ಚಿತ್ರದುರ್ಗ: ಹೆಜ್ಜೆ ಇಟ್ಟರೆ ಗೆಜ್ಜೆ, ಕೈಯಿಟ್ಟರೆ ತಾಳ, ಕೂತರೆ ಮೃದಂಗ, ನಿಂತರೆ ಮದ್ದಳೆ, ಕಣ್ಣರಳಿಸಿದರೆ ಹಸ್ತಪ್ರತಿಗಳು, ಭಾಗವತಿಕೆ, ಹಾಡುಗಾರಿಕೆ, ಸೋಬಾನೆ ಪದಗಳ ಚಿತ್ತಾರ... ಮನೆ ತುಂಬೆಲ್ಲಾ ಬಯಲಾಟದ ಉಸಿರು. ಸಣ್ಣ ವಯಸ್ಸಿನಲ್ಲೇ ಜಾನಪದ ಸಾಂಗತ್ಯದಲ್ಲಿ ಬೆಳೆದು ಬಂದ ಬಿ.ಎಂ.ಗುರುನಾಥ ಅವರು ಈಗ ಜಾನಪದ ಕ್ಷೇತ್ರದ ಭಂಡಾರವಾಗಿ ಯುವಜನರಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದಾರೆ.

ನಗರದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿರುವ ಗುರುನಾಥ ಅವರು ನಡೆದು ಬಂದ ಹಾದಿಯಲ್ಲಿ ಬಯಲಾಟದ ರಸಪಾಕವಿದೆ. 4ನೇ ತರಗತಿಯ ಬಾಲಕನಾಗಿದ್ದಾಗಲೇ ವೇಷ ಹಾಕಿದ್ದ ಇವರು ತನುಮನದಲ್ಲಿ ಬಯಲಾಟವನ್ನೇ ತುಂಬಿಕೊಂಡು ಬೆಳೆದಿದ್ದಾರೆ. ಅಧ್ಯಯನ ಹಾದಿಯಲ್ಲೂ ಜಾನಪದವನ್ನೇ ಆಯ್ಕೆ ಮಾಡಿಕೊಂಡು ಅರಿವಿನ ಹಾದಿಯನ್ನು ವಿಸ್ತಾರ ಮಾಡಿಕೊಂಡಿದ್ದಾರೆ.

ಬಯಲಾಟದ ಬಗ್ಗೆ ಆಳವಾದ ಜ್ಞಾನ ಹೊಂದಿರುವ ಗುರುನಾಥ ಅವರು ಸಂಶೋಧಕರಾಗಿಯೂ ಬಯಲಾಟದ ಹೊಸ ಸಾಧ್ಯತೆಗಳನ್ನು ತೆರೆದಿಟ್ಟಿದ್ದಾರೆ. ಕವಿಯಾಗಿ, ಸಂಘಟಕರಾಗಿ, ಸಂಘ– ಸಂಸ್ಥೆಗಳ ಪದಾಧಿಕಾರಿಯಾಗಿ ಹೊಸ ಪೀಳಿಗೆಗೆ ಪ್ರೇರಣೆಯಾಗಿದ್ದಾರೆ. ಇಂದಿಗೂ ಹೆಜ್ಜೆ, ಗೆಜ್ಜೆ ಒಡನಾಟದಲ್ಲೇ ಇರುವ ಅವರು ಜಾನಪದ ಜೀವಿಯಾಗಿ ಗುರುತಿಸಿಕೊಂಡಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಹೆಚ್ಚುವರಿ ಹುದ್ದೆಯನ್ನೂ ನಿರ್ವಹಿಸುತ್ತಿರುವ ಗುರುನಾಥರು ಕಳೆದೊಂದು ವರ್ಷದಿಂದ ಜಿಲ್ಲೆಯಲ್ಲಿ ಕಲಾ ವಾತಾವರಣ ಸೃಷ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈಚೆಗೆ ನಡೆದ ‘ಯುವ ಸೌರಭ’ ಉತ್ಸವದಲ್ಲಿ ವೇಷ ತೊಟ್ಟು ಹೆಜ್ಜೆ ಹಾಕಿದ ಅವರು ತಮ್ಮೊಳಗಿನ ಜಾನಪದ ಜೀವನೋತ್ಸಾಹವನ್ನು ಯುವಪೀಳಿಗೆಯ ಮುಂದೆ ತೆರೆದಿಟ್ಟಿದ್ದಾರೆ.

ತಾಲ್ಲೂಕಿನ ಬೆಳಘಟ್ಟ ಗ್ರಾಮದ ಬಿ.ಎನ್.ಮಲ್ಲಯ್ಯ– ಕಮಲಮ್ಮ ದಂಪತಿಯ ಪುತ್ರರಾದ ಗುರುನಾಥರ ಎದೆಯಲ್ಲಿ ಕುಟುಂಬ ಸದಸ್ಯರೇ ಜಾನಪದ ಜ್ಯೋತಿ ಬೆಳಗಿಸಿದ್ದಾರೆ. ತಾತ ನಾಗಯ್ಯ ಹಾಗೂ ತಂದೆಯ ಚಿಕ್ಕಪ್ಪ ಮಾರಯ್ಯ ಅವರು ಈ ಭಾಗದ ಖ್ಯಾತನಾಮ ಬಯಲಾಟ ಕಲಾವಿದರಾಗಿ ಗುರುತಿಸಿಕೊಂಡಿದ್ದರು. ನಾಗಯ್ಯ ಸ್ತ್ರೀ ಪಾತ್ರಗಳಲ್ಲಿ ಅಪಾರ ಮೆಚ್ಚುಗೆ ಗಳಿಸಿದ್ದರು. ಮಾರಯ್ಯ ಅವರು ಮದ್ದಳೆಯಲ್ಲಿ ಬಲು ಪ್ರಸಿದ್ಧಿ ಪಡೆದಿದ್ದರು.

ತಂದೆ ಮಲ್ಲಯ್ಯ ಅವರಿಗೆ ಅಂಗವೈಕಲ್ಯವಿದ್ದ ಕಾರಣಕ್ಕೆ ವೇಷ ತೊಡಲಿಲ್ಲ. ಆದರೆ, ಮೇಳದಲ್ಲಿ ಹಾಡುಗಾರರಾಗಿ, ಮದ್ದಳೆ ಪಟುವಾಗಿ ಗುರುತಿಸಿಕೊಂಡಿದ್ದರು. ಇಂಗ್ಲಿಷ್ ಶಿಕ್ಷಕರೂ ಆಗಿದ್ದ ಮಲ್ಲಯ್ಯ ಬಯಲಾಟ ಹಸ್ತಪ್ರತಿಗಳನ್ನು ನಕಲು ಮಾಡಿ ಸಂರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಬಯಲಾಟದ ಬೆಳಕಲ್ಲೇ ಕಣ್ಣರಳಿಸಿದ ಗುರುನಾಥರು ಬಾಲ್ಯದಲ್ಲೇ ‘ಕರಿಭಂಟನ ಕಾಳಗ’ ಬಯಲಾಟದಲ್ಲಿ ಗೋಪಾಲಕೃಷ್ಣನ ಪಾತ್ರ ಹಾಕಿ ಭಲೆ ಎನಿಸಿಕೊಂಡಿದ್ದರು. ‘ಮದಕರಿ ನಾಯಕ’ ನಾಟಕದಲ್ಲಿ ದಳವಾಯಿ ಮುದ್ದಣ್ಣನಾಗಿ ಅಭಿನಯಿಸಿದರು.

ಹಾಸನದ ಹೇಮಗಂಗೋತ್ರಿಯ ಕನ್ನಡ ಎಂ.ಎ ಸ್ನಾತಕೋತ್ತರ ಪದವಿಯಲ್ಲಿ ಐಚ್ಛಿಕ ವಿಷಯವನ್ನಾಗಿ ಜಾನಪದವನ್ನೇ ಸ್ವೀಕರಿಸಿದರು. ನಂತರ ಸಂಶೋಧಯತ್ತ ಹೊರಳಿದ ಅವರು ಪಿಎಚ್.ಡಿಯಲ್ಲಿ ‘ಬಯಲಾಟದ ಹಸ್ತಪ್ರತಿಗಳ ಅಧ್ಯಯನ’ ಪ್ರೌಢಪ್ರಬಂಧ ಮಂಡಿಸಿದರು. ಅದು ‘ಬಯಲಾಟದ ಹಸ್ತಪ್ರತಿಗಳ ಅಂತರ್ದರ್ಶನ’ ಕೃತಿಯಾಗಿಯೂ ಪ್ರಕಟಗೊಂಡಿತು.

ಸಂಶೋಧನೆಯ ಹಾದಿಯಲ್ಲಿ ವಿದ್ವತ್ ಪರಂಪರೆಯ ಖ್ಯಾತನಾಮರ ಜೊತೆ ಉತ್ತಮ ಒಡನಾಟ ಹೊಂದಿರುವ ಇವರು ರಾಜ್ಯದ ವಿವಿಧೆಡೆ ಉಪನ್ಯಾಸ ನೀಡಿ ಸೈ ಎನಿಸಿಕೊಂಡಿದ್ದಾರೆ.

2009ರಲ್ಲಿ ಕನ್ನಡ ಉಪನ್ಯಾಸಕರಾಗಿ ನೇಮಕಗೊಂಡಿದ್ದಾರೆ. ಯಕ್ಷಗಾನ– ಬಯಲಾಟ ಅಕಾಡೆಮಿ ಸದಸ್ಯರಾಗಿಯೂ ಕೆಲಸ ಮಾಡಿದ್ದು, ಬಯಲಾಟದ ಎಲ್ಲೆಯನ್ನು ವಿಸ್ತರಿಸಲು ಹವಣಿಸಿದ್ದಾರೆ.

ಆಕಾಶವಾಣಿಯಲ್ಲಿ ಬಯಲಾಟ ಹಾಡುಗಾರಿಕೆ ಪ್ರಸ್ತುತಪಡಿಸಿರುವ ಬಿ.ಎಂ.ಗುರುನಾಥರಿಗೆ ರಾಜ್ಯದ ವಿವಿಧೆಡೆ ಗೌರವ, ಪ್ರಶಸ್ತಿಗಳು ಅರಸಿ ಬಂದಿವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಸಿಕ್ಕಿರುವ ಹೆಚ್ಚುವರಿ ಹೊಣೆಗಾರಿಕೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತಿರುವ ಅವರು ಕೋಟೆನಾಡಿನ ಕಲಾಕುಟುಂಬಕ್ಕೆ ಶಕ್ತಿಯಾಗಿ ನಿಂತಿದ್ದಾರೆ.

ಬಯಲಾಟವನ್ನು ಮನೆಯ ಅಂಗಳದಲ್ಲೇ ಅನುಭವಿಸಿದ್ದೆ. ನಂತರ ಶಾಲೆ ಕಾಲೇಜು ವಿ.ವಿ.ಯಲ್ಲಿ ಅಧ್ಯಯನಗೈದೆ. ಜಾನಪದ ಕಲೆಯ ಒಡನಾಟಕ್ಕೆ ಅಂತ್ಯವಿಲ್ಲ ಅದು ಜೀವನೋತ್ಸಾಹದ ಹಾದಿ ಬುದುಕಿನ ಭಾಗ
– ಬಿ.ಎಂ.ಗುರುನಾಥ, ಕಲಾವಿದ ಉಪನ್ಯಾಸಕ

ಕವಿ ಸಂಘಟಕ

ಕವಿಯಾಗಿಯೂ ಗುರುತಿಸಿಕೊಂಡಿರುವ ಅವರು ‘ನಕ್ಷತ್ರ ತಬ್ಬಿ ಮಲಗಿದ ಹೊತ್ತು’ ಕವನ ಸಂಕಲನ ಹೊರತಂದಿದ್ದಾರೆ. ದಸರಾ ಕವಿಗೋಷ್ಠಿಯಲ್ಲಿ ಕವಿತಾ ವಾಚನ ಮಾಡಿದ್ದಾರೆ. ಜಾನಪದ ಕತೆಗಳು ಹಾಸ್ಯ ಕೃತಿಯೂ ಪ್ರಕಟಗೊಂಡಿದೆ. ಜಿಲ್ಲಾ ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಮೂಡಲಪಾಯ ಯಕ್ಷಗಾನ ವಿಶ್ವಕೋಶ ಸಮಿತಿಯ ಸದಸ್ಯರಾಗಿಯೂ ಕೆಲಸ ಮಾಡುತ್ತಿದ್ದಾರೆ. ಜಾನಪದ ಬಯಲಾಟ ವಿಚಾರದಲ್ಲಿ 50ಕ್ಕೂ ಹೆಚ್ಚು ಲೇಖನ ಬರೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.