ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಮರೆತರೆ ವಿದ್ಯುದಾಘಾತ !

ವಾಲಿದ ಸ್ಥಿತಿಯ ಕಂಬಗಳೇ ಹೆಚ್ಚು l ಕೈಗೆ ಸಿಗುತ್ತಿವೆ ಪರಿವರ್ತಕಗಳು
Last Updated 4 ಏಪ್ರಿಲ್ 2022, 3:03 IST
ಅಕ್ಷರ ಗಾತ್ರ

ಚಿತ್ರದುರ್ಗ: ಮನೆ, ಕಾಂಪೌಂಡ್‌, ಕಟ್ಟಡದ ತಾರಸಿ, ನಡು ರಸ್ತೆ, ಶಾಲಾ ಮೈದಾನ ಹೀಗೆ ಕಣ್ಣು ಹಾಯಿಸಿದ ಕಡೆಯಲ್ಲೆಲ್ಲ ಅಪಾಯವನ್ನು ಆಹ್ವಾನಿಸುತ್ತಿವೆ ಚಿತ್ರದುರ್ಗದಲ್ಲಿನ ನೂರಾರು ವಿದ್ಯುತ್‌ ಕಂಬಗಳು ಹಾಗೂ ವಿದ್ಯುತ್‌ ಪರಿವರ್ತಕಗಳು.

ನಗರದ ಜನದಟ್ಟಣೆ ಪ್ರದೇಶಗಳಲ್ಲಿ ಇವುಗಳ ಸಂಖ್ಯೆ ಹೆಚ್ಚಾಗಿದ್ದು, ಯಾವ ಕ್ಷಣದಲ್ಲಿಯಾದರೂ ದುರ್ಘಟನೆಗಳು ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿವೆ. ನಗರದಲ್ಲಿರುವ ಅನೇಕ ವಿದ್ಯುತ್‌ ಕಂಬಗಳು ವಾಲಿರುವ ಸ್ಥಿತಿಯಲ್ಲಿವೆ. ಅಷ್ಟೇ ಅಲ್ಲದೆ ವಿದ್ಯುತ್‌ ಪರಿವರ್ತಕಗಳ ಸುತ್ತ ಗಿಡಗಂಟಿಗಳು ಬೆಳೆದಿವೆ. ವಿದ್ಯಾರ್ಥಿಗಳು, ಅಧಿಕಾರಿಗಳು, ಜನಪ್ರತಿನಿಧಿಗಳು ಹೆಚ್ಚು ಸಂಚಾರ ನಡೆಸುವ ಒನಕೆ ಓಬವ್ವ ಕ್ರೀಡಾಂಗಣದ ರಸ್ತೆಯಲ್ಲಿ ಮರಗಳ ನಡುವೆಯೇ ವಿದ್ಯುತ್‌ ತಂತಿಗಳು ಹಾದು ಹೋಗಿವೆ. ಕೆಲವೆಡೆ ತಂತಿಗಳು ಜೋತುಬಿದ್ದಿವೆ.

ಕ್ರೀಡಾಂಗಣದ ಮುಂಭಾಗದ ರಸ್ತೆ ನಡುವೆ ವಿದ್ಯುತ್‌ ಕಂಬವಿದ್ದು, ವಾಹನ ಸವಾರರು ತೀವ್ರ ಸಮಸ್ಯೆ ಅನುಭವಿಸುತ್ತಿದ್ದಾರೆ. ಗಾಯತ್ರಿ ಕಲ್ಯಾಣ ಮಂಟಪದ ಸಮೀಪದಲ್ಲೇ ಕಬ್ಬಿಣದ ವಿದ್ಯುತ್‌ ಕಂಬವೊಂದು ಬಹುತೇಕ ಶಿಥಿಲಾವಸ್ಥೆಗೆ ತಲುಪಿದ್ದು, ಅದರ ಮುಂಭಾಗದಲ್ಲೇ ಪೆಟ್ರೋಲ್‌ ಬಂಕ್‌ ಇರುವ ಕಾರಣ ಅಪಾಯದ ಮುನ್ಸೂಚನೆ ಹೆಚ್ಚಾಗಿದೆ.

‘ಕಾಮನಬಾವಿ ಬಡಾವಣೆ, ಜೋಗಿಮಟ್ಟಿ ರಸ್ತೆ ಸೇರಿ ಅನೇಕ ಕಡೆ ಕಂಬಗಳನ್ನು ಸೇರಿಸಿಕೊಂಡು ಮನೆಗಳ ಗೋಡೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಇನ್ನು ಕಾಂಪೌಂಡ್‌ಗೆ ಸೇರಿಕೊಂಡಿರುವ ಕಂಬಗಳು ನಗರದಲ್ಲಿ ಸಾಮಾನ್ಯವಾಗಿವೆ. ಕೆಳಗೋಟೆಯ ಸರಸ್ವತಿ ಕಾನೂನು ಕಾಲೇಜು, ಚಳ್ಳಕೆರೆ ರಸ್ತೆಯ ಪಾಲಿಟೆಕ್ನಿಕ್‌ ಕಾಲೇಜು ಹಾಗೂ ಸರ್ಕಾರಿ ವಿಜ್ಞಾನ ಕಾಲೇಜಿನ ಮೈದಾನದ ಮುಂಭಾಗದಲ್ಲಿ ಸಾಲು ಸಾಲು ಕಂಬಗಳು ವಾಲಿವೆ. ಕಂಬ ದುರಸ್ತಿ ಮಾಡುವಂತೆ ದೂರು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ’ ಎನ್ನುತ್ತಾರೆ ಸಾರ್ವಜನಿಕರು .

ನಗರ ವ್ಯಾಪ್ತಿಯ ಬಹುತೇಕ ವಿದ್ಯುತ್‌ ಕಂಬಗಳು ರಸ್ತೆಗೆ ಹೊಂದಿಕೊಂಡಿವೆ. ವಾಹನ ಸಂಚಾರಕ್ಕೆ ತೊಂದರೆ ಉಂಟುಮಾಡುತ್ತಿವೆ. ದ್ವಿಚಕ್ರ ವಾಹನ ಸವಾರರು ವಿದ್ಯುತ್‌ ಕಂಬಗಳಿಗೆ ಡಿಕ್ಕಿ ಹೊಡೆದು ಪ್ರಾಣ ಕಳೆದುಕೊಂಡ ನಿದರ್ಶನಗಳು ಸಾಕಷ್ಟಿವೆ. ಸಂಚಾರಕ್ಕೆ ತೊಡಕಾಗುವ ಕಂಬಗಳನ್ನು ಸ್ಥಳಾಂತರಗೊಳಿಸುವಲ್ಲಿಯೂ ‘ಬೆಸ್ಕಾಂ’ ಹಾಗೂ ನಗರಸಭೆ ನಿರ್ಲಕ್ಷ್ಯ ತೋರುತ್ತಿರುವುದು ಎದ್ದು ಕಾಣುತ್ತಿದೆ.

ವಿದ್ಯುತ್‌ ಪರಿವರ್ತಕಗಳನ್ನು ಮನೆ–ಶಾಲೆಗಳ ಮುಂದೆ, ರಸ್ತೆ ಪಕ್ಕದಲ್ಲಿಯೇ ಅಳವಡಿಸಿರುವುದರಿಂದ ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ವಾಸವಿ ಮಹಲ್‌ ರಸ್ತೆ, ಚಳ್ಳಕೆರೆ ಟೋಲ್‌ಗೇಟ್‌, ತ್ಯಾಗರಾಜ ಮಾರುಕಟ್ಟೆ, ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜು, ಸಂತೆ ಹೊಂಡದ ರಸ್ತೆ, ಆನೆ ಬಾಗಿಲು, ತುರುವನೂರು ರಸ್ತೆ, ಜೆಸಿಆರ್‌ ಬಡಾವಣೆ, ಪುಣೆ–ಬೆಂಗಳೂರು, ಆಕಾಶವಾಣಿ ಹಿಂಭಾಗ, ಕಾಮನ ಬಾವಿ ಬಡಾವಣೆ ಸೇರಿ ನಾನಾ ಕಡೆ ವಿದ್ಯುತ್‌ ಪರಿವರ್ತಕಗಳು ಅಪಾಯವನ್ನು ಆಹ್ವಾನಿಸುತ್ತಿವೆ.

ರಸ್ತೆಗೆ ಹೊಂದಿಕೊಂಡಿರುವ ಪರಿವರ್ತಕಗಳು ಹಣ್ಣು, ತರಕಾರಿ ವ್ಯಾಪಾರ, ದ್ವಿಚಕ್ರ ವಾಹನ ಪಾರ್ಕಿಂಗ್‌, ಪಾನಿಪೂರಿ ಗಾಡಿಗಳಿಗೆ ಆಸರೆಯಾಗಿವೆ. ಪರಿವರ್ತಕದ ನಿರ್ವಹಣೆಗೆ ಅಳವಡಿಸಿದ ಪೆಟ್ಟಿಗಳು ಸದಾ ಬಾಯಿ ತೆರೆದಿವೆ. ಪರಿವರ್ತಕಗಳ ಸುತ್ತ ತಂತಿ ಬೇಲಿ ಅಳವಡಿಸಿಲ್ಲ. ಸುರಕ್ಷತಾ ಕ್ರಮಗಳನ್ನೂ ಅನುಸರಿಸಿಲ್ಲ. ಕೆಲ ವಿದ್ಯುತ್‌ ಪರಿವರ್ತಕಗಳು ಬಾಗಿದ ವಿದ್ಯುತ್‌ ಕಂಬಗಳಲ್ಲಿ ನೇತಾಡುತ್ತಿವೆ. ಪೆಟ್ಟಿಗೆಯಿಂದ ಹೊರಗೆ ಚಾಚಿದ ತಂತಿಗಳು ಬಲಿಗಾಗಿ ಕಾಯುತ್ತಿವೆ.

ನಗರ ವ್ಯಾಪ್ತಿಯ ಹಲವೆಡೆ ವಿದ್ಯುತ್‌ ಅವಘಡಗಳು ಮರುಕಳಿಸುತ್ತಿವೆ. ತುರುವನೂರು ರಸ್ತೆಯ ಹೋಟೆಲ್ ಮುಂಭಾಗದಲ್ಲಿ ವಿದ್ಯುತ್‌ ಮಾರ್ಗದ ದುರಸ್ತಿಗೆ ಬಂದಿದ್ದ ‘ಬೆಸ್ಕಾಂ’ ಸಿಬ್ಬಂದಿಯೇ ಬಲಿಯಾದ ನೆನಪು ಜನಮಾನಸದಲ್ಲಿ ಹಾಗೇ ಉಳಿದಿದೆ. ಜಾನುವಾರು ಹುಲ್ಲು ಮೇಯುತ್ತ ವಿದ್ಯುತ್‌ ಪರಿವರ್ತಕದ ಬಳಿ ಹೋಗಿ ವಿದ್ಯುತ್‌ ಪ್ರವಹಿಸಿದ ತಂತಿ ತಗುಲಿ ಮೃತಪಟ್ಟ ಉದಾಹರಣೆಗಳು ಇವೆ.

ರಸ್ತೆಯಲ್ಲೇ ವಿದ್ಯುತ್ ಕಂಬ: ಅಪಾಯಕ್ಕೆ ಆಹ್ವಾನ

ಸಾಂತೇನಹಳ್ಳಿ ಸಂದೇಶ್‌ ಗೌಡ

ಹೊಳಲ್ಕೆರೆ: ಪಟ್ಟಣದ ಹಲವು ಕಡೆ ರಸ್ತೆಯಲ್ಲೇ ವಿದ್ಯುತ್ ಕಂಬಗಳಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿವೆ.

ಕೋಟೆ ಪ್ರದೇಶ, ಗಣಪತಿ ರಸ್ತೆ, ಕುಂಬಾರ ಬೀದಿ, ಮದಕರಿ ಸರ್ಕಲ್ ಭಾಗಗಳಲ್ಲಿ ರಸ್ತೆಗೆ ಹೊಂದಿಕೊಂಡಂತೆ ವಿದ್ಯುತ್ ಕಂಬಗಳಿದ್ದು, ಜನ ಆತಂಕದಿಂದ ಸಂಚರಿಸುವ ಪರಿಸ್ಥಿತಿ ಇದೆ.

ಪಟ್ಟಣದ ಮುಖ್ಯವೃತ್ತದ ಬಳಿ ಇರುವ ಬಿಇಒ ಕಚೇರಿ ಹಾಗೂ ಹೈಟೆಕ್‌ ಸರ್ಕಾರಿ ಶಾಲೆ ಕಟ್ಟಡದ ಹಿಂಭಾಗದ ರಸ್ತೆಗೆ ಹೊಂದಿಕೊಂಡೇ ಎರಡು ಪರಿವರ್ತಕಗಳಿದ್ದು, ಅಪಾಯದ ಆತಂಕ ಎದುರಾಗಿದೆ. ಈ ರಸ್ತೆ ಕಿರಿದಾಗಿದ್ದು, ರಸ್ತೆಗೆ ಅಂಟಿಕೊಂಡೇ ವಿದ್ಯುತ್ ಕಂಬಗಳು ಇರುವುದರಿಂದ ದಾರಿಹೋಕರು ಜೀವ ಕೈಯಲ್ಲಿ ಹಿಡಿದು ಸಂಚರಿಸುವಂತೆ ಆಗಿದೆ.

ಕೋಟೆ ಪ್ರದೇಶದಲ್ಲಿ ರಸ್ತೆಗಳು ಕಿರಿದಾಗಿದ್ದು, ಎಲ್ಲಾ ಕಡೆ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ. ರಸ್ತೆ ನಿರ್ಮಿಸುವಾಗ ವಿದ್ಯುತ್ ಕಂಬ ತೆರವುಗೊಳಿಸದೆ ಕಾಮಗಾರಿ ಪೂರ್ಣಗೊಳಿಸಿದ್ದಾರೆ. ಇದರಿಂದ ಮಕ್ಕಳು ವಿದ್ಯುತ್ ಕಂಬ ಮುಟ್ಟಿದರೆ ವಿದ್ಯುತ್ ಪ್ರವಹಿಸುವ ಆತಂಕ ಇದೆ. ಮಳೆಗಾಲದಲ್ಲಿ ಈ ಅಪಾಯ ಮತ್ತಷ್ಟು ಹೆಚ್ಚಲಿದೆ.

‘ಕಾಂಕ್ರೀಟ್ ರಸ್ತೆ ಮಾಡುವಾಗ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಿ ರಸ್ತೆ ನಿರ್ಮಿಸಬೇಕು. ಆದರೆ ಗುತ್ತಿಗೆದಾರರು ಕೆಲಸ ಆದರೆ ಸಾಕು ಎಂದು ಕಂಬ ತೆರವು ಮಾಡದೆ ಕಾಂಕ್ರೀಟ್ ಹಾಕುತ್ತಾರೆ. ಅವರಿಗೆ ಕೆಲಸ ಮುಗಿಸಿ ಹಣ ಪಡೆಯುವುದು ಮುಖ್ಯವೇ ಹೊರತು ಜನರ ಪ್ರಾಣವಲ್ಲ. ಬೆಸ್ಕಾಂ ಅಧಿಕಾರಿಗಳೂ ಈ ಬಗ್ಗೆ ಗಮನ ಹರಿಸುವುದಿಲ್ಲ’ ಎಂದು ಕೋಟೆ ಪ್ರದೇಶದ ನಿವಾಸಿಗಳಾದ ರಮೇಶ್, ತಿಮ್ಮಪ್ಪ ಹಾಗೂ ಹರೀಶ್ ಹೇಳುತ್ತಾರೆ.

ಶಿಥಿಲ ವಿದ್ಯುತ್ ಕಂಬ ಬದಲಾಯಿಸಿ

ಸುವರ್ಣ ಬಸವರಾಜ್‌

ಹಿರಿಯೂರು: ಮುಂಗಾರು ಮಳೆ–ಗಾಳಿ ಆರಂಭವಾಗುವುದರ ಒಳಗೆ ಶಿಥಿಲಗೊಂಡಿರುವ ಹಾಗೂ ಬಾಗಿರುವ ವಿದ್ಯುತ್ ಕಂಬಗಳನ್ನು ಬದಲಾಯಿಸದಿದ್ದಲ್ಲಿ ಅಪಾಯಕ್ಕೆ ಆಹ್ವಾನ ನೀಡಿದಂತೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಕೇಳಿಬರುತ್ತಿದೆ.

ತಾಲ್ಲೂಕಿನ ಮಸ್ಕಲ್ ಮಟ್ಟಿ ಗ್ರಾಮದಲ್ಲಿ ನಿತ್ಯ ಹತ್ತಾರು ಮಕ್ಕಳು ಶಾಲೆಗೆ ಹೋಗಿ–ಬರುವ ರಸ್ತೆಯಲ್ಲಿ ವಿದ್ಯುತ್ ಕಂಬವೊಂದು ಅಸ್ಥಿಪಂಜರದಂತಾಗಿದೆ. ಬೀರೇನಹಳ್ಳಿಯ ಹೊಲವೊಂದರಲ್ಲಿ ವಾಲಿರುವ ಕಂಬವೊಂದನ್ನು ಅದ್ಯಾವ ಶಕ್ತಿ ಬೀಳದಂತೆ ತಡೆಹಿಡಿದಿದೆ ಎಂಬಂತೆ ಕಾಣುತ್ತಿದೆ.

‘ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಬಿರುಗಾಳಿಯಿಂದ ಕೂಡಿದ ಮಳೆಗೆ ಜವನಗೊಂಡನಹಳ್ಳಿ ಹೋಬಳಿಯಲ್ಲಿ 60ಕ್ಕೂ ಹೆಚ್ಚು ಕಂಬಗಳು ಬಿದ್ದಿದ್ದವು. ಈ ವರ್ಷ ಮಾರ್ಚ್ 20ರಂದು ಸುರಿದ ಮಳೆಗೆ ಆದಿವಾಲ, ಟಿಜಿ ಕಾಲೊನಿಗಳಲ್ಲಿ ಹಲವು ವಿದ್ಯುತ್ ಕಂಬಗಳು, ಪರಿವರ್ತಕಗಳು ಧರೆಗೆ ಉರುಳಿದ್ದವು. ‘ಬೆಸ್ಕಾಂ’ಗೆ ದೂರು ನೀಡಿದರೆ ಸರತಿ ಸಾಲಿನ ಮೇಲೆ ಸರಿಪಡಿಸುತ್ತೇವೆ ಎನ್ನುತ್ತಾರೆ. ಹೆಚ್ಚು ಅಪಾಯಕಾರಿ ಆಗಿರುವ ಕಡೆ ಮೊದಲು ಕ್ರಮ ಕೈಗೊಳ್ಳಬೇಕು’ ಎನ್ನುತ್ತಾರೆ ಸೂರಪ್ಪನಹಟ್ಟಿ ಯುವ ರೈತ ಕೃಷ್ಣ.

‘ಮಳೆ–ಗಾಳಿಗೆ ವಿದ್ಯುತ್ ಕಂಬಗಳು, ಪರಿವರ್ತಕಗಳು ಬೀಳುವುದು ಸಾಮಾನ್ಯ ಸಂಗತಿ. ವಿದ್ಯುತ್ ಮಾರ್ಗ ನಿರ್ಮಿಸುವಾಗಿನ ದೋಷ, ಕಳಪೆ ಕಂಬಗಳು ಇದಕ್ಕೆ ಕಾರಣ. ಕಂಬಗಳು ಉರುಳಿ ಬಿದ್ದು, ವಾರಗಟ್ಟಲೆ ವಿದ್ಯುತ್ ಸಂಪರ್ಕ ಇಲ್ಲದೆ ಗ್ರಾಮೀಣ ಪ್ರದೇಶದ ಜನ ನೋವು ಅನುಭವಿಸಿದ್ದು ಇದೆ. ಕಂಬಗಳು ಬಿದ್ದ ಮೇಲೆ ಹೊಸ ಕಂಬಗಳನ್ನು ತರಿಸಿ, ಅಳವಡಿಸುವ ಬದಲು, ಬೆಸ್ಕಾಂ ಇಲಾಖೆಯವರು ತುರ್ತು ನಿರ್ವಹಣೆಗೆಂದು ಏಕೆ ಕಂಬಗಳನ್ನು ದಾಸ್ತಾನು ಇಡಬಾರದು’ ಎಂದು ಪ್ರಶ್ನಿಸುತ್ತಾರೆ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT