‘ಆರೋಗ್ಯ ಕವಚ’ದ ಆಂಬುಲೆನ್ಸ್‌ ಗುಜರಿಗೆ

ಶುಕ್ರವಾರ, ಜೂಲೈ 19, 2019
26 °C
ಕಾರ್ಯಕ್ಷಮತೆ ಕಳೆದುಕೊಂಡ ವಾಹನಗಳು

‘ಆರೋಗ್ಯ ಕವಚ’ದ ಆಂಬುಲೆನ್ಸ್‌ ಗುಜರಿಗೆ

Published:
Updated:
Prajavani

ಚಿತ್ರದುರ್ಗ: ಆರೋಗ್ಯ ಸೇವೆಯನ್ನು ತ್ವರಿತವಾಗಿ ಒದಗಿಸುವ ಉದ್ದೇಶದಿಂದ ‘ಆರೋಗ್ಯ ಕವಚ 108’ ಯೋಜನೆಯಡಿ ರಾಜ್ಯ ಸರ್ಕಾರ ನೀಡಿದ್ದ ಆಂಬುಲೆನ್ಸ್‌ಗಳಲ್ಲಿ ಬಹುತೇಕವು ಗುಜರಿ ಸೇರಿವೆ. ಇವುಗಳ ಬದಲಿಗೆ ಹೊಸ 13 ಆಂಬುಲೆನ್ಸ್‌ ರಸ್ತೆಗೆ ಇಳಿಯಲು ಸಜ್ಜಾಗಿವೆ.

ಬಳಕೆಗೆ ಯೋಗ್ಯವಿಲ್ಲದ 13 ಆಂಬುಲೆನ್ಸ್‌ಗಳನ್ನು ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ತಿಂಗಳಿಂದ ನಿಲುಗಡೆ ಮಾಡಲಾಗಿದೆ. ಪ್ರಾದೇಶಿಕ ಸಾರಿಗೆ ಅಧಿಕಾರಿಯ (ಆರ್‌ಟಿಒ) ಶಿಫಾರಸಿನ ಆಧಾರದ ಮೇರೆಗೆ ಈ ಆಂಬುಲೆನ್ಸ್‌ಗಳ ಬಳಕೆಯನ್ನು ನಿಲ್ಲಿಸಲಾಗಿದೆ. ಇವುಗಳನ್ನು ಹರಾಜು ಹಾಕಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಿದ್ಧತೆ ನಡೆಸಿದೆ.

‘ಆರೋಗ್ಯ ಕವಚ 108’ ಯೋಜನೆಯಡಿ 26 ಆಂಬುಲೆನ್ಸ್‌ಗಳು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದವು. ಹಲವು ವರ್ಷಗಳಿಂದ ಸಂಚರಿಸಿದ್ದರಿಂದ ಸುಸ್ಥಿತಿಯಲ್ಲಿ ಇರಲಿಲ್ಲ. ವಾಹನದ ಕಾರ್ಯಕ್ಷಮತೆ ಪರಿಶೀಲಿಸಿದ ಸಾರಿಗೆ ಇಲಾಖೆ ಅಧಿಕಾರಿಗಳು ಪರವಾನಗಿ ನವೀಕರಿಸಲು ನಿರಾಕರಿಸಿದ್ದಾರೆ. ಬಳಸದೇ ನಿಂತಿರುವ 13 ಆಂಬುಲೆನ್ಸ್‌ಗಳಲ್ಲಿ ಒಂದನ್ನು ‘ಮುಕ್ತಿ ವಾಹನ’ವಾಗಿ ಪರಿವರ್ತಿಸಲಾಗುತ್ತಿದೆ.

‘ಆಂಬುಲೆನ್ಸ್‌ ಸುಸ್ಥಿತಿಯಲ್ಲಿ ಇದ್ದರೆ ಮಾತ್ರ ಬಳಸಲು ಯೋಗ್ಯ. ಸಾರಿಗೆ ಇಲಾಖೆ ಅಧಿಕಾರಿಗಳು ಇವುಗಳನ್ನು ಪರಿಶೀಲಿಸಿ ವರದಿ ನೀಡುತ್ತಾರೆ. ಸಾರಿಗೆ ಇಲಾಖೆಯ ಸಲಹೆ ಮೇರೆಗೆ ಈ ಆಂಬುಲೆನ್ಸ್‌ ಸಂಚಾರ ಸ್ಥಗಿತಗೊಳಿಸಲಾಗಿದೆ. ಇವುಗಳ ಸ್ಥಾನದಲ್ಲಿ ಹೊಸ ಆಂಬುಲೆನ್ಸ್‌ಗೆ ಮಂಜೂರಾತಿ ಸಿಕ್ಕಿದ್ದು, ಶೀಘ್ರವೇ ಕಾರ್ಯನಿರ್ವಹಿಸಲಿವೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪಾಲಾಕ್ಷ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆರೋಗ್ಯ ಕವಚ’ದ 26 ಆಂಬುಲೆನ್ಸ್‌ಗಳ ಜತೆಗೆ ಸಮುದಾಯ ಆರೋಗ್ಯ ಕೇಂದ್ರ ಹಾಗೂ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ 34 ಆಂಬುಲೆನ್ಸ್‌ಗಳು ಸೇವೆ ಒದಗಿಸುತ್ತಿವೆ. ‘ಆರೋಗ್ಯ ರಕ್ಷಾ ಕವಚ’ದ ಆಂಬುಲೆನ್ಸ್‌ಗಳ ನಿಲುಗಡೆಗೆ ಜಿಲ್ಲೆಯಾದ್ಯಂತ 24 ಸ್ಥಳಗಳನ್ನು ಗುರುತಿಸಲಾಗಿದೆ. ಹೆಚ್ಚುವರಿಯಾಗಿ ಉಳಿದ ಎರಡು ವಾಹನಗಳು ಜಿಲ್ಲಾ ಆಸ್ಪತ್ರೆಯಲ್ಲಿ ಇರುತ್ತವೆ.

ಅಪಘಾತ, ಕರೆ, ದೂರ ಸೇರಿದಂತೆ ಹಲವು ಮಾನದಂಡಗಳ ಆಧಾರದ ಮೇರೆಗೆ ಆಂಬುಲೆನ್ಸ್‌ಗಳಿಗೆ ಸ್ಥಳ ಗುರುತಿಸಲಾಗಿದೆ. ತುರ್ತು ಸಂದರ್ಭದಲ್ಲಿ ಗರಿಷ್ಠ 20 ನಿಮಿಷದ ಒಳಗೆ ಸಮೀಪದ ಆಸ್ಪತ್ರೆಗೆ ಸಾಗಿಸಲು ಅನುಕೂಲವಾಗುವ ರೀತಿಯಲ್ಲಿ ಮಾರ್ಗಸೂಚಿ ನಿಗದಿಪಡಿಸಲಾಗಿದೆ. ಪ್ರಾಥಮಿಕ ಚಿಕಿತ್ಸೆ ಆದಷ್ಟು ಶೀಘ್ರ ಲಭ್ಯವಾಗುವ ರೀತಿಯಲ್ಲಿ ಆಂಬುಲೆನ್ಸ್‌ಗಳು ಕಾರ್ಯನಿರ್ವಹಿಸುತ್ತಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !