ಗುರುವಾರ , ಅಕ್ಟೋಬರ್ 22, 2020
22 °C
ಬಫರ್ ಝೋನ್: ಪ್ರತಿಭಟನಾ ಸಭೆಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ

21ರಂದು ಮುಖ್ಯಮಂತ್ರಿ ಬಳಿ ನಿಯೋಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನರಸಿಂಹರಾಜಪುರ: ‘ಬಫರ್ ಝೋನ್ ವ್ಯಾಪ್ತಿಯನ್ನು ಈಗಿರುವ ಸರಹದ್ದಿಗೆ ನಿರ್ಧರಿಸಲು ಸರ್ಕಾರಕ್ಕೆ ಅವಕಾಶವಿದ್ದು, ಇದನ್ನು ಕಾರ್ಯಗತಗೊಳಿಸಲು ಪ್ರಯತ್ನಿಸಲಾಗುವುದು’ ಎಂದು ಸಂಸದೆ ಶೋಭಾ ಕರಂದ್ಲಾಜೆ ಭರವಸೆ ನೀಡಿದರು.

ಇಲ್ಲಿನ ಮಲೆನಾಡು ರೈತ ಹಿತರಕ್ಷಣಾ ಸಮಿತಿ ಗುರುವಾರ ಕರೆ ನೀಡಿದ್ದ ಬಂದ್ ವೇಳೆ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.

‘ಕಸ್ತೂರಿರಂಗನ್ ವರದಿ, ಭದ್ರಾಹುಲಿ ಯೋಜನೆ ಈ ಭಾಗದ ಜನರಲ್ಲಿ ಆತಂಕವುಂಟು ಮಾಡಿರು ವುದು ಗಮನದಲ್ಲಿದೆ. ಪರಿಸರಕ್ಕೆ ಸಂಬಂಧಿಸಿದ ಹಲವು ವಿಚಾರಗಳು ಸುಪ್ರೀಂ ಕೋರ್ಟ್ ನಲ್ಲಿದ್ದು ಆಯಾ ಕಾಲಘಟ್ಟದಲ್ಲಿದ್ದ ಸರ್ಕಾರ ರಕ್ಷಣೆ ಮಾಡಲು ಹಲವು ಯೋಜನೆ ಜಾರಿಗೆ ತಂದಿದೆ. ಜನರಿಗೆ ಮಾರಕವಾಗುವ ಕಾಯ್ದೆಗಳ ಬಗ್ಗೆ ಸಂಸತ್ತಿನಲ್ಲಿ ಜನಪ್ರತಿನಿಧಿಗಳು ಧ್ವನಿ ಎತ್ತುತ್ತಿಲ್ಲ ಎಂದು ಕೆಲವರು ಆರೋಪಿಸುತ್ತಾರೆ. ಪರಿಸರಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಪ್ರಶ್ನಿಸಿದರೆ ಯೋಜನೆ ವ್ಯಾಪ್ತಿಗೆ ಒಳಪಡದ ಸಂಸದರು ಮಾತನಾ ಡುವುದರಿಂದ ಪರಿಸರ ರಕ್ಷಣೆಗೆ ಹೆಚ್ಚು ಪ್ರಾಧ್ಯಾನತೆ ನೀಡುವ ಸಾಧ್ಯತೆ ಇರುತ್ತದೆ. ಇದರ ಚರ್ಚೆಗಳು ಸುಪ್ರೀಂ ಕೋರ್ಟ್‌ನಲ್ಲೂ ಪ್ರಸ್ತಾಪಿಸುವ ಸಾಧ್ಯತೆ ಇರುವುದರಿಂದ ಜನರಿಗೆ ತೊಂದರೆಯಾಗಬಾರದೆಂದು ಧ್ವನಿ ಎತ್ತುತ್ತಿಲ್ಲ’ ಎಂದರು.

ಶಾಸಕ ಟಿ.ಡಿ.ರಾಜೇಗೌಡ ಮಾತ ನಾಡಿ, ‘ಹೊಸದಾಗಿ ಯಾವುದೇ ಕಾಯ್ದೆ ಜಾರಿಯಾಗಬೇಕಾದರೂ ಸ್ಥಳೀಯ ಜನರ ಅಭಿಪ್ರಾಯ ಸಂಗ್ರಹಿಸಬೇಕೆಂಬ ನಿಯ ವಿದ್ದರೂ ಅಧಿಕಾರಿಗಳು ಈ ಬಗ್ಗೆ ಚರ್ಚಿಸದೆ, ಕಾಯ್ದೆ ರೂಪಿಸಿ ರೈತರ ಬದುಕು ಬೀದಿಗೆ ತರುವ ಕೆಲಸ ಮಾಡುತ್ತಿದ್ದಾರೆ. ರೈತರ ಸಹಕಾರವಿಲ್ಲದಿದ್ದರೆ ಭೂಮಿ, ಅರಣ್ಯ ಉಳಿಸಲು ಸಾಧ್ಯವಾಗುವುದಿಲ್ಲ. ರೈತರಿಗೆ ಮಾರಕ ವಾಗುವ ಕಾಯ್ದೆ ಜಾರಿ ಮಾಡಲು ಬಿಡುವುದಿಲ್ಲ. ಒಂದು ವೇಳೆ ಇದು ಸಾಧ್ಯವಾಗದಿದ್ದರೆ ಅಧಿಕಾರ ತ್ಯಾಗಕ್ಕೂ ಸಿದ್ಧ. ರೈತರೊಂದಿಗೆ ಸೇರಿ ಹೋರಾಟ ಮಾಡಲಾಗುವುದು’ ಎಂದರು.

ಮಾಜಿ ಶಾಸಕ ಡಿ.ಎನ್.ಜೀವರಾಜ್ ಮಾತನಾಡಿ, ‘ಪರಿಸರ ಸೂಕ್ಷ್ಮವಲಯದ ವ್ಯಾಪ್ತಿ ಭದ್ರಾ ನದಿಯ ದಂಡೆಯು ಗಡಿ ನಿಗದಿಯಾಗಬೇಕು, ಅರಣ್ಯ ವ್ಯವಸ್ಥಾಪನಾ ಅಧಿಕಾರಿ ಪ್ರತಿ ತಾಲ್ಲೂಕು, ಗ್ರಾಮಕ್ಕೆ ಬಂದು ರೈತರಿಂದ ಆಕ್ಷೇಪಣಾ ಅರ್ಜಿ ಸ್ವೀಕರಿಸಬೇಕು. ರೈತ ಹಿತರಕ್ಷಣಾ ಸಮಿತಿಗೆ ಪಕ್ಷ ಸಂಪೂರ್ಣ ಬೆಂಬಲ ನೀಡಲಿದೆ. ರೈತರ ಹಿತ ಕಾಪಾಡಲು ಮುಖ್ಯಮಂತ್ರಿ ಬಳಿ ಸರ್ವ ಪಕ್ಷ ನಿಯೋಗ ಕರೆದುಕೊಂಡು ಹೋಗಲಾಗುವುದು‘ ಎಂದರು.

21ರಂದು ಮುಖ್ಯಮಂತ್ರಿ ಬಳಿ ನಿಯೋಗ: ‘ಮಲೆನಾಡಿನ ಭಾಗದ ರೈತರಿಗೆ ಮಾರಕವಾಗಿರುವ ಯೋಜನೆ ಬಗ್ಗೆ ಚರ್ಚಿಸಲು ಇದೇ 21ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಅರಣ್ಯ ಸಚಿವ ಆನಂದ್ ಸಿಂಗ್ ಅವರು ಸಮಯ ನೀಡಿದ್ದು, ಅಂದು ಶಾಸಕರು, ಮಾಜಿ ಶಾಸಕರು ಹಾಗೂ ಸಮಿತಿಯ ಸದಸ್ಯರನ್ನೊಳಗೊಂಡಂತೆ 10 ಮಂದಿಯ ನಿಯೋಗವನ್ನು ಕರೆದುಕೊಂಡು ಹೋಗಲಾಗುವುದು’ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದರು.

‘ಈ ಸಭೆಯಲ್ಲಿ ಬಫರ್ ಝೋನ್ ವ್ಯಾಪ್ತಿಯನ್ನು ಮಹಾರಾಷ್ಟ್ರದಲ್ಲಿ 0 ದಿಂದ 100 ಮೀಟರ್ ಗೆ ನಿಗದಿಪಡಿಸಿದಂತೆ ಈ ಭಾಗದಲ್ಲೂ ನಿಗದಿಪಡಿಸಲು ಒತ್ತಾಯಿಸಲಾಗುವುದು. ಅರಣ್ಯ ವ್ಯವಸ್ಥಾಪನಾ ಅಧಿಕಾರಿಯನ್ನು ಈ ಸಭೆ ಆಹ್ವಾನಿಸಿ ಪ್ರತಿ ತಾಲ್ಲೂಕು, ಗ್ರಾಮಗಳಿಗೂ ಭೇಟಿ ನೀಡಿ ಮೀಸಲು ಅರಣ್ಯಕ್ಕೆ ಸಂಬಂಧಿಸಿದ ಆಕ್ಷೇಪಣೆ ಸ್ವೀಕರಿಸುವಂತೆ ಮುಖ್ಯಮಂತ್ರಿಯ ಮೂಲಕ ಸೂಚನೆ ಕೂಡಿಸಲಾಗುವುದು. ಯೋಜನೆಯ ಸಾಧಕ, ಬಾಧಕಗಳ ಬಗ್ಗೆ ಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಅವರ ಬಳಿಯೂ ಚರ್ಚಿಸಲಾಗುವುದು’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.