ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡೂರು: ಸಿಂಗಟಗೆರೆ ಕಲ್ಲೇಶ್ವರ ರಥೋತ್ಸವ ಸಂಪನ್ನ

Published 23 ಮೇ 2024, 14:10 IST
Last Updated 23 ಮೇ 2024, 14:10 IST
ಅಕ್ಷರ ಗಾತ್ರ

ಕಡೂರು: ಬಯಲು ಸೀಮೆಯ ಪ್ರಮುಖ ಜಾತ್ರೆ ಎನಿಸಿರುವ ತಾಲ್ಲೂಕಿನ ಸಿಂಗಟಗೆರೆ ಕಲ್ಲೇಶ್ವರ ಸ್ವಾಮಿ ರಥೋತ್ಸವ ಗುರುವಾರ ಅಪಾರ ಸಂಖ್ಯೆಯ ಭಕ್ತರ ನಡುವೆ ಶ್ರದ್ಧಾಭಕ್ತಿಯಿಂದ ನಡೆಯಿತು.

ಬೆಳಿಗ್ಗೆ ಕಲ್ಲೇಶ್ವರ ಸ್ವಾಮಿಗೆ ಅಭಿಷೇಕ, ಪೂಜೆ, ಬಿಲ್ವಾರ್ಚನೆ, ವಿಶೇಷ ಅಲಂಕಾರ ನಡೆಯಿತು. ಪಾರ್ವತಿ ಸಮೇತ ಕಲ್ಲೇಶ್ವರ ಸ್ವಾಮಿಯ ಉತ್ಸವ ವಿಗ್ರಹವನ್ನು ಮೆರವಣಿಗೆಯಲ್ಲಿ ಕರೆತಂದು ಅಲಂಕೃತ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ರಥದ ಚಕ್ರಗಳಿಗೆ ಭಕ್ತರು ನೂರಾರು ತೆಂಗಿನ ಕಾಯಿ ಒಡೆದರು. ಪೂಜೆಯ ನಂತರ ಜನರು ಉತ್ಸಾಹದಿಂದ ರಥವನ್ನು ಎಳೆದರು.

ಸಿಂಗಟಗೆರೆಯ ಆಂಜನೇಯಸ್ವಾಮಿ, ಉಡುಸಲಮ್ಮ ದೇವರಿಗೆ ಮೂಗನಾಯಕನಕೋಟೆಯ ಪುರೋಹಿತ ನಾಗೇಶ ಶರ್ಮ ಮತ್ತು ಸೀತಾರಾಮಶರ್ಮ ತಂಡದಿಂದ ಸಾಂಪ್ರದಾಯಿಕ ಪೂಜೆ ನಡೆಯಿತು. ಶಾಸಕ ಕೆ.ಎಸ್.ಆನಂದ್ ತಾಲ್ಲೂಕು ಜನತೆಯ ಪರವಾಗಿ ರಥಕ್ಕೆ ಪೂಜೆ ಸಲ್ಲಿಸಿದರು. ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿ‌ಪ್ರಕಾಶ್, ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ರಥೋತ್ಸವದಲ್ಲಿ ಭಾಗವಹಿಸಿದ್ದರು.

ದೇವಸ್ಥಾನದ ವತಿಯಿಂದ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಗ್ರಾಮೀಣ ಭಾಗದ ರೈತರು ಪಾನಕದ ಬಂಡಿಗಳನ್ನು ರಥದ ಸುತ್ತ ಓಡಿಸಿ ಹರಕೆ ತೀರಿಸಿದರು.

ದೇವಸ್ಥಾನದ ಸಮಿತಿ ಅಧ್ಯಕ್ಷ ನಾಗರಾಜಪ್ಪ ಮಾತನಾಡಿ, ‘ಭಕ್ತರ ಸಹಕಾರದಿಂದ ₹10 ಕೋಟಿ ವೆಚ್ಚದಲ್ಲಿ ರಾಜಗೋಪುರ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ನಾಡಿನಲ್ಲೆಡೆ ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥಿಸಿ ಈ ವರ್ಷದ ರಥೋತ್ಸವ ನಡೆಸಲಾಗಿದೆ’ ಎಂದರು.

ಕಾರ್ಯದರ್ಶಿ ರಮೇಶ್, ಎನ್.ಮೂರ್ತಿ, ಶಿವಮೂರ್ತಿ, ದೇವರಾಜು, ಕಲ್ಲೇಶಪ್ಪ, ಕುಮಾರಪ್ಪ ಇದ್ದರು.

ಬುದ್ಧಪೂರ್ಣಿಮೆಯಂದು ರಥೋತ್ಸವ: ಪ್ರತಿ ವರ್ಷ ಬುದ್ಧಪೂರ್ಣಿಮೆಯಂದು ಕಲ್ಲೇಶ್ವರ ಸ್ವಾಮಿ ರಥೋತ್ಸವ ನಡೆಯುವುದು ವಾಡಿಕೆ. ಇಡೀ ರಥವನ್ನು ತೆಂಗಿನ‌ಕಾಯಿ ಎಳನೀರು ಬಾಳೆಗೊನೆ ಅಡಿಕೆ ಸಿಂಗಾರಗಳಿಂದ ಅಲಂಕರಿಸಲಾಗುತ್ತದೆ. ಸುತ್ತಲಿನ 7 ಹಳ್ಳಿಗಳ ಭಕ್ತರು ಮತ್ತು ಸಿಂಗಟಗೆರೆ ಗ್ರಾಮಸ್ಥರು ಸೇರಿ ನಡೆಸುವ ಈ ಜಾತ್ರಾ ಮಹೋತ್ಸವಕ್ಕೆ ಹೊರ ಜಿಲ್ಲೆ ರಾಜ್ಯಗಳಿಂದಲೂ ಭಕ್ತರು ಬರುತ್ತಾರೆ. ರಥೋತ್ಸವದ ಅಂಗವಾಗಿ ಸಿಂಗಟಗೆರೆಗೆ ಒಂದು ಕಿ.ಮೀ.ದೂರದಲ್ಲೇ ವಾಹನಗಳನ್ನು ತಡೆಯಲಾಗಿತ್ತು. ಪೊಲೀಸರು ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT