ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಕೀಲರಿಗೆ ಹೆಚ್ಚಿನ ಅಧ್ಯಯನ ಅಗತ್ಯ: ನ್ಯಾಯಮೂರ್ತಿ ಎಚ್.ಟಿ. ನರೇಂದ್ರ ಪ್ರಸಾದ್

ವಕೀಲರ ಭವನ ಉದ್ಘಾಟಿಸಿದ ಹೈಕೋರ್ಟ್ ನ್ಯಾಯಮೂರ್ತಿ ಎಚ್.ಟಿ. ನರೇಂದ್ರ ಪ್ರಸಾದ್ ಸಲಹೆ
Last Updated 25 ಜನವರಿ 2021, 7:16 IST
ಅಕ್ಷರ ಗಾತ್ರ

ಹೊಳಲ್ಕೆರೆ: ವಕೀಲರು ಹೆಚ್ಚು ಅಧ್ಯಯನದಲ್ಲಿ ತೊಡಗಬೇಕು ಎಂದು ಹೈಕೋರ್ಟ್ ಹಾಗೂ ಚಿತ್ರದುರ್ಗ ಜಿಲ್ಲೆಯ ಆಡಳಿತಾತ್ಮಕ ನ್ಯಾಯಮೂರ್ತಿ ಎಚ್.ಟಿ. ನರೇಂದ್ರ ಪ್ರಸಾದ್ ಸಲಹೆ ನೀಡಿದರು.

ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿರುವ ವಕೀಲರ ಭವನವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಈಗ ದಿನಕ್ಕೊಂದು ಹೊಸ ಕಾನೂನುಗಳು, ನಿಯಮಗಳು, ತೀರ್ಪುಗಳು ಬರುತ್ತವೆ. ಅವುಗಳ ಬಗ್ಗೆ ಆಳವಾದ ಜ್ಞಾನ ಇದ್ದರೆ ಮಾತ್ರ ವಾದ ಮಂಡನೆ ಸುಲಭವಾಗುತ್ತದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಹೆಚ್ಚು ಜ್ಞಾನ ಇದ್ದರೆ ಮಾತ್ರ ವೃತ್ತಿಯಲ್ಲಿ ಯಶಸ್ಸು ಗಳಿಸಲು ಸಾಧ್ಯ. ಇದಕ್ಕಾಗಿ ವಕೀಲರ ಭವನದಲ್ಲಿ ಗ್ರಂಥಾಲಯ ಆರಂಭಿಸಬೇಕು. ‘ಇ ಲೈಬ್ರರಿ’ ಆರಂಭಿಸಿದರೆ ಅನುಕೂಲ ಎಂದರು.

ಬಾರ್ ಅಸೋಸಿಯೇಷನ್‌ನವರು ಹಿರಿಯ ವಕೀಲರನ್ನು ಕರೆಸಿ ಸೆಮಿನಾರ್ ಮಾಡಿಸಬೇಕು. ಇಲ್ಲಿ ಸುಸಜ್ಜಿತ ವಕೀಲರ ಭವನ ನಿರ್ಮಿಸಿದ್ದು, ವಕೀಲರು ಕಕ್ಷಿದಾರರೊಂದಿಗೆ ಚರ್ಚಿಸಲು, ಸಿದ್ಧತೆ ಮಾಡಿಕೊಳ್ಳಲು ಅನುಕೂಲ ಆಗಿದೆ. ವಕೀಲರು ಮತ್ತು ನ್ಯಾಯಾಧೀಶರು ರಥದ ಎರಡು ಚಕ್ರಗಳಿದ್ದಂತೆ, ಒಂದು ಚಕ್ರ ಕೆಟ್ಟರೂ ರಥ ಮುಂದೆ ಹೋಗುವುದಿಲ್ಲ. ಚಿತ್ರದುರ್ಗ ಜಿಲ್ಲೆ ನ್ಯಾಯಾಂಗ ಕ್ಷೇತ್ರಕ್ಕೆ ಹೆಚ್ಚಿನ ಕೊಡುಗೆ ನೀಡಿದ್ದು, ಜಿಲ್ಲೆಯ ಹಲವರು ಹೈಕೋರ್ಟ್ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದಾರೆ ಎಂದು ಹೇಳಿದರು.

ಹೈಕೋರ್ಟ್ ನ್ಯಾಯಮೂರ್ತಿ ಎಸ್. ಸುನಿಲ್ ದತ್ ಯಾದವ್‌, ‘ವಕೀಲರು ನ್ಯಾಯಾಲಯಯದ ಅಧಿಕಾರಿಗಳಿದ್ದಂತೆ. ಕೇವಲ ಕೇಸು ಗೆಲ್ಲುವುದೇ ಮುಖ್ಯ ಗುರಿಯಾಗಬಾರದು. ಶೋಷಿತರಿಗೆ ನ್ಯಾಯ ಸಿಗುವಂತೆ ನೋಡಿಕೊಳ್ಳಬೇಕು. ಸಣ್ಣಪುಟ್ಟ ವಿಷಯಗಳೆಲ್ಲ ಕೋರ್ಟ್ ಮೆಟ್ಟಿಲೇರಬಾರದು. ಇದರಿಂದ ನ್ಯಾಯಾಲಯಗಳಲ್ಲಿ ಒತ್ತಡ ಹೆಚ್ಚಾಗಿ ನ್ಯಾಯದಾನ ವಿಳಂಬವಾಗು
ತ್ತದೆ. ವಿವಾಹ, ಕುಟುಂಬ, ಹೊಲ, ಮನೆಯ ವ್ಯಾಜ್ಯಗಳನ್ನು ನ್ಯಾಯಾಲಯದ ಹೊರಗೆ ಲೋಕ ಅದಾಲತ್, ರಾಜಿ ಸಂಧಾನದ ಮೂಲಕ ಬಗೆಹರಿಸಬಹುದು. ಅನಿವಾರ್ಯ ಸಂದರ್ಭದಲ್ಲಿ ಮಾತ್ರ ನ್ಯಾಯಾಲಯಕ್ಕೆ ಬರಬೇಕು’ ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಮನಗೋಳಿ ಪ್ರೇಮಾವತಿ, ‘ಉತ್ತಮ ತೀರ್ಪುಗಳು ಬರುವಲ್ಲಿ ವಕೀಲರ ಶ್ರಮ ಅಡಗಿರುತ್ತದೆ. ವಕೀಲ ವೃತ್ತಿ ಕೇವಲ ಜೀವನ ಸಾಗಿಸುವ ಉದ್ಯೋಗ ಆಗಬಾರದು. ನೊಂದವರಿಗೆ ನ್ಯಾಯ ಒದಗಿಸುವ ಜವಾಬ್ದಾರಿ ವಕೀಲರ ಮೇಲೆ ಇದೆ’ ಎಂದರು.

ವಕೀಲರ ಪರಿಷತ್ ರಾಜ್ಯ ಘಟಕದ ಅಧ್ಯಕ್ಷ ಆರ್.ರಾಜಣ್ಣ, ‘ಕೋವಿಡ್ ಬಿಕ್ಕಟ್ಟಿನಲ್ಲಿ ಕಷ್ಟದಲ್ಲಿರುವ ವಕೀಲರಿಗೆ ರಾಜ್ಯ ಸರ್ಕಾರದಿಂದ ₹ 5 ಕೋಟಿ, ವಕೀಲರ ಪರಿಷತ್‌ನಿಂದ ₹ 3 ಕೋಟಿ, ಬಾರ್ ಅಸೋಸಿಯೇಷನ್‌ನಿಂದ ₹ 1 ಕೋಟಿ ನೆರವು ಕೊಡಿಸಲಾಗಿದೆ. ವಕೀಲರು ಮರಣ ಹೊಂದಿದಾಗ ನೀಡುತ್ತಿದ್ದ ಪರಿಹಾರದ ಮೊತ್ತವನ್ನು ₹ 8 ಲಕ್ಷದಿಂದ ₹ 12 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಇದಕ್ಕಾಗಿ ಬಜೆಟ್‌ನಲ್ಲಿ ₹ 10 ಕೋಟಿ ಅನುದಾನ ಮೀಸಲಿಡುವಂತೆ ಸರ್ಕಾರಕ್ಕೆ ಕೋರಿಕೆ ಸಲ್ಲಿಸಲಾಗಿದೆ’ ಎಂದರು.

ಲೋಕೋಪಯೋಗಿ ಇಲಾಖೆ ಮುಖ್ಯ ಎಂಜಿನಿಯರ್ ಬಿ.ಟಿ. ಕಾಂತರಾಜು, ವಕೀಲರ ಸಂಘದ ಅಧ್ಯಕ್ಷ ಜಿ.ಇ. ರಂಗಸ್ವಾಮಿ, ಉಪಾಧ್ಯಕ್ಷ ಆರ್.ಜಗದೀಶ್, ಕಾರ್ಯದರ್ಶಿ ಜಿ.ಪಿ. ಪ್ರದೀಪ್ ಕುಮಾರ್, ನ್ಯಾಯಾಧೀಶರಾದ ಪ್ರೇಮಾ ವಸಂತ ರಾವ್ ಪವಾರ್, ರವಿಕುಮಾರ್, ನಾಗೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT