ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಧ್ಯ ವಯಸ್ಸಿನವರಿಗೂ ವೃದ್ಧಾಪ್ಯ ವೇತನ: ವರ್ಷಕ್ಕೆ ₹2.16 ಕೋಟಿ ನಷ್ಟ

Published : 19 ಸೆಪ್ಟೆಂಬರ್ 2024, 0:09 IST
Last Updated : 19 ಸೆಪ್ಟೆಂಬರ್ 2024, 0:09 IST
ಫಾಲೋ ಮಾಡಿ
Comments

ಚಿಕ್ಕಮಗಳೂರು: ಮಧ್ಯ ವಯಸ್ಸಿನವರಿಗೂ ವೃದ್ಧಾಪ್ಯ ವೇತನ ಮಂಜೂರು ಮಾಡಿರುವ ಒಂದೂವರೆ ಸಾವಿರಕ್ಕೂ ಹೆಚ್ಚು ಪ್ರಕರಣಗಳು ಕಡೂರು ತಾಲ್ಲೂಕಿನಲ್ಲಿ ಬೆಳಕಿಗೆ ಬಂದಿದ್ದು, ‌1504 ಪ್ರಕರಣ ಅನಧಿಕೃತ ಎಂಬುದು ಪತ್ತೆಯಾಗಿದೆ. ವಿಶೇಷ ಎಂದರೆ 1,156 ಪ್ರಕರಣಗಳಿಗೆ ಸಂಬಂಧಿಸಿದ ಕಡತಗಳೇ ನಾಪತ್ತೆಯಾಗಿವೆ.

ಸಂಧ್ಯಾ ಸುರಕ್ಷಾ ಯೋಜನೆಯಡಿ ವೃದ್ಧಾಪ್ಯ ವೇತನವನ್ನು 60 ವರ್ಷ ಮೇಲ್ಪಟ್ಟವರಿಗೆ ನೀಡಲಾಗುತ್ತಿದೆ. ಬಡತನ ರೇಖೆಗಿಂತ ಕೆಳಗಿನವರು ಮಾತ್ರ ಈ ಯೋಜನೆಗೆ ಅರ್ಹರು. ಆದರೆ, ಸಾಮಾಜಿಕ ಭದ್ರತಾ ವಿಭಾಗದ ಶಿರಸ್ತೇದಾರ್(ಉಪತಹಶೀಲ್ದಾರ್) ಬಿ.ಸಿ.ಕಲ್ಮರುಡಪ್ಪ ಮತ್ತು ಇತರೆ ಸಿಬ್ಬಂದಿ ತಮ್ಮ ಲಾಗಿನ್ ದುರ್ಬಳಕೆ ಮಾಡಿಕೊಂಡು 35–40 ವಯಸ್ಸಿನವರಿಗೂ ವೇತನ ಮಂಜೂರು ಮಾಡಿದ್ದಾರೆ ಎಂಬ ದೂರುಗಳು ಜಿಲ್ಲಾಧಿಕಾರಿಗೆ ಸಲ್ಲಿಕೆಯಾಗಿದ್ದವು.

ಇದನ್ನು ಆಧರಿಸಿ ತನಿಖೆ ನಡೆಸುವಂತೆ ತರೀಕೆರೆ ಉಪವಿಭಾಗಾಧಿಕಾರಿ ಕೆ.ಜೆ.ಕಾಂತರಾಜ್ ಅವರಿಗೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶಿಸಿದ್ದರು. ಒಂದು ವರ್ಷದ ಅವಧಿಯಲ್ಲಿ ಶಿರಸ್ತೇದಾರ್ ಬಿ.ಸಿ.ಕಲ್ಮರುಡಪ್ಪ ಅವರ ಲಾಗಿನ್‌ನಲ್ಲಿ ಮಂಜೂರಾಗಿರುವ ವೃದ್ಧಾಪ್ಯ ವೇತನ ಪ್ರಕರಣಗಳ ಕುರಿತು ತನಿಖೆ ನಡೆಸಿರುವ ಕಾಂತರಾಜ್, ವರದಿ ಸಲ್ಲಿಸಿದ್ದಾರೆ.

ವೃದ್ಧಾಪ್ಯ ವೇತನ ಮಂಜೂರು ಮಾಡಲು ಫಲಾನುಭವಿಗೆ 60 ವರ್ಷ ವಯಸ್ಸಾಗಿರಬೇಕು. ಗ್ರಾಮ ಆಡಳಿತಾಧಿಕಾರಿ, ಕಂದಾಯ ಅಧಿಕಾರಿ, ಕಚೇರಿ ವಿಷಯ ನಿರೀಕ್ಷಕರ ವರದಿ ಆಧರಿಸಿ ಅನುಮೋದನೆ ನೀಡುವ ಅಧಿಕಾರ ಉಪತಹಶೀಲ್ದಾರರಿಗೆ ಇದೆ. 

ಆದರೆ, ‘ಕಲ್ಮರುಡಪ್ಪ ಅವರ ಲಾಗಿನ್‌ನಲ್ಲಿ 1,504 ಜನರಿಗೆ ವೃದ್ಧಾಪ್ಯ ವೇತನ ಮಂಜೂರು ಮಾಡಲಾಗಿದೆ. ಅದರಲ್ಲಿ 1,156 ಜನರಿಗೆ ಸಂಬಂಧಿಸಿದ ಒಂದೇ ಒಂದು ಪತ್ರ ಕಚೇರಿಯಲ್ಲಿ ಲಭ್ಯವಿಲ್ಲ. ಲಭ್ಯವಿರುವ 348 ಕಡತಗಳೂ ಅಕ್ರಮ ಮಂಜೂರಾತಿ’ ಎಂದು ವರದಿಯಲ್ಲಿ ಉಪವಿಭಾಗಾಧಿಕಾರಿ ತಿಳಿಸಿದ್ದಾರೆ.

‘ಯಾವ ಕಡತದಲ್ಲೂ ಗ್ರಾಮ ಆಡಳಿತಾಧಿಕಾರಿ, ಕಂದಾಯ ಅಧಿಕಾರಿ, ಕಚೇರಿ ವಿಷಯ ನಿರೀಕ್ಷಕರ ವರದಿಗಳು ಲಭ್ಯವಿಲ್ಲ. ಕಲ್ಮರುಡಪ್ಪ ಅವರೇ ನೇರವಾಗಿ ತಂತ್ರಾಂಶದಲ್ಲಿ ನಮೂದಿಸಿ ಅನುಮೋದಿಸಿರುವುದು ಕಂಡು ಬಂದಿದೆ’ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಕಡೂರು ತಾಲ್ಲೂಕು ಕಚೇರಿ ಮತ್ತು ಬೀರೂರಿನ ನಾಡಕಚೇರಿಯ ದ್ವಿತೀಯ ದರ್ಜೆ ಸಹಾಯಕರು, ವಿಷಯ ನಿರೀಕ್ಷಕರಿಗೆ ನೋಟಿಸ್ ನೀಡಿ ಕಡತಗಳ ಬಗ್ಗೆ ತಹಶೀಲ್ದಾರ್ ಮಾಹಿತಿ ಕೇಳಿದ್ದಾರೆ. ವರದಿಯಲ್ಲಿರುವ ಅವರ ಸಮಜಾಯಿಷಿ ಪತ್ರಗಳ ಪ್ರಕಾರ, ನಾಪತ್ತೆಯಾಗಿರುವ 1,156 ಕಡತಗಳ ಬಗ್ಗೆ ಯಾರಿಗೂ ಮಾಹಿತಿ ಇಲ್ಲ.

‘ಸರ್ಕಾರಕ್ಕೆ ನಷ್ಟ ಉಂಟು ಮಾಡಿರುವ ಶಿರಸ್ತೇದಾರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಹುದು’ ಎಂದು ವರದಿಯಲ್ಲಿ ಉಪವಿಭಾಗಾಧಿಕಾರಿ ತಿಳಿಸಿದ್ದಾರೆ. ಅಷ್ಟೂ ಮಂಜೂರಾತಿ ಕಾನೂನು ಬಾಹಿರ ಆಗಿರುವುದರಿಂದ ಸರ್ಕಾರಕ್ಕೆ ತಿಂಗಳಿಗೆ ₹18 ಲಕ್ಷ, ವರ್ಷಕ್ಕೆ ₹2.16 ಕೋಟಿಯಷ್ಟು ನಷ್ಟವಾಗಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT