ಆಡಳಿತಕ್ಕೆ ಒಂದು ವರ್ಷ: ಈಡೇರದ ಭರವಸೆ

ಹಿರಿಯೂರು: ಇಲ್ಲಿನ ನಗರಸಭೆಗೆ ಷಂಸುನ್ನಿಸಾ ಅಧ್ಯಕ್ಷತೆಯ ಚುನಾಯಿತ ಆಡಳಿತ ಬಂದು ನ. 4ಕ್ಕೆ ಒಂದು ವರ್ಷ. ಈ ಅವಧಿಯಲ್ಲಿ ಬೆಟ್ಟದಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದ ನಾಗರಿಕರಿಗೆ ಬೊಗಸೆಯಷ್ಟು ಮಾತ್ರ ತೃಪ್ತಿ ಸಿಕ್ಕಿದೆ.
2020 ನ. 4ರಂದು ಕೋವಿಡ್ ಇನ್ನೂ ತೀವ್ರಗತಿಯಲ್ಲಿದ್ದಾಗ ಅಧ್ಯಕ್ಷ–ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಅಧ್ಯಕ್ಷರಾಗಿ ಷಂಸುನ್ನಿಸಾ, ಉಪಾಧ್ಯಕ್ಷರಾಗಿ ಬಿ.ಎನ್. ಪ್ರಕಾಶ್ ಆಯ್ಕೆಯಾಗಿದ್ದರು. ನಗರದ ಸ್ವಚ್ಛತೆ, ಶುದ್ಧ ಕುಡಿಯುವ ನೀರು, ಬೀದಿ ನಾಯಿ, ಕೋತಿ, ಹಂದಿಗಳ ಕಾಟದಿಂದ ಮುಕ್ತಿ, ಉದ್ಯಾನಗಳ ಸುಂದರೀಕರಣ, ರಸ್ತೆ, ಚರಂಡಿ ಅಭಿವೃದ್ಧಿ, ವಾರದ ಸಂತೆಗೆ ಪ್ರತ್ಯೇಕ ಜಾಗ, ಕಚೇರಿಯಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ವ್ಯವಸ್ಥೆ ಒಳಗೊಂಡಂತೆ ಹಲವು ಬದಲಾವಣೆಗಳನ್ನು ಜನರು ನಿರೀಕ್ಷೆ ಮಾಡಿದ್ದರು.
ಹಿರಿಯೂರು ನಗರದಲ್ಲಿ ನೂರಕ್ಕೂ ಹೆಚ್ಚು ಉದ್ಯಾನಗಳಿದ್ದು, ಒಂದೆರಡರಲ್ಲಿ ಮಾತ್ರ ಹಿಂದೆ ಯಾವುದೋ ಕಾಲದಲ್ಲಿ ನೆಟ್ಟಿದ್ದ ಗಿಡಗಳು ಹೆಮ್ಮರದಂತೆ ಬೆಳೆದಿರುವುದು ಹೊರತುಪಡಿಸಿದರೆ, ಎದ್ದು ಕಾಣುವುದು ತಂತಿಬೇಲಿ ಮಾತ್ರ. ಗಿಡಗಳೇ ಇಲ್ಲದ ಜಾಗಕ್ಕೆ ತಂತಿ ಬೇಲಿಯ ಶೃಂಗಾರ ಏಕೆ ಎಂಬುದು ಜನರ ಪ್ರಶ್ನೆ.
‘ಮಹಾಂತೇಶ್ ಎಂಬುವವರು ಪೌರಾಯುಕ್ತರಾಗಿದ್ದಾಗ (2019) ಬೀದಿ ನಾಯಿಗಳಿಗೆ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ, ಪ್ಲಾಸ್ಟಿಕ್ ಮಾರಾಟ ಮಾಡುವ ಮಳಿಗೆಗಳ ಮೇಲೆ ದಾಳಿ, ಹಂದಿ ಮಾಲೀಕರಿಗೆ ನಗರದಿಂದ 5 ಕಿ.ಮೀ. ದೂರ ಹಂದಿಗಳನ್ನು ಸಾಗಿಸುವಂತೆ ತಾಕೀತು, ಪಾದಚಾರಿ ರಸ್ತೆಗಳಲ್ಲಿನ ಅಂಗಡಿ ತೆರವು ಮೊದಲಾದ ಕಾರ್ಯಕ್ರಮಗಳ ಮೂಲಕ ನಾಗರಿಕರ ಪ್ರಶಂಸೆಗೆ ಪಾತ್ರರಾಗಿದ್ದರು. ಒಂದು ವರ್ಷದ ಒಳಗೇ ಅವರು ವರ್ಗಾವಣೆಗೊಂಡಿದ್ದರಿಂದ ನಗರಸಭೆ ಆಡಳಿತಕ್ಕೆ ಗ್ರಹಣ ಬಡಿದಂತಾಗಿದೆ. ಅವರ ನಂತರ ಮೂರು ಜನ ಪೌರಾಯುಕ್ತರು ಬಂದಿದ್ದಾರೆ. ಆದರೂ ಅಭಿವೃದ್ಧಿ ಇಲ್ಲ’ ಎಂದು ಹುಳಿಯಾರು ರಸ್ತೆ ನಿವಾಸಿ ಪ್ರಭುಪ್ರಸಾದ್ ದೂರುತ್ತಾರೆ.
‘ತಂತಿಬೇಲಿ ಕಾಣದಂತೆ ಮುಳ್ಳು–ಗಿಡಗಂಟಿ ಬೆಳೆದಿದೆ. ಉದ್ಯಾನಗಳು ಕಳೆಗಟ್ಟಲು ಗಿಡ ನೆಟ್ಟು ಪೋಷಿಸಬೇಕು. ರಸ್ತೆಯಂಚಿನಲ್ಲೂ ಗಿಡ ಬೆಳೆಸಬೇಕು’ ಎಂದು ಒತ್ತಾಯಿಸುತ್ತಾರೆ ಅವಧಾನಿ ಬಡಾವಣೆಯ ಚಂದ್ರಮ್ಮ.
ಅಭಿವೃದ್ಧಿಗೆ ಅನುದಾನದ ಕೊರತೆ: ‘ಜನರು ನಿರೀಕ್ಷೆಗಳ ಅರಿವು ಇದೆ. ಕೋವಿಡ್ ಕಾರಣದಿಂದ ಕಂದಾಯ ವಸೂಲಾತಿ ಆಗಿಲ್ಲ. ಎರಡು ತಿಂಗಳಿಂದ ನಾಗರಿಕರು ಕಂದಾಯ ಪಾವತಿಸಲು ಬರುತ್ತಿದ್ದಾರೆ. ಸರ್ಕಾರದಿಂದ ಯಾವುದೇ ಅನುದಾನ ಬಂದಿಲ್ಲ. ಶೀಘ್ರ ಸಮಸ್ಯೆ ಬಗೆಹರಿಸಲಾಗುವುದು’ ಎನ್ನುತ್ತಾರೆ ಅಧ್ಯಕ್ಷೆ ಷಂಸುನ್ನಿಸಾ.
*
ಶಾಸಕರು ಹಾಗೂ ನಗರಸಭೆ ಆಡಳಿತದ ನಡುವಿನ ಹೊಂದಾಣಿಕೆ ಕೊರತೆಯಿಂದ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ರಾಜಕೀಯ, ವೈಯಕ್ತಿಕ ಪ್ರತಿಷ್ಠೆ ಬದಿಗಿಟ್ಟು ಜನಪರವಾಗಿ ಕೆಲಸ ಮಾಡಬೇಕಿದೆ.
-ಜಿ. ಧನಂಜಯಕುಮಾರ್, ಜಿ.ಪಂ. ಯೋಜನಾ ಸಮಿತಿ ಮಾಜಿ ಸದಸ್ಯ
*
ಒಂದು ವರ್ಷದ ಅವಧಿಯಲ್ಲಿ ನಗರದ ಸಮಸ್ಯೆಗಳ ಸಂಪೂರ್ಣ ಅರಿವಾಗಿದೆ. ಈಗೀಗ ಕಂದಾಯದಿಂದ ಆದಾಯ ಬರುತ್ತಿದೆ. ಸದಸ್ಯರ ಸಹಕಾರದೊಂದಿಗೆ ನಾಗರಿಕರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತೇನೆ.
-ಷಂಸುನ್ನಿಸಾ, ನಗರಸಭೆ ಅಧ್ಯಕ್ಷೆ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.