ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು: ನಗರದಲ್ಲಿ ನಿಲ್ಲದ ಬೀದಿನಾಯಿಗಳ ಹಾವಳಿ

ಕೆಲ ನಾಯಿಗಳಿಗೆ ಬಸ್‌ ನಿಲ್ದಾಣಗಳೇ ಆಸರೆ
ರಘು ಕೆ.ಜಿ.
Published 14 ಮಾರ್ಚ್ 2024, 6:29 IST
Last Updated 14 ಮಾರ್ಚ್ 2024, 6:29 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ನಗರದಲ್ಲಿ ಬೀದಿನಾಯಿಗಳ ಹಾವಳಿ ದಿನೇ ದಿನೇ ಹೆಚ್ಚಾಗಿದ್ದು, ನಿವಾಸಿಗಳು ಆತಂಕದಿಂದ ಬದುಕುವಂತಾಗಿದೆ. ನಗರದ ಹೌಸಿಂಗ್‌ ಬೋರ್ಡ್‌, ವಿಜಯಪುರ, ಮಾರ್ಕೆಟ್ ರಸ್ತೆ, ಗೌರಿಕಾಲುವೆ, ರಾಮನಹಳ್ಳಿ, ದಂಟರಮಕ್ಕಿ, ಶಂಕರಪುರ, ಮಲ್ಲಂದೂರು ರಸ್ತೆ, ಉಪ್ಪಳ್ಳಿ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಇವುಗಳದ್ದೇ ದರ್ಬಾರು. ನಾಯಿಗಳ ಸಂಖ್ಯೆ ಮಿತಿ ಮೀರಿದ್ದು ಇವುಗಳ ಕಾಟದಿಂದ ರಾತ್ರಿ ಸಮಯ ಮಕ್ಕಳು, ವಯೋವೃದ್ಧರು ರಸ್ತೆಗಳಲ್ಲಿ ತಿರುಗಾಡುವುದೇ ದುಸ್ತರವಾಗಿದೆ.

ಜನನಿಬಿಡ ಪ್ರದೇಶದ ಅಲ್ಲಲ್ಲಿ ಬೀದಿನಾಯಿಗಳ ಹಿಂಡುಗಳಿದ್ದು, ಮುಂಜಾನೆ ವಾಯು ವಿಹಾರಕ್ಕೆ ವೃದ್ಧರು, ಮಹಿಳೆಯರು ಆತಂಕದಲ್ಲೇ ತೆರಳುವಂತಾಗಿದೆ. ಕೆಲಸ ಮುಗಿಸಿಕೊಂಡು ರಾತ್ರಿ ವೇಳೆ ಮನೆಗೆ ತೆರಳುವವರೂ ಭಯದಲ್ಲೇ ಸಾಗಬೇಕಿದ್ದು, ಕೈಯಲ್ಲಿ ಕೋಲು ಹಿಡಿದು ಹೋಗುವ ಸ್ಥಿತಿ ನಿರ್ಮಾಣವಾಗಿದೆ.

ಈ ಹಿಂದೆ ಕೆಲ ಬಡಾವಣೆಯಲ್ಲಿ ಮಕ್ಕಳ ಮೇಲೆ ಬೀದಿ ನಾಯಿಗಳು ಎರಗಿ ಕಚ್ಚಿ ಗಾಯಗೊಳಿಸಿದ ಉದಾಹರಣೆಗಳೂ ಇವೆ. ತಾಲ್ಲೂಕು ಆರೋಗ್ಯ ಇಲಾಖೆ ಮಾಹಿತಿಯಂತೆ ಫೆಬ್ರವರಿಯಲ್ಲಿ ನಗರದಲ್ಲಿ 13 ನಾಯಿ ಕಡಿತ ಪ್ರಕರಣಗಳು ದಾಖಲಾಗಿವೆ.

ಬೀದಿನಾಯಿಗಳ ಸಂತಾನೋತ್ಪತ್ತಿ ನಿಯಂತ್ರಣಕ್ಕೆ ನಗರಸಭೆ ಪ್ರತಿ ವರ್ಷ ಲಕ್ಷಾಂತರ ಹಣ ಖರ್ಚು ಮಾಡುತ್ತಿದೆ. ಅಧಿಕಾರಿಗಳ ಮಾಹಿತಿ ಪ್ರಕಾರ, ನಗರದಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚು ಬೀದಿ ನಾಯಿಗಳಿವೆ. 2021–22ರಲ್ಲಿ ಒಟ್ಟು 2,216 ಬೀದಿ ನಾಯಿಗಳನ್ನು ಹಿಡಿದು ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಹಾಗೂ ರೇಬಿಸ್ ನಿರೋಧಕ ಚುಚ್ಚುಮದ್ದು ನೀಡಲು ₹28 ಲಕ್ಷ ಖರ್ಚು ಮಾಡಿದೆ. 2022–23ನೇ ಸಾಲಿನಲ್ಲಿ 2,161 ನಾಯಿಗಳಿಗೆ ₹20.39 ಲಕ್ಷ ವ್ಯಯಿಸಿದೆ. ಆದರೂ, ನಗರದಲ್ಲಿ ನಾಯಿಗಳ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ.

ಬೀದಿ ನಾಯಿಗಳ ನಿಯಂತ್ರಣಕ್ಕೆ ಪ್ರತಿ ವರ್ಷ ಟೆಂಡರ್ ಕರೆದು ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ. ನಗರದಲ್ಲಿರುವ ನಾಯಿಗಳ ಜತೆಗೆ ಆಹಾರ ಅರಸಿಕೊಂಡು ಬೇರೆ ಊರುಗಳಿಂದಲೂ ನಾಯಿಗಳು ಪಟ್ಟಣಕ್ಕೆ ಬಂದು ಸೇರುತ್ತಿವೆ. ಇವುಗಳಿಗೆ ರಸ್ತೆ ಬದಿಯಲ್ಲಿ ಆಹಾರ ನೀಡುವ ಪದ್ಧತಿಯ ಕುರಿತು ಜಾಗೃತಿ ಫಲಕ ಅಳವಡಿಸಿ ತಿಳಿವಳಿಕೆ ಮೂಡಿಸಲಾಗಿದೆ ಎಂದು ನಗರಸಭೆ ಪರಿಸರ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸಿ.ಎಸ್.ತೇಜಸ್ವಿನಿ ತಿಳಿಸಿದರು.

‘ಸುಪ್ರೀಂ ಕೋರ್ಟ್ ಆದೇಶದಂತೆ ಬೀದಿ ನಾಯಿಗಳನ್ನು ಹಿಡಿದು ಸ್ಥಳಾಂತರ ಮಾಡಲು ಅವಕಾಶವಿಲ್ಲ. ಅಪಘಾತಗೊಂಡ, ಅನಾಥ ಬೀದಿ ನಾಯಿಗಳನ್ನು ನಮ್ಮ ಟ್ರಸ್ಟ್ ರಕ್ಷಣೆ ಮಾಡಿ ಚಿಕಿತ್ಸೆ ನೀಡುತ್ತಾ ಬಂದಿದೆ. ರಕ್ಷಣೆ ಮಾಡಿದ 87 ಬೀದಿ ನಾಯಿಗಳು ನಮ್ಮಲ್ಲಿವೆ. ನಗರದಲ್ಲಿ ನಾಯಿಗಳ ಸಂಖ್ಯೆ ನಿಯಂತ್ರಣಕ್ಕೆ ನಗರಸಭೆ ಕಡಿವಾಣ ಹಾಕಬೇಕು’ ಎಂದು ಅನಿಮಲ್ ಕೇರಿಂಗ್ ಟ್ರಸ್ಟ್‌ನ ಸ್ಥಾಪಕಿ ನಳಿನಾ ಡಿಸಾ ಸಲಹೆ ನೀಡುತ್ತಾರೆ.

ವಿಜಯಪುರ ಭಾಗದಲ್ಲಿ ನಾಯಿಗಳ ಕಾಟದಿಂದ ಮಕ್ಕಳನ್ನು ಶಾಲೆಗಳಿಗೆ ಕರೆತರುವುದೇ ದೊಡ್ಡ ತಲೆನೋವಾಗಿದೆ. ರಾತ್ರಿ ಸಮಯ ಅಂಗಡಿ ಅಥವಾ ಅಕ್ಕಪಕ್ಕದ ಮನೆಗಳಿಗೆ ಹೋಗಬೇಕಾದರೆ ಭಯದಿಂದಲೇ ಓಡಾಡಬೇಕಾದ ಸ್ಥಿತಿ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತ‍‍ಪಡಿಸುತ್ತಾರೆ.

ನಗರದಲ್ಲಿ ಗೋಶಾಲೆ ಮಾದರಿಯಲ್ಲಿ ಶ್ವಾನ ಶಾಲೆ ತೆರೆದು ಅಲ್ಲಿಯೇ ಆರೈಕೆ ಮಾಡಲು ಬಜೆಟ್‌ನಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಇದಕ್ಕಾಗಿ ಐದು ಎಕರೆ ಜಾಗದ ಅಗತ್ಯವಿದ್ದು ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿದೆ.

-ವರಸಿದ್ಧಿ ವೇಣುಗೋಪಾಲ್ ನಗರಸಭೆ ಅಧ್ಯಕ್ಷ

ಬಸ್‌ ನಿಲ್ದಾಣದಲ್ಲಿ ರಾತ್ರಿ ವೇಳೆ ಬೀದಿನಾಯಿಗಳಿಗೆ ನಿಯಂತ್ರಣ ಇಲ್ಲವಾಗಿದೆ. ಜನಸಂದಣಿ ಇದ್ದರೂ ಕೆಲವೊಮ್ಮೆ ಮಕ್ಕಳ ಮೇಲೆಯೇ ಎರಗಲು ಮುಂದಾಗುತ್ತದೆ. ಇಲ್ಲಿನ ಅಧಿಕಾರಿ ಸಿಬ್ಬಂದಿ ಕ್ರಮ ವಹಿಸಬೇಕು.

-ಉಮೇಶ್ ಪ್ರಯಾಣಿಕ

ಮಾಂಸದ ಅಂಗಡಿ ಮುಂದೆ ನಾಯಿಗಳ ಹಿಂಡು

ನಗರದ ಮಾರ್ಕೆಟ್‌ ರಸ್ತೆ ಮಲ್ಲಂದೂರು ರಸ್ತೆ ಕೆ.ಎಂ ರಸ್ತೆ ಸೇರಿದಂತೆ ನಗರದ ಹಲವು ಕಡೆಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಮಾಂಸದ ಅಂಗಡಿ ಮಳಿಗೆಗಳು ಇವೆ. ವಿಜಯಪುರದ ಫುಡ್‌ ಕೋರ್ಟ್ ಹೆರಿಗೆ ಆಸ್ಪ‍ತ್ರೆ ಎದುರಿನ ರಸ್ತೆ ಬೇಲೂರು ರಸ್ತೆ ಸಹಿತ ವಿವಿಧೆಡೆ ಬಿರಿಯಾನಿ ಕಬಾಬ್‌ ಮಾರುವ ತಳ್ಳುವ ಗಾಡಿಗಳೂ ಇವೆ. ಇಲ್ಲಿ ಉಳಿದ ಆಹಾರ ಮಾಂಸದ ತ್ಯಾಜ್ಯವನ್ನು ಎಸೆಯುವುದರಿಂದ ಆಹಾರ ಅರಸಿಕೊಂಡು ಬರುವ ಬೀದಿ ನಾಯಿಗಳ ಹಿಂಡು ಕೆಲವೊಮ್ಮೆ ಆಹಾರಕ್ಕಾಗಿ ಪೈಪೋಟಿ ನಡೆಸಿ ಬೀದಿಯಲ್ಲೇ ಕಾಳಗ ನಡೆಸುತ್ತವೆ. ಈ ವೇಳೆ ರಸ್ತೆಯಲ್ಲಿ ಸಂಚರಿಸುವವರು ಆತಂಕದಲ್ಲಿ ಸಾಗಬೇಕಾದ ಸ್ಥಿತಿ ಇದೆ ಎಂದು ಸ್ಥಳೀಯರು ಹೇಳುತ್ತಾರೆ.

ಬೀದಿ ನಾಯಿಗೆ ಬಸ್‌ ನಿಲ್ದಾಣಗಳೇ ಆಸರೆ

ಸರಿಯಾದ ಆಹಾರ ಸಿಗದೆ ಬೀದಿ–ಬೀದಿ ಸುತ್ತುವ ನಾಯಿಗಳಿಗೆ ಬಸ್‌ ನಿಲ್ದಾಣಗಳೇ ಆಸರೆಯಾಗಿವೆ. ಅಲ್ಲಿಗೆ ಬರುವ ಕೆಲ ಪ್ರಯಾಣಿಕರು ಸಾರ್ವಜನಿಕರು ಕೈಯಲ್ಲಿರುವ ಬಿಸ್ಕೆಟ್‌ ಬ್ರೆಡ್ ಮೊದಲಾದ ಆಹಾರ ನೀಡುತ್ತಾರೆ. ಇದರಿಂದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ರಾತ್ರಿ ಸಮಯ ಇವುಗಳ ಸಂಖ್ಯೆ ಅಧಿಕವಾಗಿದ್ದು ನಿಲ್ದಾಣದ ಆವರಣದಲ್ಲಿಯೇ ಇವುಗಳ ದರ್ಬಾರು ಹೆಚ್ಚಿದೆ. ಇದರಿಂದ ಪ್ರಯಾಣಿಕರು ಹಾಗೂ ಬಸ್‌ ಚಾಲಕರು ಕಿರಿಕಿರಿ ಅನುಭವಿಸುವಂತಾಗಿದೆ.

‘ಬೀದಿನಾಯಿಗಳ ನಿಯಂತ್ರಣಕ್ಕೆ ಸಂಬಂಧಪಟ್ಟವರು ಗಮನಹರಿಸಿ’

ಸಂಚಾರ ದಟ್ಟಣೆ ನಡುವೆ ನಗರದ ಪ್ರಮುಖ ರಸ್ತೆಗಳಲ್ಲಿ ಬೀದಿನಾಯಿಗಳು ಕೆಲವೊಮ್ಮೆ ವಾಹನಗಳಿಗೆ ಸಿಲುಕಿ ಅಪಘಾತಗಳಿಗೂ ಕಾರಣವಾಗುತ್ತಿವೆ. ಕೆಂಪನಹಳ್ಳಿ ಗೌರಿಕಾಲುವೆಯಲ್ಲಿ ಓಡಾಡುವುದೇ ದುಸ್ತರವಾಗಿದೆ. ನಗರ ವ್ಯಾಪ್ತಿಯಲ್ಲಿರುವ ಬೀದಿ ನಾಯಿಗಳ ನಿಯಂತ್ರಣಕ್ಕೆ ಸಂಬಂಧಪಟ್ಟ ಇಲಾಖೆ ಹಾಗೂ ಅಧಿಕಾರಿಗಳು ಹೆಚ್ಚಿನ ಗಮನಹರಿಸಬೇಕು. ಇದರಿಂದ ಅಪಘಾತಗಳ ಸಂಖ್ಯೆ ಕಡಿಮೆಯಾಗುತ್ತದೆ. ಜತೆಗೆ ಬಡಾವಣೆ ಜನರು ನೆಮ್ಮದಿಯಿಂದ ಇರಲು ಸಾಧ್ಯವಾಗಲಿದೆ ಎಂದು ಕನ್ನಡ ಸೇನೆ ನಗರ ಆಟೊ ಚಾಲಕರ ಸಂಘದ ಅಧ್ಯಕ್ಷ ಕೆ.ಎಂ.ಜಯಪ್ರಕಾಶ್ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT