ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಅಪಾಯಕ್ಕೆ ಆಹ್ವಾನಿಸುವ ರಸ್ತೆ ಒಕ್ಕಣೆ

Last Updated 18 ಜನವರಿ 2021, 1:29 IST
ಅಕ್ಷರ ಗಾತ್ರ

ಅಪಾಯಕ್ಕೆ ಆಹ್ವಾನಿಸುವ ರಸ್ತೆ ಒಕ್ಕಣೆ
-ಜಿ.ಬಿ.ನಾಗರಾಜ್‌

ಚಿತ್ರದುರ್ಗ: ಸೂರ್ಯ ಪಥ ಬದಲಿಸುವಾಗ ಗ್ರಾಮೀಣ ಪ್ರದೇಶದಲ್ಲಿ ಸುಗ್ಗಿ ಸಂಭ್ರಮ ಮೇಳೈಸುತ್ತದೆ. ಒಕ್ಕಣೆ ಮಾಡಿದ ಧಾನ್ಯಕ್ಕೆ ಪೂಜೆ ಸಲ್ಲಿಸಿ, ಹಬ್ಬದೂಟ ಸವಿದು ಮನೆ ತುಂಬಿಸಿಕೊಳ್ಳುವ ಪರಿ ಸಾಂಸ್ಕೃತಿಕ ಹಿರಿಮೆಯ ಪ್ರತೀಕವಾಗಿ ನೆಲೆಯೂರಿದೆ. ಬೆಳೆಗಳ ಒಕ್ಕಣೆ ಕಣದಿಂದ ರಸ್ತೆಗೆ ಸ್ಥಳಾಂತರಗೊಂಡ ಬಳಿಕ ಇಂತಹ ಸಡಗರ ಮಾಯವಾಗಿದೆ.

ಬೆಳೆಯಿಂದ ಧಾನ್ಯವನ್ನು ಬೇರ್ಪಡಿಸುವ ಕಾರ್ಯವನ್ನು ಪೂಜ್ಯನೀಯವಾಗಿ ಕಾಣುತ್ತಿದ್ದ ರೈತರ ಮನಃಸ್ಥಿತಿಯೂ ಬದಲಾಗಿದೆ. ಆಹಾರ ಧಾನ್ಯಗಳನ್ನು ರಸ್ತೆಗೆ ಹಾಕಿ ಒಕ್ಕಣೆ ಮಾಡುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಇದೊಂದು ಸುಲಭ ಮಾರ್ಗವಾಗಿ ಕಾಣುತ್ತಿದ್ದರೂ ಹಲವು ಸಮಸ್ಯೆಗಳನ್ನು ಮುಂದಿಟ್ಟಿದೆ. ಇಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕೃಷಿ ಇಲಾಖೆಯ ಪ್ರಯತ್ನವೂ ವಿಫಲವಾಗಿದೆ.

ಜಿಲ್ಲೆಯಲ್ಲಿ ಸಾಮಾನ್ಯವಾಗಿ ಡಿಸೆಂಬರ್‌, ಜನವರಿ ಹಾಗೂ ಫೆಬ್ರುವರಿ ತಿಂಗಳಲ್ಲಿ ರೈತರು ಒಕ್ಕಣೆ ಮಾಡುವುದು ವಾಡಿಕೆ. ರಾಗಿ, ಜೋಳ, ಹುರುಳಿ, ತೊಗರಿ ಸೇರಿ ಸಿರಿಧಾನ್ಯಗಳ ಒಕ್ಕಲು ನಡೆಯುತ್ತದೆ. ಭೂಮಿಯನ್ನು ಹದ ಮಾಡಿ ಸಗಣಿ ಸಾರಿಸಿ ಕಣ ನಿರ್ಮಿಸಿ ಕಲ್ಲಿನ ದುಂಡಿಯಲ್ಲಿ ಒಕ್ಕಣೆ ಮಾಡುವುದು ರೈತರ ದೊಡ್ಡ ಕಾರ್ಯವೂ ಹೌದು. ರಾತ್ರಿ ಹಗಲು ನಡೆಯುತ್ತಿದ್ದ ಈ ಒಕ್ಕಣೆ ಹಲವು ರೀತಿಯ ಸಂಭ್ರಮಗಳಿಗೂ ಕಾರಣವಾಗುತ್ತಿತ್ತು. ಒಂದೆಡೆ ಸೇರಿದ ರೈತರು ಸಾಂಸ್ಕೃತಿಕ ಚಟುವಟಿಕೆಗೂ ಮುನ್ನುಡಿ ಬರೆಯುತ್ತಿದ್ದರು. ಕಣ ಸಂಸ್ಕೃತಿ ಮಾಯವಾದ ಬಳಿಕ ಒಕ್ಕಣೆಯ ವಿಧಾನವೇ ಬದಲಾಗಿದೆ.

ವಾಹನಗಳು ಹೆಚ್ಚಾದಂತೆ ಒಕ್ಕಣೆ ಕಣದಿಂದ ರಸ್ತೆಗೆ ಸ್ಥಳಾಂತರಗೊಂಡಿದೆ. ವಾರ, ತಿಂಗಳು ಕಾಲ ನಡೆಯುತ್ತಿದ್ದ ಒಕ್ಕಣೆ ದಿನಗಳಿಗೆ ಇಳಿದಿದೆ. ರಾಗಿ, ಹುರುಳಿ, ತೊಗರಿ ಸೇರಿ ಇತರ ಬೆಳೆಯನ್ನು ರಸ್ತೆಗೆ ಹರಡುವ ರೈತರು ವಾಹನ ಸಂಚರಿಸುವವರೆಗೂ ಕಾಯುತ್ತಾರೆ. ರಾತ್ರಿ ವೇಳೆ ಟ್ರ್ಯಾಕ್ಟರ್‌ ಓಡಿಸಿ ಧಾನ್ಯ ಬೇರ್ಪಡಿಸುವ ಕಾರ್ಯ ಕೈಗೊಳ್ಳುತ್ತಾರೆ. ವಾಹನಗಳ ಸುಗಮ ಸಂಚಾರಕ್ಕೆ ಇದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

ಬೆಳೆಯಿಂದ ಧಾನ್ಯವನ್ನು ಬೇರ್ಪಡಿಸುವುದಕ್ಕೆ ಯಂತ್ರಗಳು ಬಂದಿವೆಯಾದರೂ ಎಲ್ಲ ರೈತರ ಕೈಗೆಟಕುತ್ತಿಲ್ಲ. ಸಣ್ಣ ಹಿಡುವಳಿದಾರರೇ ಹೆಚ್ಚಾಗಿರುವ ಚಿತ್ರದುರ್ಗ ಜಿಲ್ಲೆಯಲ್ಲಿ ದುಬಾರಿ ಬೆಲೆ ತೆತ್ತು ಯಂತ್ರ ಬಳಕೆ ಮಾಡುವ ಸಾಮರ್ಥ್ಯ ಎಲ್ಲರಲ್ಲಿ ಇಲ್ಲ. ರಾಗಿ ಕಟಾವು, ಧಾನ್ಯ ಬೇರ್ಪಡಿಸುವುದು ಹಾಗೂ ಹುಲ್ಲನ್ನು ಪೆಂಡಿ ಕಟ್ಟಲು ಬಂದಿರುವ ಯಂತ್ರ ಇತ್ತೀಚೆಗೆ ರೈತಸ್ನೇಹಿಯಾಗಿದೆ. ಆದರೂ, ಅನೇಕರು ರಸ್ತೆಗೆ ಬೆಳೆಹಾಕಿ ಒಕ್ಕಣೆ ಮಾಡುವ ಸುಲಭ ಉಪಾಯ ಕಂಡುಕೊಂಡಿದ್ದಾರೆ.

ರಸ್ತೆಯಲ್ಲಿ ಹರಡಿದ ಬೆಳೆಯ ಮೇಲೆ ಸಂಚರಿಸುವ ವಾಹನಗಳಿಗೆ ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆ ಹೆಚ್ಚು. ರಾಗಿ, ಹುರುಳಿ ಬೆಳೆ ಎಂಜಿನ್‌ ಅಥವಾ ಸೈಲೆನ್ಸರ್‌ಗೆ ಸಿಲುಕಿ ಕಿಡಿ ಹೊತ್ತಿಸಿದ ನಿದರ್ಶನಗಳು ಸಾಕಷ್ಟಿವೆ. ವರ್ಷದ ಹಿಂದೆ ಮೊಳಕಾಲ್ಮುರು ತಾಲ್ಲೂಕಿನಲ್ಲಿ ಸಾರಿಗೆ ಸಂಸ್ಥೆಯ ಬಸ್‌ಗೆ ಬೆಂಕಿ ತಗುಲಿ ಆತಂಕ ಸೃಷ್ಟಿಯಾಗಿತ್ತು. ಪ್ರಯಾಣಿಕರನ್ನು ಬಸ್ಸಿನಿಂದ ಕೆಳಗೆ ಇಳಿಸಿದ ಚಾಲಕ, ದುರಂತವೊಂದನ್ನು ತಪ್ಪಿಸಿದರು. ಶ್ರೀರಾಂಪುರ ಠಾಣಾ ವ್ಯಾಪ್ತಿಯಲ್ಲಿ 2019ರಲ್ಲಿ ಚಲಿಸುತ್ತಿದ್ದ ಆಮ್ನಿಗೆ ರಾಗಿ ಹುಲ್ಲು ಸೇರಿ ಭಸ್ಮವಾಗಿತ್ತು. ಇಂತಹ ಹಲವು ಘಟನೆಗಳು ಜಿಲ್ಲೆಯಲ್ಲಿ ಆಗಾಗ ನಡೆಯುತ್ತಿವೆ.

ದ್ವಿಚಕ್ರ ವಾಹನಗಳಿಗೆ ಇದರಿಂದ ಅಪಾಯ ಹೆಚ್ಚು. ನುಣುಪಾದ ರಸ್ತೆಯಲ್ಲಿ ರಾಗಿ, ಸಿರಿಧಾನ್ಯದ ಮೇಲೆ ಸಾಗುವ ಬೈಕ್‌ ಚಾಲಕನ ನಿಯಂತ್ರಣ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಹೀಗೆ ಚಾಲನೆ ಮಾಡುತ್ತಿದ್ದ ದ್ವಿಚಕ್ರ ವಾಹನಗಳು ಉರುಳಿ ಬಿದ್ದು ಅನಾಹುತಗಳು ಸಂಭವಿಸುತ್ತಿವೆ. ಅಕ್ಟೋಬರ್‌, ನವೆಂಬರ್‌ ತಿಂಗಳಲ್ಲಿ ಮೆಕ್ಕೆಜೋಳದ ರಾಶಿಗಳು ರಸ್ತೆಯಲ್ಲಿ ಹೆಚ್ಚಾಗಿ ಕಾಣುತ್ತವೆ.

ಅನಾಹುತ ಅಥವಾ ಅಪಘಾತ ಸಂಭವಿಸಿದಾಗ ಪೊಲೀಸರು ಸ್ಥಳಕ್ಕೆ ಧಾವಿಸಿ ಬೆಳೆ ತೆರವುಗೊಳಿಸುತ್ತಾರೆ. ರಸ್ತೆಯಲ್ಲಿ ಒಕ್ಕಣೆ ಮಾಡದಂತೆ ತಾಕೀತು ಮಾಡುತ್ತಾರೆ. ಆದರೆ, ಶಿಸ್ತುಕ್ರಮ ಕೈಗೊಂಡ ನಿದರ್ಶನಗಳು ವಿರಳ. ರೈತರ ವಿರುದ್ಧ ಕಾನೂನು ಕ್ರಮ ಜರುಗಿಸಲು ಪೊಲೀಸರು ಕೂಡ ಹಿಂದೇಟು ಹಾಕುತ್ತಾರೆ. ಸಂಚಾರಕ್ಕೆ ಅಡ್ಡಿಯಾಗುವ, ಅಪಘಾತಕ್ಕೆ ಕಾರಣವಾಗುವ ರಸ್ತೆ ಒಕ್ಕಣೆ ನಡೆಸುವವರ ವಿರುದ್ಧ ಕ್ರಮ ಜರುಗಿಸಲು ನಿರ್ದಿಷ್ಟವಾದ ಕಾನೂನು ಇಲ್ಲ. ಸಣ್ಣ ಪ್ರಕರಣವೊಂದನ್ನು ದಾಖಲಿಸಿ ಎಚ್ಚರಿಕೆ ನೀಡಬಹುದು ಅಷ್ಟೇ.

ಅರಿವು ಮೂಡಿಸಿದ ಪೊಲೀಸರು
ವಾಹನ ಸಂಚರಿಸುವ ರಸ್ತೆಯಲ್ಲಿ ಧಾನ್ಯಗಳ ಒಕ್ಕಣೆ ಮಾಡದಂತೆ ಪೊಲೀಸರು ಜಾಗೃತಿ ಮೂಡಿಸುತ್ತಿದ್ದಾರೆ. ರೈತರ ಮನವೊಲಿಸಿ ತೆರವುಗೊಳಿಸುತ್ತಿದ್ದಾರೆ.

‘ಬೆಳೆಯನ್ನು ರಸ್ತೆಗೆ ಹಾಕಿ ಒಕ್ಕಣೆ ಮಾಡುವುದು ಸುಲಭದ ಮಾರ್ಗ. ವಾಹನಗಳ ಸುಗಮ ಸಂಚಾರಕ್ಕೆ ಇದು ಸವಾಲಾಗಿ ಪರಿಣಮಿಸಿದೆ. ರಸ್ತೆಗೆ ಬೆಳೆ ಹಾಕಿದ ತಕ್ಷಣ ಪೊಲೀಸ್‌ ನಿಯಂತ್ರಣ ಕೊಠಡಿಗೆ ಮಾಹಿತಿ ಬರುತ್ತದೆ. ಗಸ್ತು ವಾಹನ ತೆರಳಿ ರೈತರಿಗೆ ತಿಳಿವಳಿಕೆ ನೀಡುತ್ತಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ ತಿಳಿಸಿದರು.

ರಸ್ತೆಯಲ್ಲಿ ಮಾಡುವ ಒಕ್ಕಣೆಯಿಂದ ಪ್ರಸಕ್ತ ವರ್ಷ ಅನಾಹುತ ಸಂಭವಿಸಿದ ನಿದರ್ಶನ ವಿರಳ. ಆದರೆ, ದ್ವಿಚಕ್ರ ವಾಹನ ಸವಾರರು ನಿಯಂತ್ರಣ ತಪ್ಪಿ ಬಿದ್ದಿದ್ದಾರೆ. ವಾಹನ ಸವಾರರು ಹಾಗೂ ರೈತರ ನಡುವೆ ವಾಗ್ವಾದಗಳು ನಡೆದಿವೆ.

ಕಲುಷಿತಗೊಳ್ಳುವ ಧಾನ್ಯ
ಬೆಳೆಗಳನ್ನು ರಸ್ತೆಯಲ್ಲಿ ಒಕ್ಕಣೆ ಮಾಡುವುದರಿಂದ ಧಾನ್ಯಗಳು ಕಲುಷಿತಗೊಳ್ಳುತ್ತಿವೆ. ಸೇವಿಸುವ ಆಹಾರದ ಮೇಲೆಯೂ ಇದು ಪರಿಣಾಮ ಬೀರುತ್ತಿದೆ.

ಜಿಲ್ಲೆಯಲ್ಲಿ ರಾಗಿ, ಜೋಳ, ಹುರುಳಿ, ತೊಗರಿ ಸೇರಿ ಹಲವು ಬೆಳೆಗಳ ಒಕ್ಕಣೆಯನ್ನು ರೈತರು ರಸ್ತೆಯಲ್ಲೇ ಮಾಡುತ್ತಿದ್ದಾರೆ. ಬೆಳೆಯ ಮೇಲೆ ವಾಹನ ಸಂಚರಿಸುವುದರಿಂದ ಕಲುಷಿತಗೊಳ್ಳುವ ಪ್ರಮಾಣ ಹೆಚ್ಚು ಎಂಬುದು ಆಹಾರ ತಜ್ಞರ ವಿಶ್ಲೇಷಣೆ.

ಎಲ್ಲೆಂದರಲ್ಲಿ ಸಂಚರಿಸುವ ವಾಹನಗಳು ಬೆಳೆಗಳ ಮೇಲೆ ಹರಿಯುವುದರಿಂದ ಟೈರಿನಲ್ಲಿ ಇರುವ ಕಲ್ಮಶ ಬೆಳೆಗೆ ಸೇರುತ್ತದೆ. ಒಕ್ಕಣೆಯಾದ ಧಾನ್ಯಕ್ಕೂ ಸೇರುತ್ತದೆ. ಮಣ್ಣು, ಕಲ್ಲುಗಳು ಧಾನ್ಯದಲ್ಲಿ ಸೇರಿಕೊಳ್ಳುವ ಸಾಧ್ಯತೆ ಹೆಚ್ಚು. ಹೀಗೆ ಒಕ್ಕಣೆ ಮಾಡಿದ ಧಾನ್ಯ ಮಾರುಕಟ್ಟೆಗೆ ಬರುತ್ತಿದೆ.

ದಾಖಲೆಯಲ್ಲಷ್ಟೇ ಉಳಿದಿವೆ ಕೃಷಿ ಕಣ
-ಕೆ.ಎಸ್‌. ಪ್ರಣವಕುಮಾರ್‌

ಚಿತ್ರದುರ್ಗ: ಒಕ್ಕಣೆ ಮಾಡಲು ಹಿಂದಿನಂತೆ ವೈಯಕ್ತಿಕ ಸಹಾಯಧನದ ಯೋಜನೆ ಈಗಿಲ್ಲ. ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ (ಎನ್‌ಆರ್‌ಇಜಿ) ಯೋಜನೆಯಲ್ಲಿ ಸಾಮೂಹಿಕ ಒಕ್ಕಣೆಗೆ ಕಣ ನಿರ್ಮಿಸಿಕೊಳ್ಳಲು ಅವಕಾಶವಿದೆ. ದಾಖಲೆಯಲ್ಲಿ ನಿರ್ಮಾಣಗೊಳ್ಳುವ ಕಣಗಳು ಭೌತಿಕವಾಗಿ ಕಾಣುತ್ತಿಲ್ಲ. ಹೀಗಾಗಿ, ಒಕ್ಕಣೆಗೆ ರಸ್ತೆಗಳನ್ನೇ ಅವಲಂಬಿಸಿರುವ ರೈತರ ಸಂಖ್ಯೆ ಹೆಚ್ಚಿದೆ.

ಬೆಳೆಯ ಒಕ್ಕಣೆಗಾಗಿ ಕಣ ನಿರ್ಮಿಸಿಕೊಳ್ಳಲು ಕೃಷಿ ಇಲಾಖೆ ರೈತರಿಗೆ ₹25 ಸಾವಿರ ಸಹಾಯಧನ ನೀಡುತ್ತಿತ್ತು. ಈ ಯೋಜನೆ ಸ್ಥಗಿತಗೊಂಡು ಹಲವು ವರ್ಷಗಳಾಗಿವೆ. ರೈತರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಮಹಾತ್ಮ ಗಾಂಧೀಜಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಅವಕಾಶ ಕಲ್ಪಿಸಲಾಗಿದೆ. ಪ್ರತಿ ಕಣ ನಿರ್ಮಾಣಕ್ಕೆ ₹ 2 ಲಕ್ಷದಿಂದ ₹ 4 ಲಕ್ಷದವರೆಗೂ ಅನುದಾನ ನೀಡಲಾಗುತ್ತಿದೆ. ಇದು ಫಲಪ್ರದವಾದಂತೆ ಕಾಣುತ್ತಿಲ್ಲ.

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಾಮೂಹಿಕ ಕಣ ನಿರ್ಮಿಸಿಕೊಳ್ಳಲು ಸ್ವಂತ ಜಾಗವಿರಬೇಕು. ಸ್ವಸಹಾಯ ಸಂಘ ಸೂಚಿಸಿದ ಸ್ಥಳದಲ್ಲಿ ಕಣ ನಿರ್ಮಾಣ ಮಾಡಿಕೊಳ್ಳಬಹುದು. ಕೆಲವೆಡೆ ಗ್ರಾಮ ಪಂಚಾಯಿತಿಯ ಜಾಗದಲ್ಲೇ ₹ 4 ಲಕ್ಷ ವೆಚ್ಚದಲ್ಲಿ ಕಣಗಳು ನಿರ್ಮಾಣವಾಗಿವೆ. ಹೆಚ್ಚಿನ ರೈತರಿಗೆ ಇವು ಉಪಯುಕ್ತವಾಗುತ್ತಿಲ್ಲ.

ಜಿಲ್ಲೆಯ ಹಲವೆಡೆ ನಿರ್ಮಿಸಿರುವ ಕಣಗಳ ಪೈಕಿ ಬಹುತೇಕವು ಹಾಳಾಗಿವೆ. ದುರಸ್ತಿ ಮಾಡಿಸಲು ಗ್ರಾಮ ಪಂಚಾಯಿತಿಗಳು ಆಸಕ್ತಿ ತೋರುತ್ತಿಲ್ಲ. ಒಂದು ಗ್ರಾಮಕ್ಕೆ ನಾಲ್ಕೈದು ಕಣ ನಿರ್ಮಿಸಿದರೆ ಅನುಕೂಲ ಎಂಬುದು ಅನ್ನದಾತರ ಅಭಿಪ್ರಾಯ.

ಸಾವಿರಾರು ಜನರು ವಾಸಿಸುವ ಗ್ರಾಮಗಳ ಸಂಖ್ಯೆ ಜಿಲ್ಲೆಯಲ್ಲಿ ಹೆಚ್ಚಿದೆ. ಒಂದೇ ಕಣದಲ್ಲಿ ಎಲ್ಲರೂ ಒಕ್ಕಣೆ ಮಾಡಲು ಸಾಧ್ಯವಿಲ್ಲ. ಆಸಕ್ತಿಯುಳ್ಳ ಹತ್ತಾರು ರೈತರು ಒಂದೆಡೆ ಕಣ ನಿರ್ಮಿಸಿಕೊಳ್ಳಲು ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅವಕಾಶವಿದೆ. ಈ ಕುರಿತು ಚುನಾಯಿತ ಪ್ರತಿನಿಧಿಗಳು ಆಸಕ್ತಿ ತೋರುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೃಷಿ ಇಲಾಖೆಯಲ್ಲಿ ಇಲ್ಲ ಕಣದ ಮಾಹಿತಿ
ಜಿಲ್ಲೆಯಲ್ಲಿ ಎಷ್ಟು ಕಣಗಳಿವೆ, ಎಷ್ಟು ಕಣಗಳ ಅಗತ್ಯವಿದೆ ಎಂಬ ಮಾಹಿತಿ ಕೃಷಿ ಇಲಾಖೆಯಲ್ಲಿ ಇಲ್ಲ. ಉದ್ಯೋಗ ಖಾತರಿ ಯೋಜನೆಗೆ ಒಳಪಟ್ಟ ನಂತರ ಕೃಷಿ ಅಧಿಕಾರಿಗಳು ಹೆಚ್ಚು ತಲೆಕೆಡಿಸಿಕೊಳ್ಳುತ್ತಿಲ್ಲ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಮುತುವರ್ಜಿ ವಹಿಸಿ ಸಾಮೂಹಿಕ ಕಣ ನಿರ್ಮಾಣಕ್ಕೆ ಆಸಕ್ತಿ ತೋರುತ್ತಿಲ್ಲ.

‘ಕಣ ನಿರ್ಮಿಸಿಕೊಳ್ಳಲು ಸಹಾಯಧನ ನೀಡುವ ವೇಳೆ ರೈತರಿಂದ ಬೇಡಿಕೆ ಹೆಚ್ಚಿತ್ತು. ಕಣವನ್ನೇ ನಿರ್ಮಿಸಿಕೊಳ್ಳದೇ ಸಹಾಯಧನ ದುರುಪಯೋಗಪಡಿಸಿಕೊಂಡ ಬಳಿಕ ಅನುಮಾನ ಮೂಡಿತು. ರೈತರಿಗೆ ಉಪಯೋಗವಾಗುತ್ತಿದ್ದ ಈ ಯೋಜನೆಯನ್ನೇ ಸರ್ಕಾರ ಸ್ಥಗಿತಗೊಳಿಸಿತು’ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT