ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವ್ಯಕ್ತಿಯ ಕೊಲೆ: ಪ್ರಿಯಕರನ ಜೊತೆ ಸೇರಿ ಪತಿಯ ಹತ್ಯೆ ಆರೋಪ

Published 11 ಜುಲೈ 2024, 13:39 IST
Last Updated 11 ಜುಲೈ 2024, 13:39 IST
ಅಕ್ಷರ ಗಾತ್ರ

ಹಿರಿಯೂರು: ತಾಲ್ಲೂಕಿನ ಹುಲುಗಲ ಕುಂಟೆ ಗ್ರಾಮದ ರವಿಕುಮಾರ್ (35) ಅವರನ್ನು ಬುಧವಾರ ರಾತ್ರಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಗ್ರಾಮದಲ್ಲಿ ಹೊಸ ಮನೆ ಕಟ್ಟಿಸುತ್ತಿದ್ದ ರವಿಕುಮಾರ್ ಅದೇ ಮನೆಯ ಮಹಡಿಯ ಮೇಲೆ ಕೊಲೆಯಾಗಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಆರೋಪಿ ಸುನಿಲ್‌ನನ್ನು ಬಂಧಿಸಲಾಗಿದೆ.

ಪ್ರಿಯಕರನ ಜೊತೆ ಸೇರಿ ಪತ್ನಿಯೇ ರವಿಕುಮಾರ್‌ನನ್ನು ಹತ್ಯೆ ಮಾಡಿದ್ದಾರೆ ಎಂದು ರವಿಕುಮಾರ್‌ ತಾಯಿ ಪಾರ್ವತಮ್ಮ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

‘16 ವರ್ಷಗಳ ಹಿಂದೆ ಹೊಸದುರ್ಗ ತಾಲ್ಲೂಕಿನ ನೀರಗುಂದ ಗ್ರಾಮದ ರೇಖಾಳನ್ನು ರವಿ ಪ್ರೀತಿಸಿ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಬೆಂಗಳೂರಿನಲ್ಲಿ ವಾಸವಿದ್ದ ಇಬ್ಬರೂ ಗಾರ್ಮೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದರು. ಮಗನ ಸ್ನೇಹಿತ ಸುನಿಲ್ ಆಗಾಗ್ಗೆ ರವಿಯ ಮನೆಗೆ ಹೋಗುತ್ತಿದ್ದು, ರೇಖಾಳ ಪರಿಚಯ ಮಾಡಿಕೊಂಡು ಅನೈತಿಕ ಸಂಬಂಧ ಇಟ್ಟುಕೊಂಡಿದ್ದನು. ಈ ವಿಚಾರ ತಿಳಿದು ಸುನಿಲ್ ಜೊತೆ ರವಿ ಜಗಳ ಮಾಡಿದ್ದ. ರೇಖಾ, ಸುನಿಲ್ ಹಾಗೂ ರೇಖಾಳ ತಮ್ಮ ಪರುವ ಮೂವರೂ ಸೇರಿ ರವಿಗೆ ತೊಂದರೆ ಕೊಡುತ್ತಿದ್ದರು. ‘ತನ್ನ ಗಂಡ ತೊಂದರೆ ಕೊಡುತ್ತಾನೆ’ ಎಂದು ರೇಖಾ ಮೂರು ಬಾರಿ ಪೊಲೀಸರಿಗೆ ದೂರು ನೀಡಿದ್ದಳು. ಪೊಲೀಸರು ರವಿಗೆ ತಿಳಿವಳಿಕೆ ಹೇಳಿ ಕಳಿಸಿದ್ದರು’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

‘ಅವರು ಕೊಲೆ ಬೆದರಿಕೆ ಹಾಕುತ್ತಿದ್ದಾರೆ’ ಎಂದು ನನ್ನ ಬಳಿ ರವಿ ಹಲವು ಬಾರಿ ಹೇಳಿದ್ದ. ‘ಊರಿನಲ್ಲಿ ಜನ ಇದ್ದಾರೆ, ಏನೂ ಆಗುವುದಿಲ್ಲ’ ಎಂದು ಅವನಿಗೆ ಧೈರ್ಯ ಹೇಳಿದ್ದೆ. ಬುಧವಾರ ಜಮೀನೊಂದರ ವಿಚಾರ ಮಾತನಾಡಲು ರವಿ ಊರಿಗೆ ಬಂದಿದ್ದ. ರಾತ್ರಿ 9ಕ್ಕೆ ಹೊಸ ಮನೆಯ ಮಹಡಿಯಲ್ಲಿ ಮಲಗಲು ಹೋಗಿದ್ದ. ಗುರುವಾರ ಬೆಳಿಗ್ಗೆ ನೋಡಿದರೆ ಕೊಲೆಯಾಗಿ ಪತ್ತೆಯಾಗಿದ್ದಾನೆ. ಕೊಲೆಗೆ ಸುನಿಲ್, ರೇಖಾ ಹಾಗೂ ಪರುವ ಕಾರಣ’ ಎಂದು ಪಾರ್ವತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್ ಕಾಳಿಕೃಷ್ಣ ಭೇಟಿ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT