’ ಎಂದು ಹೆಬ್ಬೂರು ನಾಗೇಂದ್ರಪ್ಪ ದೂರಿದ್ದಾರೆ.

‘ಗುತ್ತಿಗೆ ಪಡೆದವರು, ಸಬ್ ಕಂಟ್ರ್ಯಾಕ್ಟರ್‌ಗೆ ಕಾಮಗಾರಿ ಹಸ್ತಾಂತರಿಸಿದ್ದಾರೆ. ಸಬ್ ಕಂಟ್ರಾಕ್ಟರ್ ಪರ್ಯಾಯ ರಸ್ತೆಯನ್ನು ಸರಿಪಡಿಲು ಹಿಂದೇಟು ಹಾಕುತ್ತಿದ್ದಾರೆ. ಮೂಲ ಗುತ್ತಿಗೆದಾರರು ಇತ್ತ ಹೆಜ್ಜೆ ಇಟ್ಟಿಲ್ಲ’ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹದಗೆಟ್ಟ ರಸ್ತೆಯಿಂದಾಗಿ ಅಜ್ಜಂಪುರ ತಲುಪಲು ತೊಂದರೆ ಆಗಿದೆ. ಕೇವಲ 5-6 ಕಿ.ಮೀ. ಅಂತರಕ್ಕೆ 10-15 ಕಿ.ಮೀ. ಸುತ್ತಿ ಬಳಸಿದ ರಸ್ತೆಯಲ್ಲಿ ಸಾಗುವಂತಾಗಿದೆ. ಕೂಡಲೇ ಸಂಬಂಧಪಟ್ಟವರು ಬದಲಿ ರಸ್ತೆಯನ್ನಾದರೂ ಸಂಚಾರಕ್ಕೆ ಯೋಗ್ಯ
ವಾಗಿಸಲು ಕ್ರಮ ವಹಿಸಬೇಕು ಎಂದು ಮಾರ್ಗದ ನಾರಣಾಪುರ, ಬಂಕನಗಟ್ಟೆ, ಅನುವನಹಳ್ಳಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT