ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಸಿಲ ಬೇಗೆಗೆ ಬಸವಳಿದ ಮಲೆನಾಡು

Published 10 ಮಾರ್ಚ್ 2024, 14:10 IST
Last Updated 10 ಮಾರ್ಚ್ 2024, 14:10 IST
ಅಕ್ಷರ ಗಾತ್ರ

ಮೂಡಿಗೆರೆ: ತಾಲ್ಲೂಕಿನಾದ್ಯಂತ ಬಿಸಿಲಿನ ಪ್ರಮಾಣ ದಿನೇದಿನ ಏರುತ್ತಿದ್ದು,  ಹಗಲಿನಲ್ಲಿ ಜನರು ಮನೆಯಿಂದ ಹೊರಗೆ ಬರಲು ಹಿಂದೇಟು ಹಾಕುವಂತಾಗಿದೆ.

ತಾಲ್ಲೂಕಿನಲ್ಲಿ ಸರಾಸರಿ 33 ಡಿಗ್ರಿ ಉಷ್ಣಾಂಶ ದಾಖಲಾಗುತ್ತಿದ್ದು, ಮನೆಯೊಳಗೂ ಉರಿ ಬಿಸಿಲಿನ ಶಾಖ ತಟ್ಟುತ್ತಿದೆ. ಫ್ಯಾನ್ ಬಳಸದೆ ಮನೆಯೊಳಗೆ ಕುಳಿತುಕೊಳ್ಳುವುದು ಅಸಾಧ್ಯ ಎಂಬಂತಾಗಿದೆ. ಮಧ್ಯರಾತ್ರಿಯವರೆಗೂ ಮನೆಯೊಳಗೆ ಶಾಖದ ವಾತಾವರಣ ಉಂಟಾಗುತ್ತಿದೆ.

ಬಿಸಿಲು ಹೆಚ್ಚಾಗಿರುವುದರಿಂದ ತಂಪು ಪಾನೀಯ, ಎಳನೀರು, ಕಬ್ಬಿನ ರಸ, ಕಲ್ಲಂಗಡಿ ಹಣ್ಣಿಗೆ ಬೇಡಿಕೆ ಹೆಚ್ಚಾಗಿದ್ದು, ಗಲ್ಲಿಗಳಲ್ಲಿಯೂ ಹಣ್ಣಿನ ಅಂಗಡಿಗಳು, ಜ್ಯೂಸ್ ಸೆಂಟರ್‌ಗಳು ತಲೆಎತ್ತಿವೆ. ಬಿಸಿಲು ಏರಿದಂತೆ ಹಣ್ಣಿನ ಬೆಲೆಯೂ ಏರತೊಡಗಿದೆ.

ತಾಲ್ಲೂಕಿನಲ್ಲಿ ಈಗಾಗಲೇ ಶುಂಠಿ ಬೆಳೆಯ ಕೃಷಿ ಚಟುವಟಿಕೆಗಳು ಪ್ರಾರಂಭವಾಗಿದ್ದು, ಬಿಸಿಲು ಹೆಚ್ಚಾಗಿರುವುದರಿಂದ ಗದ್ದೆಗಳಿಗೆ, ಶುಂಠಿ ಕೆಲಸಗಳಿಗೆ ಬರಲು ಕಾರ್ಮಿಕರು ಹಿಂದೇಟು ಹಾಕುತ್ತಿದ್ದಾರೆ. ಬೇಸಿಗೆಯಲ್ಲಿ ಬೆಳೆಯುವ ಮೆಣಸಿನ ತೋಟಗಳ ನಿರ್ವಹಣೆಗೂ ಕಾರ್ಮಿಕರು ಇಲ್ಲದಂತಾಗಿದೆ.

ಬಿಸಿಲಿನ‌ ಝಳಕ್ಕೆ ನದಿ, ಹಳ್ಳಗಳಲ್ಲಿ ನೀರು ಗಣನೀಯವಾಗಿ ಬತ್ತತೊಡಗಿದ್ದು,  ಜಲಮೂಲಗಳು ಒಣಗತೊಡಗಿವೆ. 

'ಬಹಳ ವರ್ಷಗಳ ಬಳಿಕ ಮಲೆನಾಡಿನಲ್ಲಿ ತೀವ್ರ ಬಿಸಿಲು ಕಾಣಿಸಿಕೊಳ್ಳುತ್ತಿದೆ. ಬಿಸಿಲಿನ ತಾಪಕ್ಕೆ ಸಿಲುಕಿ ನೀರಾಯಿಸಿದ ಕಾಫಿ ಗಿಡಗಳು ಸಹ ಒಣಗತೊಡಗಿವೆ. ಹತ್ತು - ಹದಿನೈದು ದಿನಗಳ ಒಳಗೆ ಮಳೆಯಾಗದಿದ್ದರೆ ಕಾಫಿ ತೋಟಗಳು ಸಂಪೂರ್ಣ ಒಣಗುವ ಸಾಧ್ಯತೆ ಇದೆ.  ಜಾನುವಾರುಗಳಿಗೂ ನೀರಿಲ್ಲದಂತಾಗಿದ್ದು, ಸ್ಥಳೀಯ ಆಡಳಿತ ತುರ್ತಾಗಿ‌ ಜಾನುವಾರುಗಳಿಗೆ ಗ್ರಾಮದೊಳಗೆ ಕುಡಿಯುವ ನೀರಿನ ವ್ಯವಸ್ಥೆ ಒದಗಿಸಬೇಕು. ಬೇಸಿಗೆಯಲ್ಲಿ ನೀರಿನ ಸಮಸ್ಯೆಯನ್ನು ಎದುರಿಸಲು ಪ್ರತಿ ಮನೆಯಲ್ಲೂ ಮಳೆ‌ ನೀರು ಕೊಯ್ಲು, ತ್ಯಾಜ್ಯದ ನೀರನ್ನು ಇಂಗಿಸುವ ಕೆಲಸಗಳನ್ನು ಕಡ್ಡಾಯವಾಗಿ ಮಾಡಬೇಕಿದೆ' ಎನ್ನುತ್ತಾರೆ ಯೋಗೇಶ್ ಮೂಡಿಗೆರೆ.

ಬಿಸಿಲಿನ ಪರಿಣಾಮದಿಂದ ಕುಡಿಯುವ ನೀರಿಗೂ ದಿನದಿಂದ ದಿನಕ್ಕೆ ಹಾಹಾಕಾರ ಹೆಚ್ಚಾಗತೊಡಗಿದ್ದು, ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರನ್ನು ಪೂರೈಕೆ ಮಾಡುವುದೇ ಸವಾಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT