ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿರು ಬಿಸಿಲಿಗೆ ಕಾರ್ಮಿಕರು ಹೈರಾಣು

ಬಾಲುಮಚ್ಚೇರಿ
Published 11 ಮಾರ್ಚ್ 2024, 6:36 IST
Last Updated 11 ಮಾರ್ಚ್ 2024, 6:36 IST
ಅಕ್ಷರ ಗಾತ್ರ

ಕಡೂರು: ದಿನೇ ದಿನೇ ಹೆಚ್ಚುತ್ತಿರುವ ತಾಪಮಾನ ಜನಜೀವನವನ್ನು ದುಸ್ತರಗೊಳಿಸುತ್ತಿದೆ. ಕಲ್ಲು, ಕೃಷಿ ಕೆಲಸಕ್ಕೆ ಹೋಗುವ ಕಾರ್ಮಿಕರು ಬಿಸಿಲಿನ ಬೇಗೆಗೆ ಹೈರಾಣಾಗಿದ್ದಾರೆ.

ಪ್ರತಿ ದಿನ ಕಲ್ಲು ಒಡೆದು ಜೀವಿಸುವ ಬಹಳಷ್ಟು ಕುಟುಂಬಗಳು ತಾಲ್ಲೂಕಿನ ಮಲ್ಲಿದೇವಿಹಳ್ಳಿ, ತುರುವನಹಳ್ಳಿ ಸೇರಿದಂತೆ ಕೆಲ ಗ್ರಾಮಗಳಲ್ಲಿದ್ದಾರೆ. ಮೂಲತಃ ತಮಿಳು ಭಾಷಿಕರಾದ ಈ ಕಾರ್ಮಿಕರು ಬೆಳಗ್ಗೆ 6 ಗಂಟೆಗೆ ಕಾಯಕ ಆರಂಭಿಸಿ ಮಧ್ಯಾಹ್ನ 2 ಗಂಟೆ ತನಕ ಕಲ್ಲು ಒಡೆಯುತ್ತಾರೆ. ಸೈಜು ಕಲ್ಲು, ಜಲ್ಲಿ, ಕಲ್ಲುಕಂಬ ಒಡೆಯುವವರು ತೆಂಗಿನ ಗರಿಗಳಿಂದ ಒಂದಿಷ್ಟು ನೆರಳು ಮಾಡಿಕೊಂಡರೂ ಚಪ್ಪಡಿ ಒಡೆಯುವವರು ಬಿರು ಬಿಸಿಲಲ್ಲೇ ಕೆಲಸ ಮಾಡಬೇಕು. ಚಪ್ಪಡಿ ತೆಗೆಯುವ ಮುನ್ನ ಅದಕ್ಕೆ ಉರುವಲು ಹಾಕಿ ಬೆಂಕಿ ಹಚ್ಚಿ ಕಾವು ಕೊಡುವ ಕಾರ್ಯವನ್ನೂ ಬಿಸಿಲಲ್ಲೇ  ಮಾಡಬೇಕು. ಮೇಲೆ ಬಿರುಬಿಸಿಲು- ಕೆಳಗೆ ಸುಡು ಬೆಂಕಿ. ಕೆಲಸ ಮುಗಿದು ಮನೆಗೆ ಬಂದರೆ ಸವೆದ ಉಳಿ ಮುಂತಾದವುಗಳನ್ನು ಕುಲುಮೆಗೆ ಹಾಕಿ ಹರಿತಗೊಳಿಸುವ ಕಾರ್ಯವನ್ನು ಮಾಡಿಕೊಳ್ಳುತ್ತಾರೆ.

‘ಜೀವನ ಸಾಗಬೇಕೆಂದರೆ ಬಿಸಿಲಿರಲಿ‌, ಮಳೆಯಿರಲಿ ಕಲ್ಲು ಒಡೆಯಲೇ ಬೇಕು’ ಎನ್ನುತ್ತಾರೆ  ರಾಜು‌ ಮಲ್ಲಿದೇವಿಹಳ್ಳಿ.

ಕೃಷಿ ಕಾರ್ಮಿಕರ ಸ್ಥಿತಿ  ಇದಕ್ಕಿಂತ ಭಿನ್ನವಲ್ಲ. ಬೆಳಿಗ್ಗೆ 9 ರಿಂದ ಮಧ್ಯಾಹ್ನ 2ರ ತನಕ ಕಳೆ ತೆಗೆಯುವ, ಟೊಮೊಟೊ ಹಣ್ಣು ಕೀಳುವ, ಬೆಂಡೆಕಾಯಿ ಕೊಯ್ಯುವ ಮುಂತಾದ ಕೆಲಸಕ್ಕೆ ಮಹಿಳೆಯರು ಹೋಗುತ್ತಾರೆ. ಅವರಿಗೆ ₹ 300 ಕೂಲಿ ನಿಗದಿಯಾಗಿರುತ್ತದೆ. ಬಿಸಿಲಿನಲ್ಲೇ ಲೆ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ.

ಮಳೆಗಾಲ ಆರಂಭಕ್ಕಿನ್ನೂ ಎರಡು ತಿಂಗಳು ಸಮಯವಿದೆ. ದಿನವೂ ಏರುತ್ತಿರುವ ಬಿರುಬಿಸಿಲು, ತಾಪಮಾನದ ನಡುವೆ ಜನರು ಹೈರಾಣಾಗಿರುವುದು ನಿತ್ಯದ ನೋಟವಾಗಿದೆ‌.

ಬೆಳಿಗ್ಗೆ ಐದು ಗಂಟೆಗೆ ಹೋಗಿ ಮಧ್ಯಾಹ್ನ 1 ಗಂಟೆ ತನಕ ಕಲ್ಲು ಒಡೆಯುವ ಕಾರ್ಯ ಮಾಡುತ್ತೇವೆ. ನಂತರ ಮನಗೆ ಬಂದು ಕಬ್ಬಿಣದ ಹತಾರುಗಳಿಗೆ ಕುಲುಮೆ ಕೆಲಸ ಮಾಡಿಕೊಳ್ಳುತ್ತೇವೆ
ದೊರೆಸ್ವಾಮಿ ತುರುವನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT