ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರಸಿಂಹರಾಜಪುರ: ಎ.ಸಿ ಕಚೇರಿ ತೆರೆಯಲು ಹೆಚ್ಚಿದ ಕೂಗು

Published 18 ಫೆಬ್ರುವರಿ 2024, 5:13 IST
Last Updated 18 ಫೆಬ್ರುವರಿ 2024, 5:13 IST
ಅಕ್ಷರ ಗಾತ್ರ

ನರಸಿಂಹರಾಜಪುರ: ಸರ್ಕಾರಿ ಕಚೇರಿಗಳಿಗೆ ನೂರಾರು ಕಿಲೋ ಮೀಟರ್ ಕ್ರಮಿಸಿ ಸುಸ್ತಾಗಿರುವ ಮಲೆನಾಡು ಭಾಗದ ಜನ  ನರಸಿಂಹರಾಜಪುರದಲ್ಲಿಯೇ ಉಪವಿಭಾಗಾಧಿಕಾರಿ ಕಚೇರಿ ತೆರೆಯಬೇಕೆಂಬ ಕೂಗು ಮಲೆನಾಡಿನ ಜನರಲ್ಲಿ ಹೆಚ್ಚಾಗಿದೆ.

ಭದ್ರಾ ಅಣೆಕಟ್ಟು ನಿರ್ಮಾಣಕ್ಕೂ ಮುನ್ನ ಕಡೂರು ಜಿಲ್ಲಾ ಕೇಂದ್ರವಾಗಿತ್ತು. ಎಡೆಹಳ್ಳಿ ಎಂದು ಕರೆಯಲ್ಪಡುತ್ತಿದ್ದ ನರಸಿಂಹರಾಜಪುರ 1882ರವರೆಗೂ ಲಕ್ಕವಳ್ಳಿ ತಾಲ್ಲೂಕಿನ ಪ್ರಮುಖ ಕೇಂದ್ರವಾಗಿತ್ತು. 1897ರವರೆಗೂ ಎಡೆಹಳ್ಳಿ ಉಪ ತಾಲ್ಲೂಕಾಗಿತ್ತು. 1915ರಲ್ಲಿಯೇ ಅತಿ ಪ್ರಮುಖ ರೈಲ್ವೆ ಸಾರಿಗೆ ಸೌಲಭ್ಯ ಹೊಂದಿದ್ದ ತಾಲ್ಲೂಕು ಕೇಂದ್ರವಾಗಿತ್ತು. ಇಲ್ಲಿ ಸುಮಾರು 130 ವರ್ಷಗಳ ಹಿಂದೆಯೇ ಮುನ್ಸಿಫ್ ಕೋರ್ಟ್ ಸ್ಥಾಪಿತವಾಗಿತ್ತು. ಎನ್.ಆರ್.ಪುರ, ಕೊಪ್ಪ, ಶೃಂಗೇರಿ ತಾಲ್ಲೂಕು ಸೇರಿತ್ತು.

ಭದ್ರಾ ಅಣೆಕಟ್ಟು ನಿರ್ಮಾಣದಿಂದ ತಾಲ್ಲೂಕು ಕೇಂದ್ರ ಫಲವತ್ತಾದ ಜಮೀನಿನೊಂದಿಗೆ ಹತ್ತಿರದ ಸಂಪರ್ಕ ಮಾರ್ಗಗಳು ಹಾಗೂ ಹಲವು ಮೂಲ ಸೌಕರ್ಯಗಳಿಂದ ವಂಚಿತವಾಯಿತು. ಚಿಕ್ಕಮಗಳೂರು ಜಿಲ್ಲೆಯಾದ ನಂತರ ಪ್ರಮುಖ ತಾಲ್ಲೂಕು ಕೇಂದ್ರವಾಗಿರುವ ನರಸಿಂಹರಾಜಪುರದ ಜನರು ಉಪವಿಭಾಗಾಧಿಕಾರಿ ಕಚೇರಿಗೆ ನೂರಾರು ಕಿಲೋ ಮೀಟರ್ ಹೋಗಬೇಕಾದ ಸ್ಥಿತಿ ಇದೆ.

ಎನ್.ಆರ್.ಪುರ, ಕೊಪ್ಪ, ಶೃಂಗೇರಿಯ ಜನ ಜಿಲ್ಲಾ ಕೇಂದ್ರದ ಕಚೇರಿಗಳಿಗೆ ಭೇಟಿ ನೀಡಬೇಕೆಂದರೆ ಕನಿಷ್ಠ 100 ಕಿಲೋ ಮೀಟರ್ ಕ್ರಮಿಸಲೇಬೇಕು. ಮಲೆನಾಡಿನ ತಾಲ್ಲೂಕು ಕೇಂದ್ರಗಳಲ್ಲಿ ತಾಲ್ಲೂಕು ಕಚೇರಿ ಸೇರಿದಂತೆ ತಾಲ್ಲೂಕು ಮಟ್ಟದ ಕಚೇರಿಗಳು ಇವೆ. ಉಪವಿಭಾಗಾಧಿಕಾರಿಗಳ ಕಚೇರಿಗೂ ಜಿಲ್ಲಾ ಕೇಂದ್ರಕ್ಕೆ ಹೋಗಬೇಕಿದೆ. ಕೊಪ್ಪ, ಶೃಂಗೇರಿ ತಾಲ್ಲೂಕಿನ ಭಾಗದವರಿಗೆ ಉಪವಿಭಾಗಾಧಿಕಾರಿಗಳ ಕಚೇರಿ ಚಿಕ್ಕಮಗಳೂರಿನಲ್ಲಿದ್ದರೆ, ಎನ್.ಆರ್.ಪುರ ತಾಲ್ಲೂಕಿನ ವ್ಯಾಪ್ತಿಯವರಿಗೆ ತರೀಕೆರೆಯಲ್ಲಿ ಉಪವಿಭಾಗಾಧಿಕಾರಿಗಳ ಕಚೇರಿಯಿದೆ. ಕೊಪ್ಪ, ಶೃಂಗೇರಿ ಭಾಗದವರು ಉಪವಿಭಾಗಾಧಿಕಾರಿಗಳ ಕಚೇರಿಗೆ ಹೋಗಬೇಕಾದರೆ 100 ಕಿ.ಮೀ ದೂರವಿರುವ ಚಿಕ್ಕಮಗಳೂರಿಗೆ, ಎನ್.ಆರ್.ಪುರದವರು 68 ಕಿ.ಮೀ ದೂರವಿರುವ ತರೀಕೆರೆಗೆ, ಬಾಳೆಹೊನ್ನೂರು ಭಾಗದವರು ತರೀಕೆರೆಗೆ ಹೋಗಬೇಕಾದರೆ 104 ಕಿ.ಮೀ ಪ್ರಯಾಣ ಮಾಡಬೇಕಿದೆ.

ಎನ್.ಆರ್.ಪುರ ಭಾಗದವರು ತರೀಕೆರೆಯಲ್ಲಿ ಉಪವಿಭಾಗಾಧಿಕಾರಿ ಕಚೇರಿಗೆ ಹೋಗಲು ನೇರವಾದ ಬಸ್ ಸೌಲಭ್ಯವಿಲ್ಲ. ಶಿವಮೊಗ್ಗಕ್ಕೆ ಹೋಗಿ ಸುತ್ತು ಬಳಸಿ ಹೋಗುವ ಸ್ಥಿತಿಯಿದೆ. ಉಪವಿಭಾಗಾಧಿಕಾರಿ ಕಚೇರಿಯಲ್ಲಿ ನ್ಯಾಯಾಲಯದ ಪ್ರಕರಣಗಳಿದ್ದಾಗ ಈ ಭಾಗದ ಜನರಿಗೆ ಮಧ್ಯಾಹ್ನದ ನಂತರ ವಿಚಾರಣೆ ಇಟ್ಟುಕೊಳ್ಳುವುದರಿಂದ ಈ ಕೆಲಸ ಕಾರ್ಯಗಳನ್ನು ಮುಗಿಸಿ ಮನೆಗೆ ತೆರಳಲು ಹರಸಾಹಸ ಪಡಬೇಕಾಗಿದೆ. ಇದರಿಂದ ಜನರ ಸಮಯ, ಹಣ ಎಲ್ಲವೂ ವ್ಯರ್ಥವಾಗುತ್ತದೆ ಎಂದು ಮಲೆನಾಡಿನ ಭಾಗದ ಜನ ಬೇಸರ ವ್ಯಕ್ತಪಡಿಸುತ್ತಾರೆ.

ಮುಖ್ಯಮಂತ್ರಿಗೆ ಮನವಿ ಸಲ್ಲಿಸಲು ನಿರ್ಧಾರ

ಭದ್ರಾ ಅಣೆಕಟ್ಟನ್ನು ನಿರ್ಮಾಣ ಮಾಡುವ ಮುನ್ನ ಲಕ್ಕವಳ್ಳಿಗೆ ಕೇವಲ 18 ಕಿ.ಮೀ ದೂರ ಇತ್ತು. ತರೀಕೆರೆಯೂ ಹತ್ತಿರದ ಊರಾಗಿತ್ತು. ಅಣೆಕಟ್ಟೆ ನಿರ್ಮಾಣವಾದ ಬಳಿಕ ಎರಡು ಊರು ದೂರವಾಗಿವೆ. ಹಾಗಾಗಿ ತಾಲ್ಲೂಕು ಕೇಂದ್ರದಲ್ಲಿಯೇ ಉಪವಿಭಾಗಾಧಿಕಾರಿ ಕಚೇರಿ ತೆರೆದರೆ ಅನುಕೂಲವಾಗುತ್ತದೆ ಎನ್ನುತ್ತಾರೆ ತಾಲ್ಲೂಕು ಅಭಿವೃದ್ಧಿ ಮಂಡಳಿಯ ಮಾಜಿ ಸದಸ್ಯ ಎಚ್.ಎಸ್.ಕೃಷ್ಣಯ್ಯ. ಬಯಲು ಸೀಮೆ ಭಾಗದವರಿಗೆ ನೀರಾವರಿ ಸೌಲಭ್ಯ ಒದಗಿಸುವ ಸಲುವಾಗಿ ಹಲವು ಮೂಲ ಸೌಲಭ್ಯಗಳನ್ನು ಕಳೆದುಕೊಂಡಿರುವ ನರಸಿಂಹರಾಜಪುರ ತಾಲ್ಲೂಕಿನಲ್ಲಿಯೇ ಉಪವಿಭಾಗಾಧಿಕಾರಿ ಕಚೇರಿ ತೆರೆಯಬೇಕು. ಈ ಸಂಬಂಧ ಮುಖ್ಯಮಂತ್ರಿ ಅವರಿಗೆ‌ ಮನವಿ ಸಲ್ಲಿಸಲಾಗುವುದು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಶ್ರೀನಿವಾಸ್ ತಿಳಿಸಿದರು. ಹಲವು ಸೌಲಭ್ಯಗಳಿಂದ ವಂಚಿತವಾಗಿರುವ ನರಸಿಂಹರಾಜಪುರ ಭಾಗದಲ್ಲಿಯೇ ಉಪವಿಭಾಗಾಧಿಕಾರಿಗಳ ಕಚೇರಿ ಸ್ಥಾಪಿಸಿದರೆ ಕೊಪ್ಪ ಶೃಂಗೇರಿ ಬಾಳೆಹೊನ್ನೂರು ಭಾಗದ ಜನರಿಗೂ ಅನುಕೂಲವಾಗುತ್ತದೆ ಎಂದು ಜಿಲ್ಲಾ ರೈತ ಸಂಘದ ಮಾಜಿ ಅಧ್ಯಕ್ಷ ವಿನಾಯಕ್ ಮಾಳೂರುದಿಣ್ಣೆ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT