ಶುಕ್ರವಾರ, ಆಗಸ್ಟ್ 19, 2022
27 °C
ಗ್ರಾಮ ಪಂಚಾಯಿತಿ ಚುನಾವಣೆ: ಮತದಾರರ ಓಲೈಕೆ ಕಸರತ್ತು

ಪ್ರಚಾರಕ್ಕೆ ಸಾಮಾಜಿಕ ಮಾಧ್ಯಮ ಸಂಪರ್ಕ ಸೇತು

ಬಿ.ಜೆ.ಧನ್ಯಪ್ರಸಾದ್‌ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಕಾವು ಏರಿದೆ, ಮತದಾರರ ಓಲೈಕೆ ಕಸರತ್ತುಗಳು ಜೋರಾಗಿವೆ. ಪ್ರಚಾರಕ್ಕೆ ಸಾಮಾಜಿಕ ಮಾಧ್ಯಮಗಳು ಅಭ್ಯರ್ಥಿಗಳಿಗೆ ಸಂಪರ್ಕ ಸೇತುಗಳಾಗಿವೆ.

ಅಭ್ಯರ್ಥಿಗಳು, ಅವರ ಕುಟುಂಬದವರು, ಸಂಬಂಧಿಕರು, ಸ್ನೇಹಿತರು, ಅಭಿಮಾನಿಗಳು ‘ವಾಟ್ಸ್‌ ಅಪ್‌ ಗ್ರೂಪ್‌’, ‘ಟೆಲಿ ಗ್ರಾಂ’ ‘ಫೇಸ್‌ ಬುಕ್‌’ ಖಾತೆ ಮೊದಲಾದವುಗಳಲ್ಲಿ ಈಗ ‘ಕರಪತ್ರ’, ‘ವಿಡಿಯೋ ತುಣಕು’ ಮೊದಲಾದವನ್ನು ಹಾಕಿದ್ದಾರೆ. ‘ನಿಮ್ಮ ಅಮೂಲ್ಯ ಮತ ಈ ಗುರುತಿಗೆ ಹಾಕಿ, ಸೇವೆಗೆ ಅವಕಾಶ ಮಾಡಿಕೊಡಿ’ ಎಂಬ ಒಕ್ಕಣೆ ಅವುಗಳಲ್ಲಿವೆ.

ಮತದಾನಕ್ಕೆ ಇನ್ನು ಆರು ದಿನಗಳಷ್ಟೇ ಬಾಕಿ ಇದೆ. ಅಭ್ಯರ್ಥಿಗಳು ಕ್ಷೇತ್ರ ವ್ಯಾಪ್ತಿಯಲ್ಲಿ ಮನೆಗಳಿಗೆ ಹೋಗಿ ಮತಯಾಚಿಸುವುದರಲ್ಲಿ ತೊಡಗಿದ್ದಾರೆ. ಉದ್ಯೋಗ, ವ್ಯಾಪಾರ ಇತ್ಯಾದಿ ನಿಮಿತ್ತ ಪರ ಊರುಗಳಲ್ಲಿ ನೆಲೆಸಿರುವ ಕ್ಷೇತ್ರದ ಮತದಾರರನ್ನು ತಲುಪಲು ಈ ಸಾಮಾಜಿಕ ಮಾಧ್ಯಮಗಳು ಅವರಿಗೆ ‘ವೇದಿಕೆ’ಯಾಗಿವೆ.

ಮಾಹಿತಿ ತಂತ್ರಜ್ಞಾನ ಕ್ರಾಂತಿಯ ಈ ಯುಗದಲ್ಲಿ ಮೊಬೈಲ್‌ ಫೋನ್‌ ಇಲ್ಲದವರೇ ಕಡಿಮೆ. ‘ವಾಟ್ಸ್‌ ಅಪ್‌’, ‘ಟೆಲಿಗ್ರಾಂ’, ‘ಫೇಸ್‌ ಬುಕ್‌’ ಬಹುತೇಕರಿಗೆ ಗೊತ್ತು. ಜಗತ್ತಿನ ಯಾವುದೇ ಮೂಲೆಯಲ್ಲಿರುವವರನ್ನು ತಲುಪಲು ಸಾಮಾಜಿಕ ಮಾಧ್ಯಮಗಳು ಕೊಂಡಿಯಾಗಿವೆ.

‘ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಸ್ನೇಹಿತರು ಕರಪತ್ರವನ್ನು ‘ಫೇಸ್‌ ಬುಕ್‌’, ‘ವ್ಯಾಟ್ಸ್‌ ಅಪ್‌’ ಗುಂಪುಗಳಲ್ಲಿ ಶೇರ್‌ ಮಾಡಿದ್ದಾರೆ. ಗ್ರೂಪ್‌ವೊಂದರಲ್ಲಿ ಕರಪತ್ರ ನೋಡಿ ಪಕ್ಕದ ಜಿಲ್ಲೆ ಚಿತ್ರದುರ್ಗದ ಸ್ನೇಹಿತರೊಬ್ಬರು ಫೋನ್‌ ಮಾಡಿದ್ದರು. ಊರಿನಿಂದ ಹೊರಗಿರುವವರನ್ನು ತಲುಪಲು ಅನುಕೂಲವಾಗಿದೆ’ ಎಂದು ಸೊಕ್ಕೆ ಗ್ರಾಮ ಪಂಚಾಯಿತಿ ಅಭ್ಯರ್ಥಿ ನವೀನ ‘ಪ್ರಜಾವಾಣಿ’ಗೆ ತಿಳಿಸಿದರು.
‘ಅಯ್ಯೋ ವಾಟ್ಸ್ ಅಪ್‌ ಸ್ಟೇಟಸ್‌ಗಳೆಲ್ಲ ಕರಪತ್ರಗಳೇ ಇವೆ. ಗ್ರೂಪ್‌ ತುಂಬಾ ಅವುಗಳದ್ದೇ ದರ್ಬಾರು’ ಎಂದು ಮತದಾರ ಚಂದ್ರೇಗೌಡ ತಿಳಿಸಿದರು.

ನವ ಮಾಧ್ಯಮ ತಂತ್ರಜ್ಞಾನದ ಅರಿವಿಲ್ಲದ ಅಭ್ಯರ್ಥಿಗಳಿಗೆ ಅವುಗಳ ಬಳಕೆಗೆ ಮಕ್ಕಳು, ಕುಟಂಬದವರು ಊರುಗೋಲಾಗಿದ್ದಾರೆ. ಕೆಲ ಅಭ್ಯರ್ಥಿಗಳು ವಿಡಿಯೋ ತುಣಕು ಸಿದ್ಧಪಡಿಸಿ ಗ್ರೂಪ್‌ಗಳಲ್ಲಿ ಶೇರ್‌ ಮಾಡಿದ್ದಾರೆ. ಶತಾಯಗತಾಯ ಮತದಾರರ ಮನ ಗೆಲ್ಲುವ ತಂತ್ರಗಾರಿಕೆಯಲ್ಲಿ ನಿರತರಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.