ಮಂಗಳವಾರ, 28 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇರುಮುಡಿ ಹೊತ್ತು ಪುನೀತರಾದ ಭಕ್ತರು

ಅಯ್ಯಪ್ಪಸ್ವಾಮಿ ದೇಗುಲದಲ್ಲಿ ಅವಕಾಶ, ಕಣ್ಮನ ಸೆಳೆದ ದೀಪೋತ್ಸವ
Last Updated 14 ಜನವರಿ 2021, 15:50 IST
ಅಕ್ಷರ ಗಾತ್ರ

ಚಿತ್ರದುರ್ಗ: ಇಲ್ಲಿನ ಮೆದೇಹಳ್ಳಿಯ ಅಯ್ಯಪ್ಪಸ್ವಾಮಿ ದೇಗುಲದಲ್ಲಿ ಸಂಕ್ರಾಂತಿಯ ದಿನವಾದ ಗುರುವಾರ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಇರುಮುಡಿ ಹೊತ್ತು ಹದಿನೆಂಟು ಮೆಟ್ಟಿಲು ಹತ್ತಿ ಪುನೀತರಾದರು.

ಕೋವಿಡ್‌ ಹಿನ್ನೆಲೆಯಲ್ಲಿ ಕೇರಳದ ಶಬರಿಮಲೆಯ ಅಯ್ಯಪ್ಪಸ್ವಾಮಿ ದೇಗುಲದಲ್ಲಿ ಹಲವು ಕಠಿಣ ನಿಯಮಗಳನ್ನು ವಿಧಿಸಲಾಗಿದೆ. ಹೀಗಾಗಿ, ಚಿತ್ರದುರ್ಗ ಸೇರಿದಂತೆ ರಾಜ್ಯದ ಹಲವು ದೇಗುಲಗಳಲ್ಲಿ ಹದಿನೆಂಟು ಮೆಟ್ಟಿಲು ಹತ್ತಿ, ಇರುಮುಡಿ ಸಮರ್ಪಿಸಿ ವ್ರತ ಸಮಾಪ್ತಿಗೊಳಿಸಲು ಅಯ್ಯಪ್ಪಸ್ವಾಮಿ ಸೇವಾ ಸಮಾಜದ ರಾಷ್ಟ್ರೀಯ ಮಂಡಳಿ ಅವಕಾಶ ಕಲ್ಪಿಸಿದೆ.

ಮಕರ ಸಂಕ್ರಮಣದ ಅಂಗವಾಗಿ ಅಯ್ಯಪ್ಪಸ್ವಾಮಿಗೆ ಪುಷ್ಪ ಹಾಗೂ ಆಭರಣಗಳಿಂದ ಅಲಂಕಾರ ಮಾಡಲಾಗಿತ್ತು. ಆನೆಬಾಗಿಲ ಗಣಪತಿ ದೇವಸ್ಥಾನದ ಆವರಣದಿಂದ ಸ್ವಾಮಿಯ ಆಭರಣಗಳ ಮೆರವಣಿಗೆ ನಡೆಯಿತು. ಅಲಂಕೃತ ಸಾರೋಟಿನಲ್ಲಿ ಹೊರಟ ಮೆರವಣಿಗೆ ಗಾಂಧಿ ವೃತ್ತ, ಮೆದೇಹಳ್ಳಿ ರಸ್ತೆ ಮಾರ್ಗವಾಗಿ ಸಾಗಿ ಬುಧವಾರ ರಾತ್ರಿ ದೇವಸ್ಥಾನ ತಲುಪಿತು.

ಹಬ್ಬದ ಅಂಗವಾಗಿ ಗುರುವಾರ ಬೆಳಿಗ್ಗೆಯಿಂದಲೇ ಪೂಜಾ ಕೈಂಕರ್ಯಗಳು ನೆರವೇರಿದವು. ನೂರಾರು ಭಕ್ತರು ಸರತಿ ಸಾಲಿನಲ್ಲಿ ಬಂದು ಸ್ವಾಮಿಯ ದರ್ಶನ ಪಡೆದರು. ಅಯ್ಯಪ್ಪಸ್ವಾಮಿಯ ನೂರಾರು ಮಾಲಾಧಾರಿಗಳು ಇರುಮುಡಿ ಹೊತ್ತು ಹದಿನೆಂಟು ಮೆಟ್ಟಿಲು ಏರಿದರು. ಐನೂರಕ್ಕೂ ಹೆಚ್ಚು ಅಯ್ಯಪ್ಪ ಮಾಲಾಧಾರಿಗಳು ಪಡಿ ಹತ್ತಿದರು. ಆಂಧ್ರಪ್ರದೇಶ, ಮಹಾರಾಷ್ಟ್ರ, ಗೋವಾ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಿಂದಲೂ ಭಕ್ತರು ಆಗಮಿಸಿದ್ದರು. ಪಡಿ ಏರಲು ಜ.19 ರವರೆಗೆ ಅವಕಾಶವಿದೆ.

ದೇಗುಲದ ಆವರಣದಲ್ಲಿ ಸಂಜೆ ಲಕ್ಷ ದೀಪೋತ್ಸವ ನೆರವೇರಿತು. ಸಾವಿರಾರು ಭಕ್ತರು ದೇಗುಲಕ್ಕೆ ಭೇಟಿ ನೀಡಿ ದೀಪೋತ್ಸವಕ್ಕೆ ಸಾಕ್ಷಿಯಾದರು. ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ಶರಣ್ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT