ಚಿತ್ರದುರ್ಗ: ನಗರದ ಸ್ನೇಹಜೀವಿ ಆಟೊ ಚಾಲಕರ ಸಂಘದಿಂದ ನಗರ ವ್ಯಾಪ್ತಿಯಲ್ಲಿ ಗರ್ಭಿಣಿಯರಿಗೆ ಆಟೊ ಉಚಿತ ಪ್ರಯಾಣ ಸೇವೆ ಪ್ರಾರಂಭಿಸಲಾಗಿದೆ. ಈ ಕಾರ್ಯಕ್ಕೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬುಧವಾರ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಚಾಲನೆ ನೀಡಿದರು.
‘ಆಟೊ ಚಾಲಕರು, ಮಾಲೀಕರು ಮಾನವೀಯ ಕಾರ್ಯಕ್ಕೆ ಮುಂದಾಗಿದ್ದಾರೆ. ಗರ್ಭಿಣಿಯರ ಮನೆ ಬಾಗಿಲಿನಿಂದ ಆಸ್ಪತ್ರೆವರೆಗೂ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದ್ದಾರೆ. ಇದು ಎಲ್ಲರಿಗೂ ಮಾದರಿಯಾಗಿದೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.
‘ಆಟೊ ಚಾಲಕರ ಸಂಘದಿಂದ ನಗರ ವ್ಯಾಪ್ತಿಯಲ್ಲಿ ದಿನದ 24 ಗಂಟೆ ಸೇವೆ ನೀಡಲಾಗುತ್ತದೆ. ಸಂಘದಲ್ಲಿ ನೂರು ಆಟೊ ಚಾಲಕರು, ಮಾಲೀಕರು ಸದಸ್ಯರಾಗಿದ್ದಾರೆ. ಅವರೆಲ್ಲ ಸೇವೆ ನೀಡಲು ಬದ್ಧರಾಗಿದ್ದಾರೆ’ ಎಂದು ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ ತಿಳಿಸಿದರು.
‘ನಗರದಲ್ಲಿ ಅಂದಾಜು 4,000 ಆಟೊಗಳಿದ್ದು, ದುಡಿಮೆಯ ಪ್ರಮಾಣ ಕಡಿಮೆಯಾಗಿದೆ. ಆದ್ದರಿಂದ ಹೊಸ ಆಟೊಗಳಿಗೆ ಪರವಾನಗಿ ನೀಡಬಾರದು’ ಎಂದು ಮನವಿ ಸಲ್ಲಿಸಿದರು.