ಶನಿವಾರ, ಮೇ 28, 2022
21 °C
ರೈತರ ಪರಿಸ್ಥಿತಿ ಬಿಚ್ಚಿಟ್ಟ ಸುಸ್ಥಿರ ಕೃಷಿ ಸಲಹೆಗಾರ

ಉತ್ಪಾದನೆಯಲ್ಲಿ ಗೆದ್ದು ಮಾರುಕಟ್ಟೆಯಲ್ಲಿ ಸೋಲುವ ರೈತ: ಯೋಗೀಶ್ ಅಪ್ಪಾಜಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ದೇಶದ ರೈತರು ಉತ್ಪಾದನೆಯಲ್ಲಿ ಗೆದ್ದು ಮಾರುಕಟ್ಟೆಯಲ್ಲಿ ಸೋಲು ಕಾಣುತ್ತಿದ್ದಾರೆ. ಕೃಷಿ ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆ ಹಾಗೂ ಮಾರುಕಟ್ಟೆ ಕೌಶಲಗಳನ್ನು ಬೆಳೆಸಿಕೊಂಡಾಗ ಮಾತ್ರ ರೈತರ ಬದುಕು ಹಸನವಾಗಲಿದೆ ಎಂದು ಸುಸ್ಥಿರ ಕೃಷಿ ಮತ್ತು ಮಾರುಕಟ್ಟೆಯ ರಾಷ್ಟ್ರೀಯ ಸಲಹೆಗಾರ ಯೋಗೀಶ್ ಅಪ್ಪಾಜಯ್ಯ ಅಭಿಪ್ರಾಯಪಟ್ಟರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕೃಷಿ ಇಲಾಖೆ ಮಂಗಳವಾರ ಏರ್ಪಡಿಸಿದ್ದ ‘ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆ ಹಾಗೂ ಕೃಷಿ ಮೂಲಸೌಕರ್ಯ ನಿಧಿಯ ಅರಿವು ಕಾರ್ಯಾಗಾರ’ದಲ್ಲಿ ಅವರು ಮಾತನಾಡಿದರು.

‘ಕೃಷಿ ಕ್ಷೇತ್ರದಲ್ಲಿ ಇಷ್ಟಪಟ್ಟು ಕೆಲಸ ಮಾಡುವವರ ಸಂಖ್ಯೆ ಕಡಿಮೆ. ಅನಿವಾರ್ಯ ಕಾರಣಕ್ಕೆ ಕೃಷಿ ಮಾರುವವರ ಸಂಖ್ಯೆ ಹೆಚ್ಚಿದೆ. ಆಹಾರ, ವಾಣಿಜ್ಯ ಬೆಳೆಗಳ ಉತ್ಪಾದನೆಯಲ್ಲಿ ದೇಶದಲ್ಲಿ ಕ್ರಾಂತಿ ನಡೆದಿದೆ. ಉತ್ಪಾದನೆಯಲ್ಲಿ ಯಶಸ್ಸು ಸಿಕ್ಕಿದೆ. ಆದರೆ, ಮಾರುಕಟ್ಟೆ ಕೌಶಲ ಇಲ್ಲದ ಪರಿಣಾಮ ರೈತರ ಬದುಕು ಬದಲಾಗುತ್ತಿಲ್ಲ. ಮಾರುಕಟ್ಟೆ ವಿಚಾರದಲ್ಲಿ ಕ್ರಾಂತಿಕಾರಕ ಬದಲಾವಣೆಯ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.

‘ಬೀಜ, ರಸಗೊಬ್ಬರದಲ್ಲಿ ಸರ್ಕಾರ ಸಬ್ಸಿಡಿ ನೀಡಿದರೆ ರೈತರಿಗೆ ಪ್ರಯೋಜನವಾಗುವುದು ಕಡಿಮೆ. ಮಾರುಕಟ್ಟೆ ವ್ಯವಸ್ಥೆ ಸುಧಾರಣೆ ಮಾಡಿದರೆ ಮಾತ್ರ ರೈತರ ಜೀವನ ಸುಧಾರಣೆ ಕಾಣಲು ಸಾಧ್ಯವಿದೆ. ಉತ್ಪಾದಕರೇ ನೇರವಾಗಿ ಗ್ರಾಹಕರನ್ನು ತಲುಪಿದಾಗ ಉತ್ತಮ ಲಾಭ ಸಿಗುತ್ತದೆ. ನೇರ ಮಾರಾಟ ಎಂಬುದು ಮಾರುಕಟ್ಟೆಯ ಚಿನ್ನದ ಗಣಿ ಇದ್ದಂತೆ. ಇತ್ತ ರೈತರು ಗಮನ ಹರಿಸುವ ಅಗತ್ಯವಿದೆ’ ಎಂದು ಸಲಹೆ ನೀಡಿದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ. ರಮೇಶಕುಮಾರ್‌, ‘ಎಲ್ಲ ಜಿಲ್ಲೆಗಳು ಕೃಷಿ ಕ್ಷೇತ್ರದಲ್ಲಿ ಅಸ್ಮಿತೆಯನ್ನು ಉಳಿಸಿಕೊಂಡಿವೆ. ಚಿಕ್ಕಮಗಳೂರು ಎಂದಾಕ್ಷಣ ಕಾಫಿ, ತುಮಕೂರು ಜಿಲ್ಲೆಗೆ ತೆಂಗು ನೆನಪಾಗುತ್ತವೆ. ಚಿತ್ರದುರ್ಗ ಜಿಲ್ಲೆಯನ್ನು ಹೀಗೆ ಗುರಿತಿಸಲು ಸಾಧ್ಯವಾಗುತ್ತಿಲ್ಲ. ಅತಿ ಹೆಚ್ಚು ಶೇಂಗಾ ಬೆಳೆದರೂ ಜಿಲ್ಲೆಯ ಕೃಷಿ ಉತ್ಪನ್ನವೆಂದು ಹೆಮ್ಮೆಯಿಂದ ಹೇಳುವ ಸ್ಥಿತಿ ನಿರ್ಮಾಣವಾಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಜಿಲ್ಲೆಯಲ್ಲಿ 1.5 ಲಕ್ಷ ಹೆಕ್ಟೇರ್‌ ಕೃಷಿ ಭೂಮಿಯಲ್ಲಿ ಶೇಂಗಾ ಬೆಳೆಯಲಾಗುತ್ತಿದೆ. ‘ಪ್ರಧಾನಿ ಅವರ ಮಹಾತ್ವಕಾಂಕ್ಷೆಯ ಒಂದು ಜಿಲ್ಲೆ ಒಂದು ಉತ್ಪನ್ನ’ದಲ್ಲಿ ಚಿತ್ರದುರ್ಗಕ್ಕೆ ಶೇಂಗಾ ಲಭ್ಯವಾಗಿದೆ. ಜಿಲ್ಲೆಯ ಪ್ರಮುಖ ಬೆಳೆಯನ್ನು ಮೌಲ್ಯವರ್ಧನೆ ಮಾಡಿ ಮಾರುಕಟ್ಟೆ ಸೃಷ್ಟಿಸಿಕೊಳ್ಳುವ ಅವಕಾಶವಿದೆ. ಈ ಅವಕಾಶವನ್ನು ರೈತರು ಸದ್ಬಳಕೆ ಮಾಡಿಕೊಳ್ಳಬೇಕಿದೆ’ ಎಂದು ಮನವಿ ಮಾಡಿದರು.

‘ಶೇಂಗಾದಿಂದ ಉಪ ಉತ್ಪನ್ನಗಳನ್ನು ತಯಾರಿಸಲು ಸಾಧ್ಯವಿದೆ. ಇತ್ತೀಚೆಗೆ ಕೆಲವರು ನೈಸರ್ಗಿಕ ವಿಧಾನದಲ್ಲಿ ಶೇಂಗಾ ಎಣ್ಣೆ ತಯಾರಿಸಿ ಮಾರುಕಟ್ಟೆಯಲ್ಲಿ ಯಶಸ್ವಿ ಆಗುತ್ತಿದ್ದಾರೆ. ಇಂತಹ ಉದ್ಯಮಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಇದಕ್ಕೆ ಸಬ್ಸಿಡಿ ಕೂಡ ನೀಡಲಾಗುತ್ತಿದೆ. 80 ಜನರಿಗೆ ಪ್ರೋತ್ಸಾಹ ನೀಡಲು ಅವಕಾಶವಿದೆ. ಈಚೆಗೆ ಅರ್ಜಿ ಆಹ್ವಾನಿಸಲಾಗಿದ್ದು, 30 ಜನರು ಮಾತ್ರ ಆಸಕ್ತಿ ತೋರಿದ್ದಾರೆ. ಇದರಲ್ಲಿ ಮೂರ್ನಾಲ್ಕು ಅರ್ಜಿಗಳಿಗೆ ಮಾತ್ರ ಅನುಮೋದನೆ ಸಿಕ್ಕಿದೆ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು