ಗುರುವಾರ , ಜನವರಿ 20, 2022
15 °C
ಮೂಡಿಗೆರೆ ತಾಲ್ಲೂಕಿನ ತತ್ಕೊಳ–ಕುಂಡ್ರಾ ಭಾಗದ ಕಾಡಂಚು

ತೂಗು ಬೇಲಿ: ಕಾಡಾನೆ ಉಪಟಳಕ್ಕೆ ಕಡಿವಾಣ

ಬಿ.ಜೆ. ಧನ್ಯಪ್ರಸಾದ್‌ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ತತ್ಕೊಳ – ಕುಂಡ್ರಾ ಭಾಗದ ಕಾಡಂಚಿನಲ್ಲಿ ಸೌರ ತೂಗು ಬೇಲಿ (ಟ್ಯಾಂಟಕಲ್‌ ಸೋಲಾರ್‌ ಫೆನ್ಸಿಂಗ್‌) ಅಳವಡಿಸಲಾಗಿದ್ದು, ಈ ಪ್ರದೇಶದಲ್ಲಿ ಜಮೀನುಗಳಿಗೆ ಆನೆಗಳ ಉಪಟಳ ತಗ್ಗಿದೆ.

10 ಕಿಲೊ ಮೀಟರ್‌ ಬೇಲಿ ನಿರ್ಮಿಸಲಾಗಿದೆ. 6 ಮೀಟರ್‌ ಎತ್ತರ ಇದೆ. ಉದ್ದಕ್ಕೂ ತಂತಿಬಳ್ಳಿಗಳನ್ನು ಇಳಿಬಿಡಲಾಗಿದೆ. ಸೌರ ಬ್ಯಾಟರಿ ಅಳವಡಿಸಲಾಗಿದೆ. ಒಟ್ಟಾರೆ ₹ 35 ಲಕ್ಷ ವೆಚ್ಚವಾಗಿದೆ.

ಬೇಲಿ ಅಳವಡಿಸಿರುವುದು ಕಾಡಂಚಿನ ಜಮೀನುಗಳಲ್ಲಿ ಬೆಳೆ ರಕ್ಷಣೆಗೆ ಅನುಕೂಲವಾಗಿದೆ. ಕುಂಡ್ರಾದಿಂದ ಮುಂದುವರಿದು ಭಾರತಿಬೈಲು– ದೊಡ್ಡಹಳ್ಳದವರೆಗೆ (5 ಕಿ.ಮೀ) ಬೇಲಿ ವಿಸ್ತರಣೆಗೆ ಅನುದಾನಕ್ಕೆ ಕೋರಿಕೆ ಸಲ್ಲಿಸಲಾಗಿದೆ.

ಮೂಡಿಗೆರೆ ವಲಯದಲ್ಲಿ 2019–20ನೇ ಸಾಲಿನಲ್ಲಿ ಟೆಂಟಕಲ್‌ ಸೋಲಾರ್‌ ಬೇಲಿ ನಿರ್ಮಿಸಿರುವುದು ಉಪಯುಕ್ತವಾಗಿದೆ. ಕಡೂರು, ಚಿಕ್ಕಮಗಳೂರು ಗಡಿ ಭಾಗದಲ್ಲಿಯೂ ಇಂತಹ ಬೇಲಿಯನ್ನು ನಿರ್ಮಾಣ ಮಾಡುವುದರಿಂದ ಆನೆಗಳ ಹಾವಳಿ ತಡೆಯಬಹುದಾಗಿದೆ. ಈ ಕಾಮಗಾರಿಗೆ ₹ 41.4 ಲಕ್ಷ ಅನುದಾನ ಅಗತ್ಯ ಇದ್ದು ‘ವೈಲ್ಡ್‌ಲೈಫ್‌ ಹ್ಯಾಬಿಚಲ್‌ ಮ್ಯಾನೇಜ್‌ಮೆಂಟ್‌ ಅಂಡ್‌ ಮ್ಯಾನ್‌– ಅನಿಮಲ್‌ ಕಾನ್‌ಫ್ಲಿಕ್ಟ್‌ ಮೆಶರ್ಸ್‌–139– ಮೇಜರ್‌ ವರ್ಕ್ಸ್‌’ ಯೋಜನೆಯಡಿ ಹಂಚಿಕೆ ಮಾಡುವಂತೆ ಉಪವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯವರು ಚಿಕ್ಕಮಗಳೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿಗೆ ಕೋರಿಕೆ ಸಲ್ಲಿಸಿದ್ದಾರೆ.

‘ಆನೆಗಳ ಕಾಟ ವಿಪರೀತ ಇತ್ತು. ತೋಟಗಳಿಗೆ ನುಗ್ಗಿ ಬೆಳೆಗಳನ್ನು ಹಾಳುಗೆಡವುತ್ತಿದ್ದವು. ಅವುಗಳನ್ನು ಓಡಿಸಲು ಹರಸಾಹಸಪಡಬೇಕಿತ್ತು. ಸಾಮಾನ್ಯ ಸೋಲಾರ್‌ ಬೇಲಿಗೆ ಬಗ್ಗುತ್ತಿರಲಿಲ್ಲ. ತೂಗು ಸೋಲಾರ್‌ ಬೇಲಿ ನಿರ್ಮಿಸಿದ ನಂತರ ಕಳೆದ ವರ್ಷ ಮೇನಿಂದ ಈವರೆಗೆ ಒಂದು ಆನೆಯೂ ತೋಟಕ್ಕೆ ನುಗ್ಗಿಲ್ಲ. ಕಾಡಾನೆ ಭೀತಿ ದೂರವಾಗಿದೆ’ ಎಂದು ಮೂಡಿಗೆರೆ ತಾಲ್ಲೂಕಿನ ಬಿದರಹಳ್ಳಿಯ ಬೆಳೆಗಾರ ಬಿ.ಎಸ್‌.ಜೈರಾಂ ಸಂತಸ ವ್ಯಕ್ತಪಡಿಸಿದರು.

‘ಬೇಲಿ ನಿರ್ವಹಣೆ ಹೊಣೆ; ಸ್ಥಳೀಯರಿಗೆ ವಹಿಸಲು ನಿರ್ಧಾರ’

‘ತೂಗು ಬೇಲಿ ವ್ಯವಸ್ಥೆ ಪರಿಣಾಮಕಾರಿಯಾಗಿದೆ. ತತ್ಕೊಳ–ಕುಂಡ್ರಾ ಭಾಗದ ಕಾಡಂಚಿನಲ್ಲಿ ಈ ಬೇಲಿ ನಿರ್ಮಿಸಿದ ನಂತರ ಬೆಳೆ ನಾಶದ ಒಂದೂ ಪ್ರಕರಣ ವರದಿಯಾಗಿಲ್ಲ. ಬೆಳೆ ಹಾನಿ ಪರಿಹಾರಕ್ಕೆ ಒಂದೂ ಅರ್ಜಿ ಸಲ್ಲಿಕೆಯಾಗಿಲ್ಲ ಎಂದು ಚಿಕ್ಕಮಗಳೂರು ವಿಭಾಗದ ಡಿಎಫ್‌ಒ ಎನ್‌.ಎಚ್‌.ಜಗನ್ನಾಥ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ತತ್ಕೊಳ – ಕುಂಡ್ರಾ ಭಾಗದ ಬೇಲಿ ನಿರ್ವಹಣೆ ಹೊಣೆಯನ್ನು ಮೂವರು ಅರಣ್ಯ ವೀಕ್ಷಕರಿಗೆ ವಹಿಸಲಾಗಿದೆ. ಮುಂದಿನ ದಿನಗಳಲ್ಲಿ ಸ್ಥಳೀಯರಿಗೆ ನಿರ್ವಹಣೆ ಹೊಣೆಯನ್ನು ವಹಿಸಲು ನಿರ್ಧರಿಸಲಾಗಿದೆ. ಈಗಾಗಲೇ ಈ ನಿಟ್ಟಿನಲ್ಲಿ ಚರ್ಚೆ ನಡೆಸಲಾಗಿದೆ’ ಎಂದು ಅವರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು